ಸಿರುಗುಪ್ಪ: ತಾಲೂಕಿನಲ್ಲಿ ಸುಮಾರು ಆರುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬ್ಯಾಡಗಿ, ಸಿಜೆಂಟಾ, ಗುಂಟೂರು ಒಣ ಮೆಣಸಿನಕಾಯಿ ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಆದರೆ ಕೋವಿಡ್ ವೈರಸ್‌ನಿಂದಾಗಿ ಮೆಣಸಿನಕಾಯಿ ಮುಖ್ಯ ಮಾರುಕಟ್ಟೆ ಬ್ಯಾಡಗಿ ಮುಚ್ಚಿದೆ. ಆದರೆ ಮೆಣಸಿನಕಾಯಿ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲದ್ದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಹೆಚ್ಚಿನ ಮಳೆಯಿಂದ ತಾಲೂಕಿನಲ್ಲಿ ಒಣ ಮೆಣಸಿನಕಾಯಿ ಬೆಳೆದ ರೈತರಿಗೆ ತೊಂದರೆಯಾಗಿದೆ. ಅಲ್ಲಲ್ಲಿ ಗಿಡಗಳು ಒಣಗಿ ಬೆಳೆಗೆ ವಿವಿಧ ರೀತಿಯ ರೋಗಗಳು ಕಾಣಿಸಿಕೊಂಡಿದ್ದವು. ಬೆಳವಣಿಗೆ ಸಹ ಸರಿಯಾಗಿ ಆಗಿರಲಿಲ್ಲ. ಆದರೂ ಮೆಣಸಿನಕಾಯಿ ಬೆಳೆಯ ಬೆಳವಣಿಗೆಗೆ ವಾತಾವರಣ ಈಬಾರಿ ಅನುಕೂಲ ಮಾಡಿಕೊಟ್ಟಿತ್ತು. ಇದರಿಂದಾಗಿ ಒಂದು ಎಕರೆಗೆ 18 ರಿಂದ 23 ಕ್ವಿಂಟಾಲ್ ಇಳುವರಿ ಬಂದಿದ್ದು, ಉತ್ತಮ ಬೆಲೆ ಇದ್ದರೂ ಬ್ಯಾಡಗಿ ಮಾರುಕಟ್ಟೆ ಮುಚ್ಚಿರುವುದರಿಂದ ಹೊಲಗಳಲ್ಲಿಯೇ ಮೆಣಸಿನಕಾಯಿ ರಾಶಿಹಾಕಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕೆಲವು ರೈತರು ಮೆಣಸಿನಕಾಯಿಯನ್ನು ಬಳ್ಳಾರಿ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಆದರೆ ಕೋವಿಡ್ ಹಾವಳಿಯಿಂದಾಗಿ ಬಳ್ಳಾರಿ ಮತ್ತು ಹಾವೇರಿ ಜಿಲ್ಲೆ ಬ್ಯಾಡಗಿಗೆ ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ಮತ್ತು ಕೋಲ್ಡ್‌ಸ್ಟೋರೇಜ್ ಗಳಿಗೆ ಕೊಂಡೊಯ್ಯಲು ದಾರಿ ಮಧ್ಯದಲ್ಲಿ ನಿರ್ಬಂಧ ಹೆಚ್ಚಾಗಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಬ್ಯಾಡಗಿಯಲ್ಲಿ ಮೆಣಸಿನಕಾಯಿ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಮೆಣಸಿನಕಾಯಿ ತೆಗೆದುಕೊಂಡು ಹೋದ ರೈತರು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುವ ಪರಿಸ್ಥಿತಿ ಇದೆ.
ತಾಲೂಕಿನಲ್ಲಿ ಆರುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ರೈತರು ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಗ್ರಹಿಸಿಟ್ಟುಕೊಳ್ಳಲು ಅನುಕೂಲವಿಲ್ಲ. ಆದ್ದರಿಂದ ಸರ್ಕಾರ ತಾಲೂಕಿನಲ್ಲಿ ಮೆಣಸಿಕನಾಯಿ ಸಂಗ್ರಹಕ್ಕಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಬೇಕು.
ವಾ.ಹುಲುಗಯ್ಯ,
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕಾಧ್ಯಕ್ಷ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಲಾರಿಗಳ ಮಾಲೀಕರು ಬ್ಯಾಡಗಿಗೆ ಮೆಣಸಿನಕಾಯಿ ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ತಾಲೂಕಿನ ರೈತರು ತಮ್ಮ ಹೊಲಗಳಲ್ಲಿಯೇ ಮೆಣಸಿನಕಾಯಿ ಸಂಗ್ರಹಿಸಿಟ್ಟಿದ್ದಾರೆ.
ಶಿವಕುಮಾರ, ಸಿರಿಗೇರಿ ಕ್ರಾಸ್‌ನ
ಮೆಣಸಿನಕಾಯಿ ಬೆಳೆದ ರೈತ
ಆರ್.ಬಸವರೆಡ್ಡಿ ಕರೂರು.