ಸಿರುಗುಪ್ಪ: ಪ್ರವಚನ ರಂಗಭೂಮಿ, ಸಂಗೀತ, ಧಾರ್ಮಿಕ ಕ್ಷೇತ್ರ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ರಂಗದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗವಾಯಿ ತಿಳಿಸಿದರು.
ತಾಲೂಕಿನ ಸಿರಿಗೇರಿ ಸ.ಸಂ.ಪ.ಪೂ.ಕಾಲೇಜಿನಲ್ಲಿ ಕ.ಸಾ.ಪ ತಾ.ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಂಡಿತ ಪುಟ್ಟರಾಜ ಗವಾಯಿಗಳು ಹಾನಗಲ್ ಕುಮಾರ ಶಿವಯೋಗಿಗಳ ಮತ್ತು ಲಿಂಗೈಕ್ಯ ಪಂಡಿತ ಪಂಚಾಕ್ಷರಿ ಗವಾಯಿಗಳ ಗರಡಿಯಲ್ಲಿ ಬೆಳೆದ ಶಿಷ್ಯರಾಗಿದ್ದು, 1944ರಲ್ಲಿ ಪಂಡಿತ ಪಂಚಾಕ್ಷರಿ ಗವಾಯಿಗಳು ಲಿಂಗೈಕ್ಯರಾದ ನಂತರ ವೀರೇಶ್ವರ ಪುಣ್ಯಾಶ್ರಮಕ್ಕೆ ಪೀಠಾಧ್ಯಕ್ಷರಾದರು.
ಯಾವುದೇ ಜಾತಿಬೇಧವಿಲ್ಲದೆ ಅಂಧ, ಅನಾಥ ಮಕ್ಕಳಿಗೆ ತಮ್ಮ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿಸುವ ಮೂಲಕ ಅಂಧ, ಅನಾಥರು ಸ್ವತಂತ್ರವಾಗಿ ಬದುಕಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ನವ ಸಮಾಜ ನಿರ್ಮಿಸಿದ ಸಂಗೀತ ಶಿಲ್ಪಿ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ನಾಡಿನ ಅನೇಕ ಹೆಸರಾಂತ ಕಲಾವಿದರು ಪಳಗಿದ್ದಾರೆ.
ಆಶ್ರಮದ ಮಕ್ಕಳನ್ನು ಸಲುಹಲು ಪುಟ್ಟರಾಜ ಅಜ್ಜನವರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಭಿಕ್ಷಾಟನೆ ಮಾಡುವ ಮೂಲಕ ಅಂಧರಿಗೆ ಶಿಕ್ಷಣ ಮತ್ತು ಅನ್ನದಾಸೋಹ ಒದಗಿಸುತ್ತಾ ಸಾಮಾಜಿಕ ಕಳಕಳಿ ಹೊಂದಿದ್ದರು. ತ್ರಿಭಾಷಾ ಪಂಡಿತರಾಗಿರುವ ಅಜ್ಜನವರು ಮೂರು ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಶರಣಬಸವೇಶ್ವರ ಪುರಾಣ, ಚನ್ನಬಸವ ಸ್ವಾಮೀಜಿ ಪುರಾಣ, ಅಕ್ಕಮಹಾದೇವಿ ಪುರಾಣ, ಗವಿಸಿದ್ಧೇಶ್ವರ ಪುರಾಣ, ವೀರಭದ್ರೇಶ್ವರ ಪುರಾಣ, ಹೇಮರೆಡ್ಡಿ ಮಲ್ಲಮ್ಮ ಪುರಾಣ, ದಾನಮ್ಮದೇವಿ ಪುರಾಣ, ಚಿಕೇನುಕೊಪ್ಪದ ಚನ್ನವೀರ ಶರಣರ ಪುರಾಣ, ನಾಲತ್ತವಾಡ ವೀರೇಶ್ವರ ಪುರಾಣ ಮುಂತಾದವುಗಳಾಗಿವೆ ಎಂದರು.
ತಮ್ಮ ಸಾಧನೆಯ ಬಲದಿಂದ ಅಂಧರ ಬಾಳಿಗೆ ಬೆಳಕಾಗಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಪುಟ್ಟಯ್ಯಜ್ಜನವರು ಹಾರ್ಮೋನಿಯಂ, ತಬಲ, ವಯಲಿನ್, ಸಾರಂಗ, ಮುಂತಾದ ವಾದ್ಯಗಳನ್ನು ಲೀಲಾ ಜಾಲವಾಗಿ ನುಡಿಸುತ್ತಿದ್ದರು. ಇವರ ಸಾಧನೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳು ಅರಸಿ ಬಂದಿದ್ದು, ನಾದ ಬ್ರಹ್ಮರೆಂದೇ ಖ್ಯಾತರಾದ ನಡೆದಾಡುವ ದೇವರೆಂದೇ ಜನರಿಂದ ಕರೆಯಲ್ಪಟ್ಟವರು. ಇವರ ಸಾಧನೆ ಇಂದಿಗೂ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದು ಹೇಳಿದರು.
ಕ.ಸಾ.ಪ ತಾ.ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಪ್ರಾಂಶುಪಾಲ ಎಚ್.ಬಿ.ವಿಶ್ವನಾಥಗೌಡ ಮಾತನಾಡಿದರು. ಜಿ.ಪಂ ಸದಸ್ಯೆ ಎಂ.ಎಸ್. ರತ್ನಮ್ಮ, ತಾ.ಪಂ ಸದಸ್ಯ ರೇಣುಕಪ್ಪ, ಎಪಿಎಂಸಿ ಸದಸ್ಯ ಎಚ್.ಮಲ್ಲನಗೌಡ, ವಿ.ಎಸ್.ಎಸ್.ಎನ್ ಅಧ್ಯಕ್ಷ ಬಿ.ನಾಗೇಂದ್ರ, ಮುಖಂಡರಾದ ಸಿ.ಎಂ.ನಾಗರಾಜ, ಬಿ.ಅಮರೇಗೌಡ, ಎಸ್.ಎಂ.ಅಡಿವೆಯ್ಯಸ್ವಾಮಿ ಇದ್ದರು.