ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ ಒಂದು ತಿಂಗಳಿನಿಂದ ನೀರು ಬಾರದ ಕಾರಣ ಇಲ್ಲಿಗೆ ಹೆರಿಗೆ ಮತ್ತು ಸಂತಾನ ಹರಣ ಚಿಕಿತ್ಸೆಗೆ ಬರುವ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ.
ಶೌಚಾಲಯಗಳು ನೀರಿಲ್ಲದೆ ಗಬ್ಬು ನಾರುತ್ತಿವೆ. ಗ್ರಾಮ ಪಂಚಾಯಿತಿ ವತಿಯಿಂದ ಆಸ್ಪತ್ರೆಗೆ ನೀರೊದಗಿಸುವ ಪೈಪ್ ಒಡೆದು ಹೋಗಿದ್ದು, ಒಂದು ತಿಂಗಳ ಹಿಂದೆ ಸರಿಪಡಿಸಲಾಗಿದೆ ಎಂದು ಗ್ರಾಪಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪೈಪ್ ರಿಪೇರಿ ಮಾಡಿದ್ದರೂ ಒಂದು ತಿಂಗಳಿನಿಂದ ನೀರು ಬಂದಿಲ್ಲ, ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಅಳಲಾಗಿದೆ.
ಸುಮಾರು 18ಗ್ರಾಮಗಳ ಮಹಿಳೆಯರು ಸಂತಾನಹರಣ ಚಿಕಿತ್ಸೆ ಮತ್ತು ಹೆರಿಗೆಗೆ ಈ ಆಸ್ಪತ್ರೆಗೆ ಬರುತ್ತಾರೆ. ಒಂದು ತಿಂಗಳಿಗೆ ಸುಮಾರು 30 ರಿಂದ 40 ಹೆರಿಗೆಗಳು ಇಲ್ಲಿ ಆಗುತ್ತವೆ. 15ದಿನಕ್ಕೊಮ್ಮೆ ಸಂತಾನ ಹರಣ ಶಸ್ತ್ರಚಿಕಿತ್ಸೆಯ ಶಿಬಿರವು ನಡೆಯುತ್ತದೆ. ಹೆರಿಗೆಗೆ ಮತ್ತು ಶಸ್ತ್ರಚಿಕಿತ್ಸೆಗೆ ಬರುವ ಹೆಣ್ಣುಮಕ್ಕಳಿಗೆ ಬೇಕಾದ ನೀರು ಇಲ್ಲಿ ದೊರೆಯದ ಕಾರಣ ಮಹಿಳೆಯರ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿರುವ ಬೋರ್‌ವೆಲ್ನಿಂದ ನೀರನ್ನು ತಂದು ಬಳಸುತ್ತಿದ್ದಾರೆ.
ಹೆರಿಗೆಗೆ ಬರುವ ಮಹಿಳೆಯರು ಹೆರಿಗೆಯ ನಂತರ ತಾಯಿ ಮಗುವಿಗೆ ಬಿಸಿನೀರು ಕೊಡುವ ಉದ್ದೇಶದಿಂದ ಸೋಲಾರ್ ವಾಟರ್ ಹೀಟರನ್ನು ಅಳವಡಿಸಲಾಗಿದೆ. ಆದರೆ ಸೋಲಾರ್ ವಾಟರ್ ಹೀಟರ್‌ಗೆ ನೀರೊದಗಿಸಲು ಸಾಧ್ಯವಾಗದಿರುವುದರಿಂದ ಬಾಣಂತಿಯರಿಗೆ ತಮ್ಮ ಕುಟುಂಬದವರು ಆಸ್ಪತ್ರೆಯ ಆವರಣದಲ್ಲಿ ನೀರು ಕಾಯಿಸಿ ಸ್ನಾನ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆರಿಗೆ ನಂತರ ಆಪರೇಷನ್ ಥೇಟರನ್ನು ಸ್ವಚ್ಛಗೊಳಿಸಲು ಇಲ್ಲಿನ ಸಿಬ್ಬಂದಿ ಬೋರ್‌ವೆಲ್ ನೀರನ್ನು ತಂದು ಶುಚಿಗೊಳಿಸುವ ಅನಿವಾರ್ಯತೆ ಇದೆ.
ಆಸ್ಪತ್ರೆಗೆ ಬೇಕಾದ ನೀರನ್ನು ಗ್ರೂಪ್ ಡಿ ಸಿಬ್ಬಂದಿ ಕೈಪಂಪ್ ಬೋರ್‌ವೆಲ್ನಿಂದ ಕೊಡದಲ್ಲಿ ನೀರು ತುಂಬಿಕೊಂಡು ಅಗತ್ಯಕ್ಕೆ ತಕ್ಕಷ್ಟು ನೀರನ್ನು ತಂದು ಹಾಕುತ್ತಿದ್ದಾರೆ. ಆದರೆ ಹೆರಿಗೆ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ, ವೈದ್ಯರ ಕೊಠಡಿಗೆ ಬೇಕಾದಷ್ಟು ನೀರನ್ನು ಹಾಕಲಾಗುತ್ತದೆ. ಆದರೆ ಶೌಚಾಲಯ ಮತ್ತು ಬಾಣಂತಿ ಮತ್ತು ಮಗು ಸ್ನಾನ ಮಾಡಲು ಬೇಕಾದ ನೀರನ್ನು ಪೂರೈಕೆ ಮಾಡುತ್ತಿಲ್ಲ.