ಸಿರುಗುಪ್ಪ: ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶೌಚಾಲಯಕ್ಕಾಗಿ ಸಾರ್ವಜನಿಕ ಗ್ರಂಥಾಲಯದ ಕೊಠಡಿಯಲ್ಲಿರುವ ಶೌಚಾಲಯದ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇಲ್ಲಿದೆ.
ಈ ಶಾಲೆಯಲ್ಲಿ 5 ರಿಂದ 8ನೇ ತರಗತಿಯವರೆಗೆ ಒಟ್ಟು 190 ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಯಲ್ಲಿದ್ದರೂ ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ಶೌಚಾಲಯ ಸೌಲಭ್ಯವಿಲ್ಲ.
ಇರುವ ಒಂದು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಶಾಲೆಯ ಪಕ್ಕದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿರುವ ಮಹಿಳೆಯರ ಶೌಚಾಲಯ ಬಳಸುತ್ತಿದ್ದಾರೆ.
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿರಿದ್ದು, ತಮ್ಮ ಶೌಚಕಾರ್ಯ ಮುಗಿಸಿಕೊಳ್ಳಲು ಗ್ರಂಥಾಲಯದ ಶೌಚಾಲಯದ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಕೆಟ್ಟ ಸ್ಥಿತಿ ಇರುತ್ತದೆ.
ಇಲ್ಲಿ ನೂತನ ಕಟ್ಟಡ ನಿರ್ಮಾಣವಾಗಿ 7-8 ವರ್ಷಗಳಾದರೂ ಈ ಶಾಲೆಗೆ ಉತ್ತಮವಾದ ಶೌಚಾಲಯ ನಿರ್ಮಾಣ ಮಾಡಿಲ್ಲ. ಕಳೆದ ವರ್ಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮಗೆ ಶೌಚಾಲಯ ಬೇಕೆಂದು ಒತ್ತಾಯಿಸಿದ ಹಿನ್ನಲೆ ಶಾಲೆ ಪಕ್ಕದಲ್ಲಿಯೇ ಒಂದು ಶೌಚಾಲಯ ನಿರ್ಮಾಣ ಮಾಡಿದ್ದಾರೆ.
ಆದರೆ ಶೌಚಾಲಯಕ್ಕೆ ಬೇಕಾದ ನೀರು ಪೂರೈಕೆ ಮಾಡುವ ಪೈಪ್‌ಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಇದರಿಂದಾಗಿ ಶೌಚಾಲಯಕ್ಕೆ ನೀರಿಲ್ಲದೆ ಇರುವುದರಿಂದ ಶಿಕ್ಷಕರು ಗ್ರಂಥಾಲಯದ ಶೌಚಾಲಯಗಳನ್ನು ಬಳಕೆ ಮಾಡುತ್ತಿದ್ದರು. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಕೂಡ ಗ್ರಂಥಾಲಯದ ಶೌಚಾಲಯವನ್ನು ಬಳಕೆ ಮಾಡಲು ಮುಂದಾಗಿದ್ದು, ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತು ತಮ್ಮ ದೈಹಿಕ ಜಲಬಾದೆಯನ್ನು ತೀರಿಸಿಕೊಳ್ಳುತ್ತಿದ್ದಾರೆ.
ನರೇಗಾ ಯೋಜನೆಯಡಿ 4 ಲಕ್ಷ, 20 ಸಾವಿರ ರೂ., ಶಿಕ್ಷಣ ಇಲಾಖೆಯಿಂದ 1 ಲಕ್ಷ ರೂ. ಸೇರಿ ಒಟ್ಟು 5 ಲಕ್ಷ 20 ಸಾವಿರ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ 2, ವಿಧ್ಯಾರ್ಥಿಗಳಿಗೆ 2, ಒಟ್ಟು ನಾಲ್ಕು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
ಆದರೆ ಶೌಚಾಲಯ ನಿರ್ಮಾಣದ ಬಿಲ್ಲನ್ನು ಗುತ್ತಿಗೆದಾರರಿಗೆ ಇಲ್ಲಿಯವರೆಗೆ ಪಾವತಿಸದ ಕಾರಣ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಶೌಚಾಲಯಕ್ಕಾಗಿ ಪರದಾಡುತ್ತಿದ್ದಾರೆ.
ನಾಲ್ಕು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಶೌಚಾಲಯದ ಬೀಗದ ಕೈ ಗ್ರಾಮ ಪಂಚಾಯತ್ ಅಧ್ಯಕ್ಷರ ಬಳಿ ಇದೆ. ಬೀಗವನ್ನು ಅಧ್ಯಕ್ಷರಿಂದ ತರಿಸಿಕೊಂಡು ಶೌಚಾಲಯವನ್ನು ವಿದ್ಯಾರ್ಥಿಗಳಿಗೆ ಉಪಯೋಗಿಸಲು ಕ್ರಮ ತೆಗೆದುಕೊಳ್ಳುತ್ತೇನೆಂದು ಮುಖ್ಯಗುರು ಚೋಳರಾಯ ತಿಳಿಸಿದ್ದಾರೆ.
5 ಲಕ್ಷ. 20 ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶಾಲಾ ಶೌಚಾಲಯಗಳ ಬಿಲ್ ಗುತ್ತಿಗೆದಾರರಿಗೆ ಪಾವತಿಯಾಗಿಲ್ಲ. ಇನ್ನೊಂದು ವಾರದೊಳಗೆ ಬಿಲ್ ಪಾವತಿ ಮಾಡಲಾಗುವುದು. ನಂತರ ಶೌಚಾಲಯವನ್ನು ಶಾಲೆಗೆ ಹಸ್ತಾಂತರ ಮಾಡಲಾಗುವುದೆಂದು ಪಿ.ಡಿ.ಒ. ರಮೇಶ್ ನಾಯ್ಕ್ ತಿಳಿಸಿದ್ದಾರೆ.
-ಆರ್.ಬಸವರೆಡ್ಡಿ ಕರೂರು