ಸಿರುಗುಪ್ಪ: ಆಸ್ತಿಗಾಗಿ ತಂದೆಯೇ ಮಗಳನ್ನು ಕೊಲೆ ಮಾಡಲು ಮುಂದಾದ ಘಟನೆ ತಾಲೂಕಿನ ಅರಳಿಗನೂರು ಗ್ರಾಮದಲ್ಲಿ, ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.18ರ ಶುಕ್ರವಾರ ನಡೆದಿದೆ.
ಅರಳಿಗನೂರು ಗ್ರಾಮದ ದೊಡ್ಡರಂಗಪ್ಪನಿಗೆ ಶಿವಲಿಂಗಮ್ಮ ಅವರು ಮೊದಲನೇ ಪತ್ನಿ ಹಾಗೂ ಜಯಮ್ಮ ಅರು ಎರಡನೇ ಪತ್ನಿಯಾಗಿದ್ದು, ಮೊದಲನೇ ಪತ್ನಿ ಶಿವಲಿಂಗಮ್ಮನಿಗೆ ಗೊತ್ತಿಲ್ಲದಂತೆ ದೊಡ್ಡ ರಂಗಪ್ಪ ತನ್ನ ಎರಡನೇ ಪತ್ನಿ ಜಯಮ್ಮಳ ಹೆಸರಿಗೆ ಆಸ್ತಿಯನ್ನು ಮಾಡಿಸಿದ್ದರಿಂದ ಶಿವಲಿಂಗಮ್ಮನ ಮಗಳು ಸೋಮಲಿಂಗಮ್ಮ ತನಗೆ ಅಸ್ತಿಯಲ್ಲಿ ಪಾಲು ಬರಬೇಕೆಂದು ಸಿರುಗುಪ್ಪದ ಸಿವಿಲ್ ನ್ಯಾಯಾಲಯದಲ್ಲಿ ಅಕ್ಟೋಬರ್ 1 ರಂದು ದಾವೆ ಹೂಡಿದ್ದಳು.
ಇದರಿಂದಾಗಿ ಸಿಟ್ಟಿಗೆದ್ದ ದೊಡ್ಡರಂಗಪ್ಪ, ಅ.16 ರಂದು ಸಿರುಗುಪ್ಪದಿಂದ ಅರಳಿಗನೂರಿಗೆ ಬಸ್ಸಿನಲ್ಲಿ ಬಂದ ಮಗಳು ಸೋಮಲಿಂಗಮ್ಮಳನ್ನು ಪಂಪನಗೌಡ ಮನೆ ಬಳಿಯ ಓಣಿಯಲ್ಲಿ ನಿಲ್ಲಿಸಿ ನಿನಗೆ ಆಸ್ತಿಯಲ್ಲಿ ಪಾಲು ಕೊಡಬೇಕಾ ಎಂದು ಕುತ್ತಿಗೆಗೆ ಕೈ ಹಾಕಿ ನಿನ್ನನ್ನು ಕೊಂದು ಬಿಡುತ್ತೇನೆಂದು ಚಾಕುವಿನಿಂದ ಏಕಾಏಕಿ ಹಲ್ಲೆ ಮಾಡಿ, ಕುತ್ತಿಗೆಗೆ 2-3 ಬಾರಿ ಚಾಕುವಿನಿಂದ ಚುಚ್ಚಿದ್ದಾನೆ.
ಮಗಳು ಸೋಮಲಿಂಗಮ್ಮ ಚಾಕುವನ್ನು ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿಕೊಂಡಿದ್ದರಿಂದ ಅಕ್ಕಪಕ್ಕದ ಮನೆಯವರು ಸೇರಿ ಸೋಮಲಿಂಗಮ್ಮನನ್ನು ಬಿಡಿಸಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ದೊಡ್ಡರಂಗಪ್ಪ, ಮಗಳ ಹೊಟ್ಟೆಗೆ ಚಾಕುವಿನಿಂದ ತಿವಿದು ಅಲ್ಲಿಂದ ಓಡಿ ಹೋಗಿದ್ದಾನೆ.
ಘಟನೆಯ ಪರಿಣಾಮ ಹಲ್ಲೆಗೊಳಗಾದ ಮಗಳನ್ನು ಚಿಕಿತ್ಸೆಗಾಗಿ ಸಿರುಗುಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಹಲ್ಲೆಗೊಳಗಾದ ಸೋಮಲಿಂಗಮ್ಮನ ತಾಯಿ ಶಿವಲಿಂಗಮ್ಮ ಅವರು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಅ.17 ರಂದು ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.