ಸಿರುಗುಪ್ಪ: ತಾಲೂಕಿನ ತಾಳೂರು, ಉತ್ತನೂರು, ಹೆಚ್.ಹೊಸಳ್ಳಿ, ಶಾನವಾಸಪುರ, ಕರೂರು, ಭೆ„ರಾಪುರ, ಬಲಕುಂದಿ, ಉಪ್ಪಾರಹೊಸಳ್ಳಿ, ಬಾಗೇವಾಡಿ ಮುಂತಾದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೆಟ್ ವರ್ಕ್ ಸಮಸ್ಯೆ ತಲೆದೋರಿದ್ದು, ಇದರಿಂದ ಸಾರ್ವಜನಿಕರಿಗೆ ಕಚೇರಿ ಕೆಲಸ ನಿರ್ವಹಿಸಲು ಅಡ್ಡಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅನೇಕ ವರ್ಷಗಳಿಂದ ಇಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಈ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಇಲ್ಲಿನ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳಾಗದೇ ಕಚೇರಿಗಳಿಗೆ ಅಲೆಯುತ್ತಿರುವುದು ಸಾಮಾನ್ಯವಾಗಿದೆ. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬ್ಯಾಂಕ್‌ಗಳು, ಅಂಚೆ ಕಚೇರಿ, ಹಾಲು ಮಾರಾಟಗಾರರ ಸೊಸೈಟಿ, ಶಾಲೆ, ಗ್ರಾಪಂ ಕಚೇರಿಗಳು, ಗ್ರಾಮಲೆಕ್ಕಾಧಿಕಾರಿಗಳ ಕಚೇರಿ, ನಾಡಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಕಡಿತಗೊಂಡರೆ, ಗುಡುಗು ಬಂದರೆ ನೆಟ್‌ವರ್ಕ್ ಕಡಿತಗೊಳ್ಳುತ್ತದೆ. ಒಂದೊಂದು ಸಲ ಕರೆಂಟ್ ಇದ್ದರೂ ಆಪರೇಟರ್ ಇಲ್ಲದೆ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಬ್ಯಾಂಕ್, ಅಂಚೆಕಚೇರಿ, ಗ್ರಾಪಂ ಕಚೇರಿ, ನಾಡಕಚೇರಿ ಸೇರಿದಂತೆ ವಿವಿಧ ಕಚೇರಿಗಳಲ್ಲಿ ನಡೆಯುವ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿರುತ್ತವೆ.
ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೊಬೆ„ಲ್ ಮೂಲಕ ಮಾತನಾಡುವವರಿಗೆ ನೆಟ್‌ವರ್ಕ್ ಸಮಸ್ಯೆ ಅಷ್ಟಾಗಿ ಇರುವುದಿಲ್ಲ. ಆದರೆ ಸರ್ಕಾರಿ ಕಛೇರಿಗಳು, ಬ್ಯಾಂಕ್ ಗಳಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಂಪರ್ಕವಿದ್ದು, ಈ ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಕಛೇರಿಗಳಿಗೆ ಪದೇ ಪದೇ ಅಲೆಯುವುದು ಸಾಮಾನ್ಯವಾಗಿದೆ.
ಸರ್ಕಾರಿ ಕಚೇರಿಗಳಿಗೆ, ಬ್ಯಾಂಕ್ ಗಳಿಗೆ ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಮಾಡಬೇಕಾದ ಕೆಲಸ ಕಾರ್ಯಗಳನ್ನು ಬಿಟ್ಟು ನೆಟ್‌ವರ್ಕ್ ಬಂದಾಗ ಕಚೇರಿಗೆ ಬಂದು ತಮ್ಮ ಕೆಲಸಗಳನ್ನು ಸಾರ್ವಜನಿಕರು ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದೆ.
ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಅನ್ ಲೈನ್ ಮೂಲಕವೇ ಮಾಡಬೇಕಾಗಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ ಇಲ್ಲಿನ ಸಿಬ್ಬಂದಿ ತಪ್ಪಿಸಿಕೊಳ್ಳಲು ಬೇರೆ ನೆಟ್ ವರ್ಕ್‌ನ ಡಾಂಗಲ್‌ನ್ನು ಬಳಕೆ ಮಾಡಿಕೊಂಡು ಕಚೇರಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ಇನ್ನೂ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಂದರೆ ಗ್ರಾಹಕರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ರಾತ್ರಿವೇಳೆ ಮಾತ್ರ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸರಿಯಾಗಿ ಬರುತ್ತಿರುವುದರಿಂದ ಕೆಲವು ಬಾರಿ ಅನಿವಾರ್ಯ ಸಂದರ್ಭದಲ್ಲಿ ರಾತ್ರಿ ವೇಳೆ ನಾವು ಗ್ರಾಪಂ ಕಚೇರಿಯಲ್ಲಿ ಕೆಲಸ ಮಾಡುವಂತಾಗಿದೆ ಎಂದು ತಾಳೂರು ಗ್ರಾಪಂನ ಕಂಪ್ಯೂಟರ್ ಆಪರೇಟರ್ ಕುಮಾರಗೌಡ ತಿಳಿಸಿದ್ದಾರೆ.
ನಮ್ಮ ಕಚೇರಿಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಂಪರ್ಕವಿರುವುದರಿಂದ ಪದೇ ಪದೇ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಖಾಸಗಿ ಕಂಪನಿಯ ಡಾಂಗಲ್ ಬಳಸುತ್ತಿದ್ದೇವೆ. ಆದ್ದರಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಪರಿಹರಿಸಲು ಅಧಿ ಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಪಿ.ಬಸವರಾಜ,
ಉಪ್ಪಾರ ಹೊಸಳ್ಳಿ ಗ್ರಾಪಂ ಪಿಡಿಒ