Advertisement
ಶಿರಸಿ ಪಟ್ಟಣದ ಸಿಂಪಿಗಲ್ಲಿಯಲ್ಲಿರುವ ಈ ಮಂದಿರ, ಹಳೆಯ ಮಾರಿಕಾಂಬಾ ಹೈಸ್ಕೂಲ್ ಎದುರಿನಲ್ಲಿದೆ. ದೇವಾಲಯದಲ್ಲಿನ ಹಳೆಯ ಶಿಲಾ ರಚನೆ, ಅಪರೂಪದ ವಿಗ್ರಹ ಮತ್ತು ಮೂಲ ಗುಡಿಯ ವಿನ್ಯಾಸಗಳ ಆಧಾರದಲ್ಲಿ ಈ ದೇವಾಲಯ ಸುಮಾರು 800 ವರ್ಷಗಳಷ್ಟು ಹಳೆಯದೆಂದು ಊಹಿಸಲಾಗಿದೆ.
Related Articles
Advertisement
ಉಡುಪಿ ಮಠಾಧೀಶರಾದ ಶ್ರೀವಾದಿರಾಜ ತೀರ್ಥರು ರಚಿಸಿದ ತೀರ್ಥ ಪ್ರಬಂಧ ಹಾಗೂ ಶಿರಸಿಯ ಸ್ವರ್ಣವಲ್ಲಿ ಮಠದ ಚರಿತ್ರೆಯಲ್ಲಿ ಮಂಜಗುಣಿ ದೇಗುಲದ ಬಗ್ಗೆ ದಾಖಲೆ ಇದ್ದು ಇದು ವಿಜಯನಗರದ ಅರಸರ ಕಾಲಕ್ಕಿಂತ ಹಿಂದಿನದೆಂದು ಲೆಕ್ಕ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಈ ದೇವಾಲಯದ ನಿರ್ಮಾಣ ಮಂಜುಗುಣಿಯ ದೇಗುಲದಷ್ಟು ಹಳೆಯದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಪ್ರಾಚೀನ ದೇಗುಲವಾದ ವಿಠೊಬ ಮಂದಿರ ಬ್ರಿಟಿಷರ ಕಾಲದಿಂದಲೂ ಖಾಸಗಿ ಕುಟುಂಬವೊಂದರ ಸುಪರ್ದಿಯಲ್ಲಿತ್ತು. 1970ರ ನಂತರ ಅದು ಸಾರ್ವಜನಿಕ ದೇಗುಲವಾಗಿ ಬದಲಾಯಿತು. ಈ ದೇವಾಲಯಕ್ಕೆ ಮಳಲಿ ಏರಿಯಲ್ಲಿ 13 ಎಕರೆ ಫಲವತ್ತಾದ ಜಮೀನು ಇತ್ತು. ಟ್ರಿಬ್ಯುನಲ್ ಕಾಯ್ದೆ ಜಾರಿಗೆ ಬಂದಾಗ ಈ ದೇಗುಲದ ಆಸ್ತಿಉಳುವವರ ಪಾಲಾಯಿತು. 1970ರ ವರೆಗೂ ವೈಭವದ ರಥೋತ್ಸವ ಆಚರಿಸಲಾಗುತ್ತಿತ್ತು. ಆನಂತರ ಕಾರಣಾಂತರದಿಂದ ರಥೋತ್ಸವ ನಿಲ್ಲಿಸಲಾಯಿತು. ಮುಜರಾಯಿ ಇಲಾಖೆಗೆ ಸೇರಿದ ದೇಗುಲ ಇದಾಗಿದ್ದು ಅಭಿವೃದ್ಧಿಗಾಗಿ ಅತ್ಯಲ್ಪ ಹಣ ವರ್ಷಾಸನವಾಗಿ ದೊರೆಯುತ್ತಿದೆ. 2009 ರಲ್ಲಿ ಈ ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆದು, ಭಕ್ತರ ದೇಣಿಗೆಯ ಹಣದಿಂದ ಈಗಿರುವ ಸುಂದರ ಮಂದಿರ ನಿರ್ಮಿಸಲಾಗಿದೆ. 2011 ರಲ್ಲಿ ದೇವಾಲಯದ ದೇವರ ಮೂರ್ತಿಗಳ ಪುನರ್ ಪ್ರತಿಷ್ಠಾಪನೆಯಾಯಿತು.
ಉತ್ಸವಾದಿ ಪೂಜೆಗಳು ದೇವಾಲಯದಲ್ಲಿ ನಿತ್ಯ ತ್ರಿಕಾಲ ಪೂಜೆ ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ಬೆಳಗ್ಗೆ ಅಷ್ಟೋತ್ತರ ಸಹಸ್ರನಾಮ ಪೂಜೆ, ದಸರಾದಲ್ಲಿ 10 ದಿನಗಳ ಕಾಲಉತ್ಸವ, ವಿಜಯದಶಮಿಯಂದು ಪಲ್ಲಕ್ಕಿ ಉತ್ಸವ ಮತ್ತು ವನಭೋಜನ ಕಾರ್ಯಕ್ರಮ ನಡೆಸಲಾಗುತ್ತದೆ. ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾಶಿಯಂದು ವೈಭವದ ಉತ್ಸವ ನಡೆಸಲಾಗುತ್ತದೆ.
ದಕ್ಷಿಣಾಭಿಮುಖವಾಗಿರುವ ಈ ದೇವಾಲಯದ ಬಲಕ್ಕೆ ದಾಸಮಾರುತಿ ಮತ್ತು ಎಡಭಾಗದಲ್ಲಿರುವ ಗರುಡ ದೇವರು ಪರಿವಾರ ದೇವತೆಗಳಾಗಿದ್ದು ನಿತ್ಯ ಪೂಜೆ ನಡೆಸಲಾಗುತ್ತದೆ.
ವಿದ್ಯೆ, ವಿವಾಹ, ಉದ್ಯೋಗ ಪ್ರಾಪ್ತಿ, ವ್ಯಾಪಾರ ವೃದ್ಧಿ. ಕುಟುಂಬ ಶಾಂತಿ , ಸಂತಾನ ಫಲ ಇತ್ಯಾದಿ ಬಗೆ ಬಗೆಯ ಹರಕೆ ಹೊತ್ತ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಎನ್.ಡಿ. ಹೆಗಡೆ ಆನಂದಪುರಂ