Advertisement

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

09:17 PM Apr 28, 2024 | Team Udayavani |

ಶಿರಸಿ: ಲೋಕಸಭಾ ಚುನಾವಣ ಪ್ರಚಾರದ ಹಿನ್ನಲೆಯಲ್ಲಿ ಶಿರಸಿಗೆ ಭಾನುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಲೆನಾಡು, ಕರಾವಳಿ ವಿಶೇಷತೆಯ ಸೊಬಗಿನಲ್ಲಿ ಗೌರವಿಸಲಾಯಿತು.

Advertisement

ರಾಜ್ಯದಲ್ಲೇ ಎಲ್ಲೂ ನಡೆಯದ ಶಿರಸಿ ವಿಶೇಷತೆಯ, ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಬೇಡರ ವೇಷ ಎಂಬ ಜಾನಪದ ಕಲೆಯಲ್ಲಿ ಬಳಸಲಾಗುವ ಆಕರ್ಷಕ ಕಿರೀಟವನ್ನು ಪ್ರಧಾನಿ ಮೋದಿ ಅವರ ಶಿರದ ಮೇಲೆ ಮಾಜಿ ಸ್ಪೀಕರ್, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೊಡಿಸಿದಾಗ ಹರ್ಷೋದ್ಘಾರ ಮೊಳಗಿತು. ನವಿಲುಗರಿ ಒಳಗೊಂಡ ಈ ಜಾನಪದೀಯ ಕಿರೀಟವನ್ನು ಶಿರಸಿ ಮರಾಠಿಕೊಪ್ಪದ ಕೇಶವ ನಾಯ್ಕ ಸಿದ್ಧಗೊಳಿಸಿದ್ದರು.

ಪ್ರಧಾನಿಗಳ ಕೊರಳು ಅಲಂಕರಿಸಿದ್ದ ಅಡಿಕೆ, ಕಾಳು ಮೆಣಸು, ಏಲಕ್ಕಿ ಒಳಗೊಂಡ ವಿಶಿಷ್ಟ ಹಾರವನ್ನು ಕದಂಬ ಮಾರ್ಕೇಟಿಂಗ್ ಮೂಲಕ ಚೌವತ್ತಿ ಶ್ರೀಧರ ಭಟ್ಟ ಸಹಕಾರದಲ್ಲಿ ಶ್ವೇತಾ ಕುಲಕರ್ಣಿ ಬಾಳಹಳ್ಳಿ ಸಿದ್ಧಗೊಳಿಸಿದ್ದರು. ಇನ್ನು ಕರ್ನಾಟಕದ ಶಕ್ತಿ ದೇವತೆ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಕೂಡ ಮೋದಿ ಅವರಿಗೆ ನೀಡಿ ಗೌರವಿಸಲಾಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸೂರ್ಯಕಾಂತ ಗುಡಿಗಾರ ಕುಟುಂಬ ನೇತೃತ್ವದ ಶ್ರೀಕೃಷ್ಣ ಫೈನ್ ಆರ್ಟನಲ್ಲಿ ಸಿದ್ಧಗೊಳಿಸಲಾಗಿತ್ತು. ಶಿವಣೆಯ ಮರದಿಂದ ಮಾಡಲಾದ ಈ ಮೂರ್ತಿ ಮೂವತ್ತಾಲ್ಕು ಇಂಚು ಎತ್ತರ, 29 ಇಂಚು ಅಗಲದ ಜತೆ ಸುಮಾರು 8 ಕೆಜಿ ತೂಕದ್ದಾಗಿತ್ತು.

ಶಿರಸಿಯ ಯುವ ಕಲಾವಿದ ಕೌಶಿಕ್ ಹೆಗಡೆ ಕೇವಲ ನಾಲ್ಕು ತಾಸಿನಲ್ಲಿ ಬಿಡಿಸಿದ ಮೋದಿ ಅವರ ವರ್ಣಮಯ ಚಿತ್ರವನ್ನೂ ನೀಡಿ ಗೌರವಿಸಲಾಯಿತು.

Advertisement

ಪ್ರಧಾನಿಗಳು ತಮ್ಮ ಮಾತಿನಲ್ಲಿ ಶಿರಸಿ ಅಡಿಕೆಗೆ ಜಿಐ ಟ್ಯಾಗ್ ಮಾಡಿದ್ದನ್ನೂ, ಬಿಜೆಪಿ ಸರಕಾರ ಬಂದ ಬಳಿಕ ಅಡಿಕೆಗೆ ದರ ಬಂದಿದ್ದನ್ನೂ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಮುಖರಾದ ವಿ.ಸುನೀಲ್ ಕುಮಾರ್ , ಕೋಟ ಶ್ರೀನಿವಾಸ ಪೂಜಾರಿ, ಹರಿಪ್ರಕಾಶ್ ಕೋಣೆಮನೆ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ಧಿ, ಸುನೀಲ ನಾಯ್ಕ, ಸುನೀಲ್ ಹೆಗಡೆ, ಎನ್.ಎಸ್.ಹೆಗಡೆ ಕರ್ಕಿ ಇತರರು ಇದ್ದರು. ಜತೆಗೆ ಶಿರಸಿಯ ಕೇಸರಿಬಾತ್, ಕಬ್ಬಿನ ಹಾಲಿನ ತೊಡದೇವನ್ನೂ ಪ್ರಧಾನಿಗಳಿಗೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next