Advertisement
ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಇಂಥದೊಂದು ಅಪರೂಪದ ಅಧ್ಯಕ್ಷರಾಗಿದ್ದಾರೆ. ಗ್ರಾಮ ಪಂಚಾಯಿತಿಯ ತಿರುಗುವ ಖುರ್ಚಿಯಲ್ಲಿ ಕುಳಿತು ಮನೆ ಹಂಚಿಕೆ ಮಾಡಿ ಸುಮ್ಮನಾಗುವುದಿಲ್ಲ. ಊರೂರು ತಿರುಗಿ ತಾನೇ ಮಂಜೂರು ಮಾಡಿದ ಮನೆಗಳ ನಿರ್ಮಾಣ ಮಾಡಿ ಗಾರೆ ಕೆಲಸ ಮಾಡುತ್ತಾರೆ. ತನ್ನ ಅಡಿಯಲ್ಲಿ ಇರುವ ಗುತ್ತಿಗೆದಾರನ ಅಡಿಯಲ್ಲಿ ಕಾರ್ಮಿಕನಾಗಿ ಮತ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ !
ವಾಸ್ತವವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಅವರ ಮೂಲ ವೃತ್ತಿ ಗಾರೆ ಕೆಲಸ. ಅವರ ತಂದೆ ಸೆಲ್ವೆಸ್ಟರ್ ರೆಬೆಲ್ಲೋ ಅವರ ಕಾಲದಿಂದಲೂ ಕೊಳಗಿಬೀಸ್, ಹೇರೂರು, ಗೋಳಿ ಭಾಗದಲ್ಲಿ ಮನೆ ನಿರ್ಮಾಣ, ಸಣ್ಣ ಕಟ್ಟಡ, ಕಂಪೌಂಡ್ ನಿರ್ಮಾಣ ಮಾಡಿಕೊಂಡು ಬಂದವರು. ಕುಟುಂಬ ವೃತ್ತಿಯನ್ನು ತನ್ನ ಸಹೋದರರಾದ ಝೆರಿ, ಗಿಬ್ ಅವರೊಂದಿಗೆ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈ ಭಾಗದ ಜನತೆ ಮನೆ, ಇನ್ನಿತರ ಸಿಮೆಂಟ್ ಕೆಲಸ ಆಗಬೇಕಿದ್ದರೆ ಮೊದಲು ಆದ್ಯತೆ ನೀಡುವುದು ಸಿಲ್ವೆಸ್ಟರ್ ಅವರ ಕುಟುಂಬಕ್ಕೆ. ಬಾಯಲ್ಲೊಂದು ಬೀಡಿ ಮೋಟು ಕಚ್ಚಿ ಹಿಡಿದು, ಕೈಲಿ ತಾಪಿ ಹಿಡಿದರೆ ಲಾಝೆರ್ ಮಾಡಿರುವ ಗಿಲಾಯ ಕೆಲಸ ನಿಂತು ನೋಡಬೇಕು. ಅಷ್ಟು ಪರಿಣತಿ ಕೆಲಸ ಲಾಝರ್ ಅವರದ್ದಿದೆ. ನೆಗ್ಗು ಪಂಚಾಯಿತಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲಾಝರ್ ಮತ್ತು ಅವರ ಸಹೋದರರು ನಿರ್ಮಿಸಿದ ನೂರಾರು ಮನೆಗಳಿವೆ, ಶಾಲಾ ಕಂಪೌಂಡ್ ಇವೆ, ಬಾತ್ ರೂಂ ಇವೆ. ಲಾಝರ್ ಅವರ ಕೆಲಸದ ಝಲಕ್ ನ್ನು ಇಲ್ಲಿಯ ಜನತೆ ಸಾಹಸವಾಗಿ ಒಪ್ಪಿಕೊಂಡಿದ್ದಾರೆ. ಪಕ್ಕದಮನೆ ಕೆಲಸಕ್ಕೆ ಬಂದಿದ್ದರೂ ಲಾಝರ್ ಅವರನ್ನು ಪ್ರೀತಿಯಿಂದ ಕರೆದು ಚಹಾ ಮಾಡಿಕೊಡುವವರು ಅನೇಕರಿದ್ದಾರೆ.
Related Articles
Advertisement
ಕಳೆದ ಒಂದು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾದ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದಾಗ ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವೂ ಮೀಸಲಾತಿಗೆ ಒಳಪಟ್ಠಿತು. ಇದರಿಂದಾಗಿ ಲಾಝರ್ ರೆಬೆಲ್ಲೋ ಸೂಚಿತ ಕೆಟಗರಿಯ ಏಕೈಕ ವ್ಯಕ್ತಿಯಾಗಿ ಅನಾಯಾಸವಾಗಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.
ಈ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬಳಿ ಕಾರುಬಿಡಿ ಬೈಕ್ ಕೂಡ ಇಲ್ಲ. ಬಸ್ಸೇರಿ ಹಳ್ಳಿಗಳಿಗೆ ತೆರಳಿ ಗಾರೆ ಕೆಲಸ ಮಾಡಿ ಸಂಜೆ ಮನೆಗೆ ವಾಪಸಾಗುತ್ತಾರೆ. “ಹೆಗ್ಡೇರೆ, ನಿಮ್ಮ ರಸ್ತೆ ತಿರುವಿನಲ್ಲಿ ಒಂದು ಸಿಮೆಂಟ್ ಪೈಪ್ ಹಾಕುವ, ನೀರು ರಸ್ತೆ ಕೊರಿತದೆ…” ” ನಾಯ್ಕರೇ ನೀವು ಉದ್ಯೋಗ ಖಾತ್ರಿಯಲ್ಲಿ ಈ ಕೆಲಸ ಮಾಡಿಸಿಕೊಳ್ಳಿ… ಊರ ಜನಕ್ಕೂ ಪ್ರಯೋಜನ ಆಗ್ತದೆ”…..ಅದು ಆ ಪಕ್ಷದವರ ವಾರ್ಡ್, ಇವನು ಈ ಪಕ್ಷದ ಕಾರ್ಯಕರ್ತ ಎಂಬುದಕ್ಕೆ ಆಸ್ಪದ ನೀಡದೇ, ಗ್ರಾಮದ ಹಳ್ಳಿ, ಸಮಸ್ಯೆ ಅಷ್ಟನ್ನೇ ಮಾನದಂಡವಾಗಿಸಿಕೊಂಡಿದ್ದಾರೆ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೊ…
ಹುದ್ದೆ ಇವತ್ತು ಬರತ್ತೆ, ನಾಳೆ ಹೋಗತ್ತೆ. ನಮ್ಮ ವೃತ್ತಿ, ಈ ವೃತ್ತಿಯೇ ತಂದುಕೊಟ್ಟ ಜನರ ವಿಶ್ವಾಸವೇ ನನ್ನ ಜೀವಾಳ.
– ಲಾಝೆರ್ ರೆಬೆಲ್ಲೋ, ನೆಗ್ಗು ಗ್ರಾ ಪಂ ಅಧ್ಯಕ್ಷ.
ಇದನ್ನೂ ಓದಿ: Shirva ಗ್ರಾ.ಪಂ.ಅಧ್ಯಕ್ಷರಾಗಿ ಸವಿತಾ ಪೂಜಾರಿ,ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆ