Advertisement

Sirsi: 800 ವರ್ಷಗಳ ಹಿಂದಿನ ವೀರಗಲ್ಲು ಶಾಸನ ಪತ್ತೆ!

02:56 PM Jul 11, 2024 | Team Udayavani |

ಶಿರಸಿ: ಐತಿಹಾಸಿಕ ಪ್ರದೇಶವಾದ ಸೋಂದದ ಕಡೇಗುಂಟದಲ್ಲಿ 800 ವರ್ಷಗಳ ಹಿಂದಿನ ವೀರಗಲ್ಲು ಶಾಸನ ಬೆಳಕಿಗೆ ಬಂದಿದೆ.

Advertisement

ಕಡೇಗುಂಟದ ಶಶಾಂಕ್ ಮರಾಠೆ ಎಂಬವರು ನೀಡಿದ ಮಾಹಿತಿಯ ಮೇರೆಗೆ ಇತಿಹಾಸಕಾರ ಡಾ. ಲಕ್ಷ್ಮೀಶ್ ಸೋಂದಾ ಮತ್ತು ಪ್ರೊ. ನಾಗರಾಜ್ ರಾವ್ ಮೈಸೂರು ಅವರು ಅಧ್ಯಯನ ನಡೆಸಿದ ಹಿನ್ನೆಲೆ ಮಹತ್ವದ ಸಂಗತಿಗಳು ಗಮನಕ್ಕೆ ಬಂದಿದೆ.

ಇದೊಂದು ವೀರಗಲ್ಲು ಶಾಸನವಾಗಿದ್ದು, ಹಳೆಗನ್ನಡ ಲಿಪಿ ಮತ್ತು ಭಾಷೆಯಲ್ಲಿದೆ. ಯುದ್ಧದಲ್ಲಿ ಮಡಿದ ಕಡೇಗುಂಟದ ವೀರಯೋಧನ ನೆನಪಿಗೆ ಈ ಸ್ಮಾರಕ ಶಿಲೆಯನ್ನು ನಿರ್ಮಿಸಲಾಗಿತ್ತು. ಇದರಲ್ಲಿನ ಚಿತ್ರಗಳು, ಶಿಲ್ಪಗಳು ವಿಶೇಷವಾಗಿವೆ.

ಬಹುತೇಕ ಅಕ್ಷರಗಳು ತೃಟಿತಗೊಂಡಿದೆ. ಆದರೆ ತಿಳಿದು ಬರುವ ಕೆಲವು ವಿಷಯಗಳೇನೆಂದರೆ ಬನವಾಸಿ ನಾಡನ್ನು ಮಹಾಮಂಡಳೇಶ್ವರ ಆಳ್ವಿಕೆ ಮಾಡುತ್ತಿದ್ದಾಗ ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಕುಜವಾರದಂದು ನಡೆದ ಯುದ್ಧದಲ್ಲಿ ಕಡೇಗುಂಟದ ವೀರನಾದ ಮಸಣ್ಣನು ವೀರ ಮರಣವನ್ನಪ್ಪಿದ ಎಂಬುದಾಗಿದೆ. ಇದರಲ್ಲಿ ಕಾರವಾರ ಮತ್ತು ಮಣಲಿಯ ವೀರರಾದ ಕಲಗೌಡ ಮತ್ತು ಬೊಮ್ಮಗೌಡರ ಹೆಸರಿನ ಉಲ್ಲೇಖವು ಇದೆ.

ಸೋದೆ ಅರಸರ ಕಾಲದ ಪೂರ್ವದ ಈ ಶಾಸನ ಸೋಂದಾದ ಕಡೇಗುಂಟದಲ್ಲಿ ಸಿಕ್ಕಿರುವುದು ಸೋದೆ ಅರಸರ ಪೂರ್ವ ಕ್ರಿ.ಶ 12ನೇ ಶತಮಾನದಲ್ಲೇ ಸೋಂದಾ ಒಂದು ಆಡಳಿತಾತ್ಮಕ ಪ್ರದೇಶವಾಗಿತ್ತು ಎಂಬುದನ್ನ ಗಟ್ಟಿಗೊಳಿಸಲು ಸಹಾಯಕವಾಗಿದೆ. 12ನೇ ಶತಮಾನದಿಂದ ಇಂದಿನವರೆಗೂ ʼಕಡೆಗುಂಟʼ ಶಬ್ದ ಪ್ರಯೋಗ ಬದಲಾಗದೆ ಹಾಗೆ ಉಳಿದಿರುವುದು ವಿಶೇಷವಾಗಿದೆ.

Advertisement

ಇಲ್ಲಿರುವ ರಾಮಲಿಂಗೇಶ್ವರ ಗುಡಿ ಕೂಡಾ ಪುರಾತನವಾಗಿದ್ದು, ಇದು ಕೂಡಾ 800 ವರ್ಷಗಳ ಹಿಂದೆಯೇ ನಿರ್ಮಾಣವಾಗಿತ್ತು ಎಂದು ಇತಿಹಾಸಕಾರ ಡಾ.ಲಕ್ಷ್ಮೀಶ್ ಸೋಂದಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next