ಸಿರಿಗೆರೆ: ಕೋವಿಡ್ ಎರಡನೇ ಅಲೆ ತುಂಬಾ ವೇಗವಾಗಿ ಹಬ್ಬುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಜನರು ಜಾಗೃತರಾಗಿರಬೇಕು. ಮನೆಯಿಂದ ಹೊರ ಬಂದಾಗ ಮೂಗು, ಮುಖ ಮುಚ್ಚಿಕೊಳ್ಳುವ ಹಾಗೆ ಮಾಸ್ಕ್ ಧರಿಸಬೇಕು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಶ್ರೀಗಳು ಮಾತನಾಡಿದರು. ಎಲ್ಲ ರೋಗಗಳಿಗೆ ನೀಡುವಂತೆಯೇ ಈ ಚುಚ್ಚುಮದ್ದು ನೀಡಲಾಗುತ್ತಿದ್ದು, ನಾಗರಿಕರು ಗಾಬರಿಗೊಳ್ಳದೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದರು.
ರೋಗಕ್ಕಾಗಿ ಹೆದರದೆ ಸರ್ಕಾರ ನೀಡುತ್ತಿರುವ ಎಚ್ಚರಿಕೆಯನ್ನು ಪರಿಪಾಲಿಸಿ ನಮ್ಮ ಕಾಯಕ ಮಾಡುತ್ತಿರಬೇಕು. ಗ್ರಾಮೀಣ ಪ್ರದೇಶದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಂತ ಆರೋಗ್ಯದ ಬಗ್ಗೆ ಉದಾಸೀನ ಮಾಡಬಾರದು. ದುಶ್ಚಟಗಳಿಗೆ ಬಲಿಯಾಗದೆ ಸತ್ವಯುತ ಆಹಾರ ಸೇವನೆ ಮಾಡಿ ಕಾಯಕಶೀಲರಾದರೆ ರೋಗವನ್ನು ಎದುರಿಸುವ ಶಕ್ತಿ ಬರುತ್ತದೆ. 60 ವಯಸ್ಸು ಮೇಲ್ಪಟ್ಟವರು ಆರೋಗ್ಯವಾಗಿದ್ದರೂ ಕೋವಿಡ್ ಗೆ ಸಂಬಂ ಧಿಸಿದ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆಸ್ಪತ್ರೆ ವೀಕ್ಷಣೆ: ಚುಚ್ಚುಮದ್ದು ಪಡೆದುಕೊಂಡ ನಂತರ ಪಂಡಿತಾರಾಧ್ಯ ಶ್ರೀಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ಕೋವಿಡ್ ಸಂದರ್ಭದಲ್ಲಿ ಗಂಟಲು ದ್ರವ ತೆಗೆಯಲು ಸಜ್ಜುಗೊಳಿಸಲಾಗಿದ್ದ ಪ್ರಯೋಗಾಲಯಕ್ಕೂ ಭೇಟಿ ನೀಡಿದರು. ಸಮುದಾಯ ಕೇಂದ್ರದಲ್ಲಿ ಸ್ವತ್ಛತೆ ಕಾಪಾಡಿಕೊಂಡಿರುವುದರ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಿರಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಯೋಗೀಶ್ ಇತರರು ಇದ್ದರು.