ಸಿರಿಗೆರೆ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಪಾಲಿನ ಬೆಳೆವಿಮೆಯ ಮೊತ್ತವನ್ನು ಬ್ಯಾಂಕಿನಿಂದಲೇ ಜಮಾ ಮಾಡಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿ ಸಿರಿಗೆರೆ ಸುತ್ತಲಿನ ಜಮ್ಮೇನಹಳ್ಳಿ, ಸಿದ್ದಾಪುರ, ಅಳಗವಾಡಿ, ರಂಗಾಪುರ, ಹಳವುದರ ಮುಂತಾದ ಗ್ರಾಮಗಳ ರೈತರು ಸಿರಿಗೆರೆಯ ಸಿಂಡಿಕೇಟ್ ಬ್ಯಾಂಕಿಗೆ ಮುತ್ತಿಗೆ ಹಾಕಿದರು.
ಅಡಕೆ, ಮಾವು ಮತ್ತು ದಾಳಿಂಬೆ ಬೆಳೆಯುವ ರೈತರು ವಿಮಾ ಕಂತು ಮೊತ್ತವನ್ನು ಸಂಬಂಧಿಸಿದ ಕಂಪನಿಗಳಿಗೆ ತುಂಬಲು ಶನಿವಾರವೇ ಕೊನೆಯ ದಿನವಾಗಿದ್ದು ರೈತರು ದಿಕ್ಕುಗಾಣದಂತಾಗಿದ್ದಾರೆ. ವಿಮೆಯ ಮೊತ್ತವನ್ನು ಜಮಾ ಮಾಡದೇ ಇದ್ದಲ್ಲಿ ಮುಂದೆ ಅವರಿಗೆ ಪರಿಹಾರದ ಮೊತ್ತ ಸಿಗುವುದಿಲ್ಲ. ಈಗ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಖಾಸಗಿಯವರಿಂದ ಹಣ ಹೊಂದಿಸಿಕೊಳ್ಳುವುದು ಸಮಸ್ಯೆಯಾಗಿದೆ ಎಂದರು.
ಕಳೆದ ಮೂರ್‍ನಾಲ್ಕು ವರ್ಷಗಳ ಕಾಲ ಮಳೆ ಇಲ್ಲದೆ ರೈತ ಕುಟುಂಬಗಳು ಬೀದಿಗೆ ಬಂದಿವೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತಾಪಿ ವರ್ಗದವರು ಮಾಡಿರುವ ಸಾಲವನ್ನು ತೀರಿಸಲಾಗದೇ ಇರುವುದರಿಂದ ಈ ಮುಂಗಾರಿಗೆ ಸಾಲವನ್ನು ಬ್ಯಾಂಕ್‌ಗಳು ನೀಡುತ್ತಿಲ್ಲ. ಸಾಲಮನ್ನಾ ಮಾಡುವ ಸರ್ಕಾರದ ಭರವಸೆ ಹುಸಿಯಾಗಿದೆ ಎಂದರು.
ಒಂದೇ ಕಂತಿನಲ್ಲಿ ಹಣವನ್ನು ಸಾಲದ ಮೊತ್ತಕ್ಕೆ ಜಮಾ ಮಾಡಿದ್ದರೆ ಈ ಮುಂಗಾರಿನಲ್ಲಿ ರೈತರು ಮತ್ತೆ ಸಾಲ ಪಡೆದು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದಿತ್ತು. ಆದರೆ, ಸರ್ಕಾರವು ನೀಡಿದ ಅಲ್ಪಪ್ರಮಾಣದ ಮೊತ್ತವು ಬ್ಯಾಂಕಿನಲ್ಲಿನ ಬಡ್ಡಿ ತೀರುವಳಿಗೆ ಸಾಲದಾಗದೆ ರೈತರು ಆತಂಕ ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಬ್ಯಾಂಕ್ ಮುಂದೆ ಬಂದು ಬೆಳೆ ವಿಮಾ ಕಂತು ಮೊತ್ತವನ್ನು ವಿಮಾ ಕಂಪನಿಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಸಾಲವನ್ನು ನೀಡುವಾಗ ಬ್ಯಾಂಕ್‌ಗಳು ನಮ್ಮ ಆಸ್ತಿಯನ್ನು ಅಡವಿಟ್ಟುಕೊಂಡಿದ್ದಾರೆ. ಹಾಗಾಗಿ ನಮ್ಮ ಆಸ್ತಿಗಳ ಮೇಲೆ ಬೇರೆಲ್ಲೂ ಸಾಲ ಪಡೆದುಕೊಳ್ಳಲು ಬರುವುದಿಲ್ಲ. ಹೀಗೆ ಅಡವಿಟ್ಟುಕೊಂಡಿರುವ ಆಸ್ತಿಯ ಮೊತ್ತ ಹಲವು ಲಕ್ಷ ರೂ.ಗಳಾಗುತ್ತದೆ. ಹೀಗಿರುವಾಗ ವಿಮೆಯ ಕಂತಿನ ಹಣವನ್ನು ಬ್ಯಾಂಕಿನಿಂದ ಜಮಾ ಮಾಡಿ ಆ ಮೊತ್ತವನ್ನು ಸಾಲದ ಹಣಕ್ಕೆ ಸೇರಿಸಿಕೊಳ್ಳಬೇಕು. ವಿಮೆ ಕಂಪನಿಗಳಿಂದ ಪರಿಹಾರ ಬಂದಾಗ ಆ ಹಣವನ್ನು ಹೊಂದಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.