ಬಾಗಲಕೋಟೆ: ನಗರದ ಕಾಳಿದಾಸ ಮೈದಾನದಲ್ಲಿ ಜುಲೈ 29 ಮತ್ತು 30 ರಂದು ಹಮ್ಮಿಕೊಂಡ ಸಾವಯವ, ಸಿರಿಧಾನ್ಯ ಹಾಗೂ ಸಿರಿಫಲ ಮೇಳವನ್ನು ಯಶಸ್ವಿಗೊಳಿಸುವಂತೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳ ತವರು ಜಿಲ್ಲೆಯಾಗಿರುವ ಬಾಗಲಕೋಟೆಯಲ್ಲಿ ಸಜ್ಜೆ, ನವಣೆ, ಕುಸಬಿ, ಕಡಲೆ, ತೊಗರಿ, ಮಡಿಕೆ, ಎಳ್ಳು ಮುಂತಾದ ಕಾಳುಗಳನ್ನು ಬೆಳೆಯಲಾಗುತ್ತಿದೆ. ಅನಾದಿ ಕಾಲದಿಂದ ಇಂತಹ ಸಿರಿಧಾನ್ಯಗಳನ್ನು ಬಳಸಿಕೊಂಡು ಉತ್ಕೃಷ್ಟವಾದ ಹಾಗೂ ಸ್ವಾ ದಿಷ್ಟವಾದ ಆಹಾರ ಪದಾರ್ಥ ತಯಾರಿಕೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಹೀಗಾಗಿ ಸಿರಿಧಾನ್ಯಗಳಿಗೆ ಮರು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ಯುವ ಜನತೆ ಸಿರಿಧಾನ್ಯಗಳನ್ನು ಬಳಸಿಕೊಂಡು ನವೀನ ಮಾದರಿ ಹಾಗೂ ಹೊರ ರುಚಿಗಳ ಆಹಾರ ಪದಾರ್ಥಗಳನ್ನು ತಯಾರಿಸಲು ಆಕರ್ಷಕವಾಗಲೆಂದು ಸಿರಿಧಾನ್ಯಗಳ ಅಡುಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಂಡು ಉತ್ತಮ ಆಹಾರ ಪದಾರ್ಥ ತಯಾರಿಸಿದವರಿಗೆ ಪ್ರೋತ್ಸಾಹಿಸಲು ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಜಿಲ್ಲಾ ಮಟ್ಟದ ರೈತರ ಮೇಳ ಯಶಸ್ವಿಯಗಲು ಮ್ಯಾರಥಾನ್ ನಡೆಸಲಾಗುತ್ತಿದೆ. ಇದರಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಸಿರಿಧಾನ್ಯಗಳ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಕೃಷಿ ಜಂಟಿ ನಿರ್ದೇಶಕ ಡಾ|ಪಿ. ರಮೇಶಕುಮಾರ ಮಾತನಾಡಿ, ಸಿರಿಧಾನ್ಯಗಳ ಮಹತ್ವವನ್ನು ತಿಳಿಸಿಕೊಡಲೆಂದೇ ಹೆಸರಾಂತ ಆಹಾರ ತಜ್ಞ ಡಾ|ಖಾದರ ಅವರಿಗೆ ಆಹ್ವಾನಿಸಲಾಗಿದೆ. ರೋಗಳಿಗೆ ಆಹಾರ ಪದ್ಧತಿಯಿಂದ ಹಿಡಿದು ಮನುಷ್ಯನಿಗೆ ಅವಶ್ಯಕತೆ ಇರುವ ಪೋಷಕಾಂಶಗಳನ್ನೊಳಗೊಂಡಿರುವ ಸಿರಿಧಾನ್ಯಗಳ ಬಗ್ಗೆ ಹಾಗೂ ಹಣ್ಣುಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಸುಮಾರು 3 ರಿಂದ 4 ಗಂಟೆಗಳ ಕಾಲ ಸಮಯ ಮೀಸಲಿರಿಸಲಾಗುತ್ತಿದೆ ಎಂದರು. ಇವರ ಜೊತೆಗೆ ಮುಂದಿನ ಪೀಳಿಗೆಗೆ ಸಾವಯವ ಕೃಷಿ ಎಂಬ ವಿಷಯದ ಮೇಲೆ ಸಾವಯವ ಕೃಷಿ ಪರಿಣಿತ ತಜ್ಞ, ನಾಡೋಜ ಎಲ್.ನಾರಾಯಣರೆಡ್ಡಿ ಭಾಗವಹಿಸಲಿದ್ದಾರೆ.
ನಗರದ ಹೆಣ್ಣು ಮಕ್ಕಳು ತಯಾರಿಸುವ ಅಡುಗೆ ಹಾಗೂ ಮಾರ್ಗದರ್ಶನ ನೀಡಲು ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದ ಪ್ರಾಚಾರ್ಯೆ ಪುಷ್ಪಾ ಒಡೆಯರ ಹಾಗೂ ಮಹಿಳಾ ಸಂಘಟನೆಗಳ ವತಿಯಿಂದ ಗಿರಿಜಾ ಅಡಿಕೆನ್ನವರ ಭಾಗವಹಿಸಲಿದ್ದಾರೆ. ಮೇಳಕ್ಕೆ ಅಂದಾಜು 20 ಸಾವಿರ ಜನರು ಬರಬಹುದೆಂದು ನಿರೀಕ್ಷಿಸಲಾಗಿದೆ. 100 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ ಆಯುರ್ವೇದಿಕ್ ಒಣ ಔಷಧಗಳನ್ನು ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ ಎಂದರು. ಈ ಎರಡು ದಿನಗಳವರೆಗೆ ನಡೆಯುವ ಸಿರಿಧಾನ್ಯ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.