Advertisement
“ಅಜ್ಜೀ, ನಮ್ಮ ಮನೆಯ ಕೈತೋಟದಲ್ಲಿ ಎರಡು ಹಕ್ಕಿಗಳನ್ನು ನೋಡಿದೆ. ಅವು ಎಷ್ಟು ಮುದ್ದಾಗಿವೆ! ಮೈ ಪೂರಾ ಬಂಗಾರದ ಬಣ್ಣ. ಪೇರಳೆ ಗಿಡದಲ್ಲಿ ಕುಳಿತು ಚಿಲಿಪಿಲಿ ಅಂತ ಕೂಗಿ ನನ್ನನ್ನು ಕರೆದಂತಾಯಿತು. ಹಕ್ಕಿಗಳು ಮಾತಾಡುತ್ತವೆಯೇ?’ ಪುಟ್ಟ ಸಿರಿ ಮುದ್ದಾಗಿ ಪ್ರಶ್ನೆ ಕೇಳಿದಳು.
Related Articles
“ಇದು ಜಾಣ ಪ್ರಶ್ನೆ. ಮನೆಯ ತೋಟದಲ್ಲಿ ಇನ್ನಷ್ಟು ಗಿಡಗಳನ್ನು ನೆಡೋಣ, ಒಂದು ಸಣ್ಣ ಮಡಿಕೆಯಲ್ಲಿ ಕುಡಿಯಲು ನೀರು, ಅಲ್ಲಲ್ಲಿ ಕಾಳುಗಳನ್ನು ಚೆಲ್ಲಿದರೆ, ಹಕ್ಕಿಗಳು ನಮ್ಮ ಮನೆಯ ಮರದಲ್ಲಿಯೂ ಕೂಡ ಗೂಡು ಕಟ್ಟುತ್ತದೆ. ಎಲ್ಲಿ ಪಕ್ಷಿಗಳಿಗೆ ಆಹಾರ, ನೀರು, ಗಾಳಿ ನಿರ್ಭಯವಾಗಿ ಗೂಡು ಕಟ್ಟಿಕೊಳ್ಳುವ ಅವಕಾಶ ಇರುತ್ತೋ, ಅಲ್ಲೆಲ್ಲ ಹಕ್ಕಿಗಳ ಗುಂಪು ಕಾಣಬಹುದು’
Advertisement
“ಅಜ್ಜಿ ನಾನು ಹಕ್ಕಿಯಾಗಿದ್ದರೆ ಎಷ್ಟು ಚೆನ್ನ? ನಾನು ರಭಸದಿಂದ ಓಡಾಡುವ ವಾಹನಗಳ ಭಯವಿಲ್ಲದೆ, ಆಗಸದಲ್ಲಿ, ಹಾರಾಡುತ್ತ ಖುಷಿಯಾಗಿ ಆಟವಾಡಬಹುದಿತ್ತು.’“ಅದೇನೋ ನಿಜ ಸಿರಿ, ಮನುಷ್ಯನ ಅತಿ ಬುದ್ದಿವಂತಿಕೆ, ಕುತೂಹಲಗಳಿಂದ ಕೆಡುಕೇ ಹೆಚ್ಚಾಗಿದೆ. ಸರಿ, ಈಗಾಗಲೇ ತಡವಾಗಿದೆ, ಸಂಜೆ ನಿನ್ನ ಹುಟ್ಟಿದ ಹಬ್ಬದ ತಯಾರಿ ನಡೆಯುತ್ತಿದೆ. ಮನೆಯೊಳಗೆ ಹೋಗೋಣ ನಿನ್ನ ಗೆಳೆಯರು ಬರುವ ಸಮಯ’ ಎನ್ನುತ್ತಾ ಅಜ್ಜಿ ಮನೆಯೊಳಕ್ಕೆ ಬಂದರು. ಸಂಜೆ ಗೆಳೆಯರೊಂದಿಗೆ ಸಿರಿಯ ಹುಟ್ಟುಹಬ್ಬದ ಆಚರಣೆ ಶುರುವಾಯಿತು. ಸಿರಿಯ ಗೆಳತಿಯರು ಬಂದರು. ಮನೆ ತುಂಬಾ ಬಣ್ಣಬಣ್ಣದ ಹೀಲಿಯಂ ಅನಿಲ ತುಂಬಿದ ಬಲೂನುಗಳು ಇದ್ದವು. ಹೀಲಿಯಂ ಅನಿಲ ತುಂಬಿದ ಬಲೂನು ಗಾಳಿಯಲ್ಲಿ ಮೇಲೇರುವ ಸಂಗತಿ ಸಿರಿಗೆ ಗೊತ್ತಿತ್ತು. ಅವನ್ನು ಸಿರಿ ಮತ್ತವಳ ಗೆಳತಿಯರು ಮನೆಯ ತುಂಬಾ ಹಾರಿಸಿ ಸಂಭ್ರಮಿಸುತ್ತಿದ್ದರು. ಹುಟ್ಟಿದ ಹಬ್ಬದ ಆಚರಣೆ ಮುಗಿಯಿತು. ಮಕ್ಕಳ ಆಟ, ಹಾಡು ತಿನಿಸು ಕಾರ್ಯಕ್ರಮ ಮುಗಿಯುತ್ತಲೇ, ಮನೆಗೆ ಹೊರಟ ಗೆಳೆಯರಿಗೆಲ್ಲ ಒಂದೊಂದು ಬಲೂನ್ ಕೊಟ್ಟಳು ಸಿರಿ. ಆಗಲೇ ಅವಳಿಗೆ ಇದನ್ನು ಹಿಡಿದುಕೊಂಡರೆ ನಾನೂ ಆಗಸದಲ್ಲಿ ತೇಲಬಹುದೇ ಹಕ್ಕಿಗಳಂತೆ’ ಎಂಬ ಆಲೋಚನೆ ಬಂದಿತು. ಅದೇ ಗುಂಗಿನಲ್ಲಿ ನಿದ್ದೆಗೆ ಜಾರಿದಳು ಸಿರಿ. ಕಣ್ಣು ಬಿಟ್ಟಾಗ ಅವಳ ಬಳಿ ಒಂದು ದೊಡ್ಡ ಹೀಲಿಯಂ ಬಲೂನು ಇತ್ತು. ಅವಳು ಉಟ್ಟಿದ್ದ ಹೊಸ ಕೆಂಪು ಬಣ್ಣದ ಉಡುಗೆಗೆ ಹೊಂದುವಂತೆ, ಕೆಂಪು ಬಣ್ಣದ ಬಲೂನ್ ಅದು! ಅದರ ದಾರ ಹಿಡಿದು ಮಹಡಿ ಮೇಲೆ ಬಂದಳು ಸಿರಿ. ಆಕಾಶದಲ್ಲಿ ಬಂಗಾರದ ಹಕ್ಕಿಗಳು ಹಾರಾಡುತ್ತಿದ್ದವು. ಅದನ್ನು ನೋಡಿ ತಾನು ಅವುಗಳ ಜತೆ ಹಾರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಂಡಳು. ಅಷ್ಟರಲ್ಲಿ ಜೋರಾಗಿ ಗಾಳಿ ಬೀಸತೊಡಗಿತು. ನಿಧಾನವಾಗಿ ಬಲೂನು ಗಾಳಿಯಲ್ಲಿ ಏರತೊಡಗಿತು. ಅದರ ಜತೆಗೆ ಸಿರಿ ಕೂಡ ಮೇಲೇರತೊಡಗಿದಳು. ಅವಳ ಸುತ್ತಮುತ್ತ ಬಂಗಾರದ ಹಕ್ಕಿಗಳು ಕಂಡವು. ಅವುಗಳ ಜತೆ ಸಿರಿ ಮಾತಾಡಿದಳು. ಅಷ್ಟರಲ್ಲಿ ಅವಳಿಗೆ ಅಜ್ಜಿಯ ದನಿ ಕೇಳಿಸಿತು. ಆಕಾಶದಲ್ಲಿ ಅಜ್ಜಿಯ ದನಿ ಹೇಗೆ ಬರುತ್ತಿದೆ ಎಂದುಕೊಳ್ಳುಷ್ಟರಲ್ಲಿ ಸಿರಿಗೆ ನಿದ್ದೆಯಿಂದ ಎಚ್ಚರವಾಗಿತ್ತು. ಇಷ್ಟು ಹೊತ್ತು ತಾನು ಕಂಡಿದ್ದು ಕನಸು ಎಂದು ಅರ್ಥವಾಗಿತ್ತು. “ಇರು ಅಜ್ಜಿ. ಎರಡು ನಿಮಿಷ, ಹಕ್ಕಿಗಳಿಗೆ ಟಾಟಾ ಮಾಡಿ ಬರ್ತಿನಿ’ ಎಂದು ಮತ್ತೆ ನಿದ್ದೆಗೆ ಜಾರಿದಳು ಸಿರಿ. ಅಜ್ಜಿ ನಸು ನಗುತ್ತ, ಸಿರಿಯ ಹಣೆಗೆ ಹೂಮುತ್ತನ್ನಿತ್ತರು. - ಕೆ.ವಿ. ರಾಜಲಕ್ಷ್ಮೀ