Advertisement

ಸಿರಿಯಾ ಬೆಂಕಿಯಲ್ಲಿ ಬೆಂದು ಭಾರತದಲ್ಲಿ ಅರಳಿದ ಪ್ರತಿಭೆ

10:17 AM Feb 26, 2020 | sudhir |

ಭುವನೇಶ್ವರ: ಸದಾ ಗುಂಡಿನ ಸದ್ದು, ಎಲ್ಲೆಂದರಲ್ಲಿ ರಕ್ತದ ಕಲೆ. ಅಂತಹ ರಾಷ್ಟ್ರಗಳ ಪೈಕಿ ಸಿರಿಯಾಕ್ಕೆ ಅಗ್ರ ಸ್ಥಾನವಿದೆ. ಅಲ್ಲಿನ ಪರಿಸ್ಥಿತಿಗೆ ಹೈರಾಣಾಗಿ ಆ ರಾಷ್ಟ್ರದ ಫ‌ುಟ್‌ಬಾಲ್‌ ಪ್ರತಿಭೆಯೊಂದು ಭಾರತಕ್ಕೆ ಓಡಿ ಬಂದಿದೆ. ಮಾತ್ರವಲ್ಲ ಇಲ್ಲಿನ ಕಳಿಂಗ ವಿವಿ ತಂಡದ ಪರ ಖೇಲೋ ಇಂಡಿಯಾ ಕೂಟದಲ್ಲಿ ಆಡಲು ಸಜ್ಜಾಗಿದೆ.

Advertisement

ಹೆಸರು ಅಹ್ಮದ್‌ ಅಲ್‌ ಹಬಬ್‌, 20 ವರ್ಷ, ಊರು ಸಿರಿಯಾದ ಅಲೆಪ್ಪೊ. ಹಬಬ್‌ಗ ಫ‌ುಟ್‌ಬಾಲ್‌ ಅಂದರೆ ಪಂಚಪ್ರಾಣ. ಸಿರಿಯಾದಲ್ಲೇ ಇದ್ದುಕೊಂಡು
ಹಬಬ್‌ಗ ಏನಾದರೂ ಸಾಧಿಸ ಬೇಕೆಂಬ ಕನಸು. ಆದರೆ ಸಿರಿಯಾದಲ್ಲಿ ಆಗಾಗ್ಗೆ ಜಿಹಾದಿ ಮತಾಂಧರ ಉಪಟಳ, ಗುಂಡಿನ ಭೋರ್ಗರೆತ, ಕಣ್ಣೆದುರಲ್ಲೇ ಸ್ನೇಹಿತರ ಹತ್ಯೆ, ಇದೆಲ್ಲವನ್ನು ಕಂಡು ರೋಸಿಹೋದ ಹುಡುಗ ತನ್ನ ದೇಶದಿಂದಲೇ ಕಾಲ್ಕಿತ್ತ ಸಿರಿಯಾದಿಂದ ಶಾರ್ಜಾಕ್ಕೆ ಬಂದ, ಅಲ್ಲಿಂದ ಮುಂಬಯಿ ತಲುಪಿದ, ಬಳಿಕ ಒಡಿಶಾದ ಭುವನೇಶ್ವರಕ್ಕೆ ಬಂದು ಕಳಿಂಗ ವಿವಿಯನ್ನು ಸೇರಿಕೊಂಡು ಅಲ್ಲಿ ಮೊದಲ ವರ್ಷದ ಬ್ಯಾಚುಲರ್‌ ಆಫ್ ಟೆಕ್ನಾಲಜಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮಾತ್ರವಲ್ಲ ಅಲ್ಲಿನ ತಂಡವನ್ನೇ ಖೇಲೋ ಇಂಡಿಯಾ ವಿವಿ ಕೂಟದ ಫ‌ುಟ್‌ಬಾಲ್‌ನಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ!

ಭಾರತಕ್ಕೆ ಬಂದದ್ದೇ ಆಶ್ಚರ್ಯ!
ಭಾರತಕ್ಕೆ ಹೋಲಿಸಿದರೆ ಸಿರಿಯಾ ಫ‌ುಟ್‌ಬಾಲ್‌ನಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಅಲ್ಲಿನ ಪರಿಸ್ಥಿತಿ ಏನೇ ಇದ್ದರೂ 2018ರ ಫಿಫಾ ವಿಶ್ವಕಪ್‌ ಕೂಟಕ್ಕೆ ಸಿರಿಯಾ ಅರ್ಹತೆಯ ಸನಿಹ ತಲುಪಿತ್ತು. ಅಂತಹ ರಾಷ್ಟ್ರದಿಂದ ಬಂದ ಯುವಕ ಹಬಬ್‌ ಫ‌ುಟ್‌ಬಾಲ್‌ನಲ್ಲಿ ಅಂಬೆಗಾಲಿಡುತ್ತಿರುವ ಭಾರತದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಬಯಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.

ಸಿರಿಯಾದಲ್ಲಿ ಫ‌ುಟ್‌ಬಾಲಿಗರಿಗಿಲ್ಲ ಭವಿಷ್ಯ
ಸಿರಿಯಾದ ಬಗ್ಗೆ ಹಬಬ್‌ ಹೇಳಿ ರುವುದು ಹೀಗೆ, “ಸಿರಿಯಾದಲ್ಲಿ ವೃತ್ತಿಪರ ಫ‌ುಟ್‌ಬಾಲಿಗನಾಗಿ ಉಳಿ ಯುವುದು ಕಷ್ಟ. ಕಣ್ಣೆದುರಲ್ಲೇ ಫ‌ುಟ್‌ಬಾಲಿಗರು ದಂಗೆಗೆ ಬಲಿಯಾಗು ತ್ತಿದ್ದಾರೆ. ಅದೆಷ್ಟೋ ಕೋಚ್‌ಗಳು ಹತ್ಯೆಯಾಗಿದ್ದಾರೆ. ಕ್ರೀಡಾಂಗಣಗಳು ಗುಂಡು, ಬಾಂಬ್‌ ದಾಳಿಗೆ ನಲುಗಿ ಹೋಗಿವೆ. ಇವೆಲ್ಲವನ್ನು ಕಣ್ಣಾರೆ ಕಂಡ ಬಳಿಕ ಅಲ್ಲಿ ನಿಲ್ಲುವುದಕ್ಕೆ ಸಾಧ್ಯವಾಗು ತ್ತಿಲ್ಲ.

ಫ‌ುಟ್‌ಬಾಲಿಗನಾಗಿ ಉಳಿದು ಏನಾದರೂ ಸಾಧಿಸಬೇಕೆಂಬ ಕನಸು ನನಸಾಗಬೇಕಾದರೆ ವಿದೇಶಕ್ಕೆ ಹೋಗಿ ಕ್ಲಬ್‌ ತಂಡವನ್ನು ಸೇರಿಕೊಳ್ಳುವುದು ಅನಿವಾರ್ಯ. ಇದೆಲ್ಲವನ್ನು ಅರಿತು, ಇಲ್ಲಿ ನನಗೆ ಭವಿಷ್ಯ ಸಿಗಬಹುದು ಎನ್ನುವ ಭರವಸೆಯೊಂದಿಗೆ ಭಾರತಕ್ಕೆ ಬಂದಿದ್ದೇನೆ…’

Advertisement
Advertisement

Udayavani is now on Telegram. Click here to join our channel and stay updated with the latest news.

Next