ಸಿರವಾರ: ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಬಾರದೆಂದು ಸರ್ಕಾರ ನಿಯಮ ರೂಪಿಸಿ ಜಾರಿಗೆ ತಂದಿದೆ. ಈ ಕುರಿತು ಚಾಲಕರಲ್ಲಿ ಜಾಗೃತಿ ಮೂಡಿಸಿದ್ದರೂ ಕೂಡ ವಾಹನಗಳ ಚಾಲಕರು, ಮಾಲಿಕರು ನಿಯಮಗಳನ್ನು ಮೀರಿ ಸರಕು ವಾಹನಗಳಲ್ಲಿ ಜನರನ್ನು ಸಾಗಿಸುತ್ತಿದ್ದಾರೆ.
ಗೂಡ್ಸ್ ವಾಹನಗಳಲ್ಲಿ ಚಾಲಕ ಮತ್ತು ಕ್ಲೀನರ್ ಹೊರತುಪಡಿಸಿ ಜನರ ಸಂಚಾರವನ್ನು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸರ್ಕಾರ ನಿಷೇಧಿಸಿದೆ. ಆದರೆ ತಾಲೂಕಿನಾದ್ಯಂತ ಕೂಲಿ ಕಾರ್ಮಿಕರು, ಶಾಲಾ ಮಕ್ಕಳನ್ನು ಸರಕು ವಾಹನಗಳಲ್ಲೇ ಸಾಗಿಸಲಾಗುತ್ತಿದೆ. ಸರಕು ವಾಹನಗಳ ಚಾಲಕರು ಅತೀ ವೇಗವಾಗಿ ವಾಹನ ಚಲಾಯಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಜನರ ಪಾಲಿಗೆ ಯಮಧೂತವಾಗುತ್ತಿವೆ. ಇತ್ತೀಚೆಗೆ ಪಟ್ಟಣದ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮರಳಿ ಸರಕು ವಾಹನದಲ್ಲಿ ಆಗಮಿಸುತ್ತಿರುವಾಗ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆಯೇ ಇದಕ್ಕೆ ಸಾಕ್ಷಿ.
ಕೂಲಿ ಕಾರ್ಮಿಕರ ಸಾಗಾಟ: ಸರಕು ವಾಹನಗಳಲ್ಲಿ ಜನರ ಸಾಗಾಟ ನಿಷೇಧಿಸಿದ್ದರೂ ದಿನನಿತ್ಯ ತಾಲೂಕಿನ ಸುತ್ತಲಿನ ಗ್ರಾಮಗಳ ಕೂಲಿಕಾರರನ್ನು ಸರಕು ವಾಹನಗಳಲ್ಲೇ ಕರೆದೊಯ್ಯಲಾಗುತ್ತಿದೆ. ನವಲಕಲ್ಲು, ಕಡದಿನ್ನಿ, ಮಲ್ಲಟ, ಗಣದಿನ್ನಿ ಸೇರಿದಂತೆ ಅನೇಕ ಹಳ್ಳಿಗಳ ಕೂಲಿ ಕಾರ್ಮಿಕರನ್ನು ಸರಕು ಸಾಗಿಸುವ ವಾಹನಗಳಲ್ಲೇ ದೇವದುರ್ಗ ತಾಲೂಕಿನ ಗಬ್ಬೂರು, ಗೂಗಲ್ ಸೇರಿ ವಿವಿಧ ಗ್ರಾಮಗಳಿಗೆ ಭತ್ತ ನಾಟಿ ಮಾಡುವುದಕ್ಕೆ ಕರೆದೊಯ್ಯಲಾಗುತ್ತಿದೆ. ಯುವಕರು, ಮಹಿಳೆಯರು ತಮ್ಮ ಜೀವದ ಹಂಗು ತೊರೆದು ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಾರೆ. ಪೊಲೀಸರೆದುರೇ ಇಂತಹ ವಾಹನಗಳು ಓಡಾಡುತ್ತಿದ್ದರೂ ಅವರು ಕೂಡ ಮೂಕ ಪ್ರೇಕ್ಷಕರಾಗಿದ್ದಾರೆ.
ಶಾಲಾ ವಾಹನಗಳ ದರ್ಬಾರ್: ಪಟ್ಟಣದ ಕೆಲ ಪಾಲಕರು ತಮ್ಮ ಮಕ್ಕಳನ್ನು ಆಟೋಗಳಲ್ಲಿ ಶಾಲೆಗೆ ಕಳುಹಿಸುತ್ತಾರೆ. ಆದರೆ ಆಟೋಗಳ ಮಾಲೀಕರು ಮಕ್ಕಳನ್ನು ಕುರಿ ಹಿಂಡಿನಂತೆ ತುಂಬಿಕೊಂಡು ಹೋಗುತ್ತಾರೆ. ಹಳ್ಳಿ, ದೊಡ್ಡಿ, ತಾಂಡಾಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಪಟ್ಟಣ ಪ್ರದೇಶಗಳಿಗೆ ಗೂಡ್ಸ್ ವಾಹನಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ.
ರಾಜಕೀಯ ಒತ್ತಡ : ಗೂಡ್ಸ್ ವಾಹನಗಳು ಪಟ್ಟಣದಲ್ಲಿ ಸಂಚರಿಸುವಾಗ ಪೊಲೀಸ್ ಇಲಾಖೆಯವರು ಹಿಡಿದರೆ, ಚಾಲಕರು, ಮಾಲಿಕರು ರಾಜಕೀಯ ನಾಯಕರ ಮೇಲೆ ಒತ್ತಡ ತಂದು ವಾಹನವನ್ನು ಬಿಡಿಸಿಕೊಳ್ಳುತ್ತಾರೆ. ಹೀಗಾಗಿ ಪೊಲೀಸರು ನಿಸ್ಸಹಾಯಕರಾಗಿ ವಾಹನಗಳನ್ನು ಬಿಡಬೇಕಾದ ಪರಿಸ್ಥಿತಿ ಇದೆ.
ಆಗ್ರಹ: ಸರ್ಕಾರ ಸರಕು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಕರ ಸಂಚಾರ ನಿಷೇಧಿಸಿದ್ದು ಸ್ವಾಗತಾರ್ಹ. ಆದರೆ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸದ್ದರಿಂದ ಗ್ರಾಮೀಣ ಜನತೆ, ವಿದ್ಯಾರ್ಥಿಗಳು ಅನಿವಾರ್ಯವಾಗಿ ಸರಕು ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಸಾರಿಗೆ ಇಲಾಖೆ ಗ್ರಾಮೀಣ ಭಾಗಕ್ಕೆ, ತಾಂಡಾ, ದೊಡ್ಡಿಗಳಿಗೆ ಸಮರ್ಪಕ ಬಸ್ ಸೇವೆ ಕಲ್ಪಿಸಬೇಕೆಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಇನ್ನಾದರೂ ಅಧಿಕಾರಿಗಳು ಸರಕು ವಾಹನಗಳಲ್ಲಿ ಸಾರ್ವಜನಿಕರ ಸಂಚಾರ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕಿದೆ.