ಶಿರಸಿ: ಕಳೆದ ಎಂಟು ದಿನಗಳ ಹಿಂದೆ ತಾಲೂಕಿನ ಬನವಾಸಿ ಸಮೀಪದ ಅಂಡಗಿ ಸಮೀಪ ನಡೆದ 50 ಲಕ್ಷ ರೂ.ದರೋಡೆಗೆ ಸಂಬಂಧಿಸಿ 9 ಮಂದಿ ಅಂತರ್ ಜಿಲ್ಲಾ ದರೋಡೆಕೋರರನ್ನು ಶಿರಸಿ ಉಪ ವಿಭಾಗದ ಪೊಲೀಸರು ಬಂಧಿಸಿ 13.82 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ನ.19 ರ ಸಂಜೆ ಹಸನ್ ಜಾವೇದ್‌ಖಾನ್ ಎಂಬುವವರು ತನ್ನ ಇಬ್ಬರು ಸಂಬಂಧಿಕರೊಂದಿಗೆ 50 ಲಕ್ಷ ರೂ.ತೆಗೆದುಕೊಂಡು ಬೆಳಗಾವಿಯಲ್ಲಿ ಸೈಟ್ ನೋಡಿಕೊಂಡು ಕಾರಿನಲ್ಲಿ ವಾಪಸ್ ಬರುತ್ತಿರುವಾಗ ಅಂಡಗಿ ಬಸ್ ನಿಲ್ದಾಣದ ಹತ್ತಿರ ಒಂದು ಕೆಂಪು ಬಣ್ಣದ ಕಾರಿನಲ್ಲಿ ಬಂದ ದರೋಡೆಕೋರರು ಅಡ್ಡ ಹಾಕಿದ್ದರು. ಹಿಂಬದಿ ಸೀಟಿನ ಮೇಲಿದ್ದ 50 ಲಕ್ಷ ರೂಪಾಯಿ ಹಣವಿದ್ದ ಪ್ಲಾಸ್ಟಿಕ್ ಚೀಲವನ್ನು ಕಸಿದುಕೊಂಡು ಪರಾರಿಯಾದ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆಸೀಫ್ ಅಬ್ದುಲ್ ಸತ್ತಾರ್ ಸಾಗರ, ಅಬ್ದುಲ್ ಹಮೀದ್ ಅಬ್ದುಲ್ ಸತ್ತಾರ್ ಸಿದ್ಧಾಪುರ, ಅಜಿಮುಲ್ಲಾ ಅಕ್ಷರಸಾಬ್ ಸಿದ್ಧಾಪುರ, ಮನ್ಸೂರ ಜಾಫರ್ ಖಾನ್ ಸಾಗರ, ಅಬ್ದುಲ್ ರೆಹಮಾನ ಶಟ್ಟರ್ ವಟರಾಗ ಭಟ್ಕಳ, ರಿಯಾಜ್ ಫಯಾಜ್ ಕೊಪ್ಪ,ವಿಶ್ವನಾಥ ವಾಸು ಶೆಟ್ಟಿ ಕೊಪ್ಪ, ಮನೋಹರ ಆನಂದ ಶೆಟ್ಟಿ ಕೊಪ್ಪ, ಈಕ್ವಾಲ್ ಅಬ್ದುಲ್ ಕೆ. ತೀರ್ಥಹಳ್ಳಿ ಇವರುಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರು, 12 ಮೊಬೈಲ್ ಹಾಗೂ ಜಿಪಿಎಸ್ ಟ್ರ‍್ಯಾಕರ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲ ಆರೋಪಿಗಳ ಪತ್ತೆ ಹಾಗೂ ನಗದು ಜಪ್ತು ಬಾಕಿ ಇದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಪತ್ತೆಕಾರ್ಯದಲ್ಲಿ ಉಸ್ತುವಾರಿ ವಹಿಸಿದ ಡಿವೈಎಸ್‌ಪಿ ರವಿ ಡಿ. ನಾಯ್ಕ, ತನಿಖಾಧಿಕಾರಿಯಾದ ಸಿಪಿಐ ರಾಮಚಂದ್ರ ನಾಯಕ, ಪತ್ತೆ ತಂಡದ ಅಧಿಕಾರಿ ಪಿಎಸ್‌ಐಗಳಾದ ಹನುಮಂತ ಬಿರಾದಾರ, ಭೀಮಾ ಶಂಕರ ಸಿನೂರು, ಚಂದ್ರಕಲಾ ಪತ್ತಾರ, ಸಿಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್ ಬಹುಮಾನ ಘೋಷಿಸಿದ್ದಾರೆ.