Advertisement
100 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆ ಸುಸಜ್ಜಿತವಾದ ಕಟ್ಟಡ, ಕೊಠಡಿಗಳು, ನವೀಕರಣಗೊಂಡ ಉಪಕರಣಗಳು ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿದ್ದು, ಹೈಟೆಕ್ ಆಸ್ಪತ್ರೆಯಂತಿದೆ. ಆದರೆ ಸೂಕ್ತ ತಜ್ಞ ವೈದ್ಯರಿಲ್ಲದೆ, ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ.
Related Articles
Advertisement
ಸ್ತ್ರೀರೋಗ ತಜ್ಞರೇ ಇಲ್ಲ: ಪ್ರತಿ ಗುರುವಾರ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ನೂರಾರು ಗರ್ಭಿಣಿಯರು ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ಸ್ತ್ರೀರೋಗ ತಜ್ಞರೇ ಇಲ್ಲ. ಇನ್ನು ಇಲ್ಲಿ 21 ನರ್ಸ್‌ಗಳ ಅವಶ್ಯಕತೆ ಇದ್ದು, ಇದರಲ್ಲಿ 9 ಹುದ್ದೆಗಳು ಖಾಲಿ ಇವೆ. ಮಧ್ಯಾಹ್ನ ಮತ್ತು ರಾತ್ರಿ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬಂದರೆ ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಅವಲಂಬನೆ: ಇನ್ನು ಮಕ್ಕಳ ತಜ್ಞರಿಲ್ಲದೆ ಇರುವುದರಿಂದ ಈ ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಬರುವ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಚಿಕಿತ್ಸೆ ದೊರೆಯದಿರುವುದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಕೊಡಿಸುವುದು ಸಾಮಾನ್ಯವಾಗಿದೆ. ಮಕ್ಕಳ ವೈದ್ಯರನ್ನು ನೇಮಿಸಬೇಕೆಂದು ಸಾರ್ವಜನಿಕರಿಂದ ಸಾಕಷ್ಟು ಹೋರಾಟ ನಡೆಸಿದ್ದರೂ ಅವರ ಕೂಗಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.
ಕುಡಿಯುವ ನೀರಿಗೂ ಬರ: ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರನ್ನೊದಗಿಸಲು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆದರೆ ಶುದ್ಧ ನೀರು ಮಾತ್ರ ಈ ಘಟಕದಿಂದ ಬರುತ್ತಿಲ್ಲ. ಇದರಿಂದಾಗಿ ಅಶುದ್ಧ ನೀರನ್ನು ರೋಗಿಗಳು ಕುಡಿಯುತ್ತಿದ್ದಾರೆ. ಒಟ್ಟಾರೆ ಸುಸಜ್ಜಿತ ಕಟ್ಟಡ ಹೊಂದಿರುವ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ, ‘ನಾವಿಕನಿಲ್ಲದ ದೋಣಿಯಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.
ತಾಲೂಕಿನ ಬಹುತೇಕ ಹಳ್ಳಿಗಳ ಜನ ಈ ಆಸ್ಪತ್ರೆಯನ್ನೇ ಆಶ್ರಯಿಸಿದ್ದು, ಸರ್ಕಾರ ತಕ್ಷಣವೇ ಖಾಲಿ ಇರುವ ತಜ್ಞ ವೈದ್ಯರನ್ನು ನೇಮಕ ಮಾಡಿ ರೋಗಿಗಳ ಸಮಸ್ಯೆಗೆ ಮುಕ್ತಿ ಕೊಡಬೇಕಾಗಿದೆ. ಅಲ್ಲದೆ, ಆಸ್ಪತ್ರೆಯ ಮುಂಭಾಗದಲ್ಲಿ ಉದ್ಯಾನವನ್ನು ನಿರ್ಮಿಸುವ ಮೂಲಕ ಜನರ ಆರೋಗ್ಯ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
30 ಹಾಸಿಗೆಯಿರುವ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಸೂಕ್ತ ತಜ್ಞ ವೈದ್ಯರು ಮತ್ತು ನರ್ಸ್, ‘ಡಿ’ ದರ್ಜೆ ನೌಕರರ ಕೊರತೆಯಿದ್ದು, ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾಲಿ ಇರುವ ವೈದ್ಯರೇ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಸಿಬ್ಬಂದಿ ಕೊರತೆ ಬಗ್ಗೆ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.•ಡಾ| ಡಿ.ಜಗನ್ನಾಥ್,
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ. ಬಸವರೆಡ್ಡಿ