Advertisement

ಮಿನಿಫೈಟ್: ಶಿರಾ ಬಿಜೆಪಿ ಅಭ್ಯರ್ಥಿ ಬಹುತೇಕ ಅಂತಿಮ, ರಾಜೇಶ್ ಗೌಡ ಇಂದು ಬಿಜೆಪಿ ಸೇರ್ಪಡೆ

12:42 PM Oct 03, 2020 | keerthan |

ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ವೇಗ ಪಡೆಯುತ್ತಿದೆ. ರಾಜಕೀಯ ಪಕ್ಷಗಳು ಯಾರನ್ನು ಚುನಾವಣಾ ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ.

Advertisement

ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರಭಲವಾಗಿರುವ ಈ ಕ್ಷೇತ್ರದಲ್ಲಿ ಈ ಬಾರಿಯಾದರೂ ಕಮಲ ಅರಳಿಸುವ ಯೋಜನೆಯಲ್ಲಿದ್ದಾರೆ ಬಿಜೆಪಿ ನಾಯಕರು.

ರಾಜೇಶ್ ಗೌಡ ಬಿಜೆಪಿ ಸೇರ್ಪಡೆ
ವೈದ್ಯರಾಗಿರುವ ರಾಜೇಶ್ ಗೌಡರನ್ನು ಶಿರಾದಲ್ಲಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಡಾ. ರಾಜೇಶ್ ಗೌಡ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ನ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಮತ್ತು ಜೆಡಿಎಸ್ ನ ಒಬ್ಬರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಇದನ್ನೂ ಓದಿ:ಡಿಕೆಶಿ ಭಾವೀ ಅಳಿಯ ಅಚ್ಚರಿಯ ಅಭ್ಯರ್ಥಿ?

ಟಿಕೆಟ್ ಸಿಗುವುದು ಹೈಕಮಾಂಡ್ ಮಟ್ಟದಲ್ಲಿ ಖಚಿತವಾದ ಹಿನ್ನಲೆಯಲ್ಲಿ ರಾಜೇಶ್ ಗೌಡ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ವೈದ್ಯರಾಗಿರುವ ರಾಜೇಶ್ ಗೌಡ ಕ್ಷೇತ್ರದಲ್ಲಿ ಹೆಸರು ಸಂಪಾದಿಸಿದ್ದು, ಈ ಹಿಂದೆಯೂ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

Advertisement

ರಾಜೇಶ್ ಗೌಡ ಅವರ ತಂದೆ ಮೂಡಲಗಿರಿಯಪ್ಪ ಕಾಂಗ್ರೆಸ್ ಸದ್ಯರಾಗಿದ್ದರು. ಆದರೆ ರಾಜೇಶ್ ಗೌಡ ಇದುವರೆಗೆ ಯಾವುದೇ ಪಕ್ಷದಲ್ಲಿ ಅಧಿಕೃತವಾಗಿ ಕಾಣಿಸಿಕೊಂಡಿರಲಿಲ್ಲ. ಕುಂಚಿಟಿಗ ಒಕ್ಕಲಿಗರಾಗಿರುವ ರಾಜೇಶ್ ಗೌಡ ಅದೇ ಸಮುದಾಯಕ್ಕೆ ಸೇರಿರುವ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರ ಮತಗಳನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರವು ಇದೆ. ಅದಲ್ಲದೆ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಬಿಜೆಪಿ ಸರ್ಕಾರ ಕೆಲವೇ ದಿನಗಳ ಹಿಂದೆ ಕಾಡುಗೊಲ್ಲ ಅಭಿವೃದ್ದಿ ಮಂಡಳಿಯನ್ನು ರಚಿಸಿದೆ. ಹೀಗಾಗಿ ಕಾಡುಗೊಲ್ಲ ಪಂಗಡದ ಮತಗಳು ವರವಾಗಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next