ಹುಬ್ಬಳ್ಳಿ: ‘ಸಾಹೇಬ್ರಾ ನಮ್ಮ ಹೊಲ್ದಾನ ಬೆಳಿ ಹೋಗಿದ್ದಿಕ್ಕಿಂತ ಹೆಚ್ಚಿನ ನೋವು ನಮ್ಮ ಹೊಲಾನಾ ಹೋಗಿದ್ದಕ್ಕೆ ಆಗೈತಿ. ಮೊದಲಿನಂತೆ ಹೊಲ ಮಾಡ್ಕೊಳ್ಳಿಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಕ್ಕೈತಿ. ಸರಕಾರದಿಂದ ನಮ್ಮ ಹೊಲ ಸುದ್ದ ಮಾಡಿಕೊಡಿ. ಇಲ್ಲಾ ಅಂದ್ರ ರೈತಾಪಿ ಜನ ಬಿತ್ತಿ ಬೆಳೆಯೋದು ಹೆಂಗ’
ಹೊಲ ಪೂರ್ತಿ ಉಸುಕು: ಸಾಲಸೋಲ ಮಾಡಿ ಬಿತ್ತಿ ಬೆಳೆದು ನಿಂತ ಬೆಳೆ ಕಳೆದುಕೊಂಡಿರುವ ದುಃಖ ಒಂದೆಡೆಯಾದರೆ ಇಡೀ ಹೊಲವೇ ಹಳ್ಳವಾಗಿ ಮಾರ್ಪಾಡಾಗಿದೆ. ತುಪ್ಪರಿ ಹಳ್ಳದ ಅಕ್ಕಪಕ್ಕದಲ್ಲಿರುವ ಭೂಮಿಯಲ್ಲಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಮೀಟರ್ ಎತ್ತರದಲ್ಲಿ ಮರಳು ತುಂಬಿಕೊಂಡಿದೆ. ಬೆಳೆ, ಹೊಲದ ಬದುವು, ಕೃಷಿ ಹೊಂಡ ಎಲ್ಲವೂ ಕೊಚ್ಚಿ ಹೋಗಿವೆ. ಒಂದು ಹೆಕ್ಟೇರ್ ಜಮೀನಿನ ಸುಧಾರಣೆಗೆ ಒಂದು ಲಕ್ಷ ರೂ. ಖರ್ಚಾಗುತ್ತದೆ. ಮೊದಲಿನಂತೆ ತಮ್ಮ ಜಮೀನನ್ನು ತಯಾರು ಮಾಡಿಕೊಳ್ಳುವುದು ಹೇಗೆ ಎಂಬ ಆತಂಕ ರೈತರಲ್ಲಿ ಮೂಡಿದೆ.
ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ ಬೆಳೆ ನಾಶಕ್ಕೆ 6800 ರೂ. ಪರಿಹಾರ ನಿಗದಿ ಮಾಡಲಾಗಿದೆ. ಈ ಹಣ ಬೀಜಕ್ಕೆ ಸಾಲುವುದಿಲ್ಲ. ಬೆಳೆಯನ್ನೇ ನಂಬಿ ಬದುಕುವ ರೈತರ ಪಾಡೇನು. ಒಂದು ಎಕರೆಯಲ್ಲಿ 50-60 ಕ್ವಿಂಟಲ್ ಈರುಳ್ಳಿ, 5-6 ಕ್ವಿಂಟಲ್ ಹೆಸರು, 25 ಕ್ವಿಂಟಲ್ ಮೆಕ್ಕೆಜೋಳ ತೆಗೆಯುತ್ತಿದ್ದೆವು. ಇಂತಹ ಫಲವತ್ತಾದ ಭೂಮಿ ಮರಳುಗುಡ್ಡೆಯಾಗಿದೆ. ಹೊಲದ ಸುಧಾರಣೆ ಹೇಗೆ ಎಂದು ತಂಡದ ಮುಂದೆ ನೋವು ತೋಡಿಕೊಂಡರು.
ಸರಕಾರವೇ ಅಭಿವೃದ್ಧಿಪಡಿಸಲಿ: ಲಕ್ಷಾಂತರ ರೂ. ಖರ್ಚು ಮಾಡಿ ಹೊಲ ಸುಧಾರಣೆ ಮಾಡುವ ಸಾಮರ್ಥ್ಯ ಬಡ ರೈತರಿಗಿಲ್ಲ. ಹೀಗಾಗಿ ಸರಕಾರವೇ ಇಂತಹ ಹೊಲಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ತಂಡ ಕೇಂದ್ರ ಸರಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಪ್ರಸ್ತಾಪಿಸುವಂತೆ ರೈತರು ಮನವಿ ಮಾಡಿದರು.
Advertisement
ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಳಿ ತುಪ್ಪರಿ ಹಳ್ಳದ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ರೈತರು ಕೇಂದ್ರ ಪ್ರವಾಹ ಅಧ್ಯಯನ ತಂಡದ ಮುಂದೆ ಅಳಲು ತೋಡಿಕೊಂಡ ಪರಿ ಇದು. ಬೆಳೆ ನಾಶವಾದರೆ ಪರವಾಗಿಲ್ಲ ಭೂ ತಾಯಿ ಕೃಪೆ ತೋರಿದರೆ ಇನ್ನೊಂದು ಬೆಳೆ ಬೆಳೆದು ನಷ್ಟ ಸರಿದೂಗಿಸಿಕೊಳ್ಳಬಹುದು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಬರದಿಂದ ತತ್ತರಿಸಿದ್ದೇವೆ. ಈ ವರ್ಷ ಪ್ರವಾಹ ಹಾಗೂ ಮಳೆಯಿಂದ ಜೀವನವನ್ನೇ ಕಳೆದುಕೊಂಡಿದ್ದೇವೆ ಎಂದು ತಮ್ಮ ಸಂಕಷ್ಟ ವ್ಯಕ್ತಪಡಿಸಿದರು.
Related Articles
Advertisement
ಮಳೆಯಿಂದ ಹಾನಿಯಾದ ಮನೆಗಳಿಗೆ 5200 ರೂ. ಪರಿಹಾರ ಚೆಕ್ ನೀಡುತ್ತಿದ್ದಾರೆ. ಈ ಮೊತ್ತದ ಹಣದಲ್ಲಿ ಮನೆ ದುರಸ್ತಿಯೂ ಆಗುವುದಿಲ್ಲ. ಮನೆ ಹಾನಿಗೆ ಇಷ್ಟೊಂದು ಸಣ್ಣ ಪ್ರಮಾಣದ ಪರಿಹಾರ ಜನರನ್ನು ಅವಮಾನಿಸಿದಂತೆ. ಕೆಲವೊಂದು ಮನೆಗಳು ಸಂಪೂರ್ಣವಾಗಿ ಬಿದ್ದಿದ್ದರೂ ಎಲ್ಲರಿಗೂ ಒಂದೇ ಮೊತ್ತದ ಪರಿಹಾರ ಚೆಕ್ ನೀಡುತ್ತಿದ್ದಾರೆ ಎನ್ನುವ ಕಾರಣದಿಂದ ಅಳಗವಾಡಿ ಗ್ರಾಮಸ್ಥರು ಮನೆ ಹಾನಿ ಪರಿಹಾರ ಚೆಕ್ ಪಡೆದುಕೊಂಡಿಲ್ಲ.
ಬರ ಪರಿಹಾರದಂತೆ ನೆರೆ ಪರಿಹಾರವೂ ಆಗದಿರಲಿ!:
ಇತ್ತೀಚೆಗಷ್ಟೆ ಬರ ಅಧ್ಯಯನ ತಂಡ ಬಂದು ಹೋಗಿತ್ತು. ಆದರೆ ಇದುವರೆಗೂ ಬರ ಪರಿಹಾರ ರೈತರಿಗೆ ತಲುಪಿಲ್ಲ. ಇದರಿಂದ ರೈತರಿಗೆ ಅಷ್ಟೊಂದು ಸಮಸ್ಯೆಯಾಗಿಲ್ಲ. ಆದರೆ ವಿಪರೀತ ಮಳೆ ಹಾಗೂ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಸರಕಾರ ಯಾವುದೇ ಕಾರಣಕ್ಕೂ ನೆರೆ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಬಾರದು. ಆಗಿರುವ ನಷ್ಟ ಗುರುತಿಸಿ ಪರಿಹಾರ ವಿತರಿಸಬೇಕು ಎಂದು ರೈತರು ಒತ್ತಾಯಿಸಿದರು.
•ಹೇಮರಡ್ಡಿ ಸೈದಾಪುರ