Advertisement

ಸರ್‌ ಎಂ.ವಿ ಕೂರುತ್ತಿದ್ದ ಬಂಡೆಯ ಬಲ್ಲಿರೇನಯ್ಯ?

04:40 PM Sep 16, 2017 | |

ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ವಿವಿ ಕಾಲೇಜಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕಾಲೇಜಿನ ಕ್ಯಾಂಪಸ್‌ನಲ್ಲಿ, ಹಿಂದೊಮ್ಮೆ ಸರ್‌.ಎಂ.ವಿಶ್ವೇಶ್ವರಯ್ಯನವರು ತನ್ಮಯರಾಗಿ ಕೂತು ಯೋಚಿಸುತ್ತಿದ್ದ ಬಂಡೆಯೊಂದಿದೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಆ ಸ್ಥಳವನ್ನು ಪತ್ತೆ ಹಚ್ಚಿ, ಅದನ್ನು ಸ್ಮಾರಕವನ್ನಾಗಿ ಪರಿವರ್ತಿಸಿರುವುದು ಮಾತ್ರವಲ್ಲ, ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಸಾಮಾಜಿಕ ಕಳಕಳಿಯ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರಿನ ಅರಸರ ಪ್ರಮುಖ ಕೊಡುಗೆಗಳಲ್ಲಿ, ಹೆಬ್ಬಾಳದಲ್ಲಿ 1913ರಲ್ಲಿ ಪ್ರಾರಂಭವಾದ ಕೃಷಿ ಡಿಪ್ಲೊಮಾ ಶಿಕ್ಷಣ ಕೇಂದ್ರವೂ ಒಂದು. ಮುಂದೆ 1946ರಲ್ಲಿ ಬಿ.ಎಸ್ಸಿ (ಅಗ್ರಿಕಲ್ಚರ್‌) ಕೋರ್ಸ್‌ ಆರಂಭವಾದಾಗ, ಅದು ಕೃಷಿ ಪದವಿ ಕಾಲೇಜಾಗಿ ಬದಲಾಯಿತು. ಈ ಕಾಲೇಜಿನ ಕ್ಯಾಂಪಸ್ಸೇ 1963ರಲ್ಲಿ ಕೃಷಿ ವಿಶ್ವವಿದ್ಯಾಲಯವೆಂದು ಹೆಸರಾಯಿತು.

Advertisement

ಹದಿನಾಲ್ಕು ವರ್ಷಗಳ ಹಿಂದೆ, ಅಂದರೆ 2003ರಲ್ಲಿ ಕೃಷಿ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಅಧ್ಯಾಪಕರೊಬ್ಬರು, ಕಾಲೇಜಿನಿಂದ ತುಸು ದೂರವಿದ್ದ ಜಾಗದ ಕಡೆಗೆ ಕೈ ತೋರಿಸಿ, “ಅಲ್ಲೊಂದು ಬಂಡೆಯಿದೆ. ಸರ್‌ ಎಂ. ವಿಶ್ವೇಶ್ವರಯ್ಯನವರು ಅಲ್ಲಿ ಧ್ಯಾನಸ್ಥರಂತೆ ಕುಳಿತು ಯೋಚಿಸುತ್ತಿದ್ದರು. ಹಾಗೆ ಧ್ಯಾನಸ್ಥರಾಗಿ ಕೂತಿದ್ದಾಗಲೇ ಅನೇಕ ಮಹತ್ವದ ಯೋಜನೆಗಳು ರೂಪುಗೊಂಡವು’ ಎಂದರು. ಈ ಮಾತು ಕೇಳಿದ ವಿದ್ಯಾರ್ಥಿಗಳ ಹಾಗೂ ಬೋಧಕ ವರ್ಗದವರ ಕುತೂಹಲ ಹೆಚ್ಚಿತು. ಇದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ವಿಚಾರಿಸಿ ಈ ವಿಷಯವನ್ನು ಖಚಿತಪಡಿಸಿಕೊಳ್ಳಬೇಕೆಂದು ನಿರ್ಧರಿಸಿದರು.

ಈ ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ತಂಡ, ಕೃಷಿ ವಿವಿಯ ನಿವೃತ್ತ ಕುಲಪತಿಗಳೂ, ಕಾಲೇಜಿನ ಮೊದಲ ಬ್ಯಾಚ್‌ ವಿದ್ಯಾರ್ಥಿಯೂ ಆಗಿದ್ದ ಡಾ. ದ್ವಾರಕೀನಾಥ್‌ ಅವರನ್ನು ಭೇಟಿಯಾಗಿ ವಿಷಯ ತಿಳಿಸಿತು. ಎಲ್ಲವನ್ನೂ ಕೇಳಿಸಿಕೊಂಡ ದ್ವಾರಕೀನಾಥ್‌, ಹೌದು. 1946-49ರ ಅವಧಿಯಲ್ಲಿ ಈ ಕಾಲೇಜಿನಲ್ಲಿ ಓದುತ್ತಿದ್ದಾಗ ಸರ್‌. ಎಂ. ವಿಶ್ವೇಶ್ವರಯ್ಯನವರು ಬಂಡೆಯ ಮೇಲೆ ಆಲೋಚನಾಮಗ್ನರಾಗಿ ಕೂರುತ್ತಿದ್ದುದನ್ನು ಕಂಡಿದ್ದೇನೆ ಎಂದರು. 

ಇಷ್ಟಾದ ಮೇಲೆ, ಈ ವಿಶಿಷ್ಟ ಸಂಗತಿಯನ್ನು ಮೊತ್ತ ಮೊದಲು ತಿಳಿಸಿದ ಟಿ.ಛಾಯಾಪತಿ, ಮೊದಲ ಬ್ಯಾಚ್‌ನ ವಿದ್ಯಾರ್ಥಿ ದ್ವಾರಕೀನಾಥ್‌, ಕೃಷಿ ವಿವಿಯ ಅಂದಿನ ಕುಲಪತಿ ಡಾ. ವಿ.ಎಂ. ಕೃಷ್ಣಪ್ಪ ಅವರನ್ನು ಸೇರಿದಂತೆ ಹಲವರನ್ನು ಒಳಗೊಂಡ ಸಮಿತಿ ಅಸ್ತಿತ್ವಕ್ಕೆ ಬಂತು. ಎಲ್ಲರೂ ಸೇರಿಕೊಂಡು, ಆ ಬಂಡೆಯನ್ನು ಪತ್ತೆ ಹಚ್ಚಿದರಷ್ಟೇ ಅಲ್ಲ, ಅದನ್ನು ಸ್ಮಾರಕವನ್ನಾಗಿ ರೂಪಿಸಲೂ ನಿರ್ಧರಿಸಿದರು. ಈ ಕೆಲಸಕ್ಕೆ ಆರ್ಥಿಕ ಸಂಪನ್ಮೂಲದ ಬಲ ಬೇಕು ಅನ್ನಿಸಿದಾಗ, ಡಾ.ಆರ್‌.ದ್ವಾರಕೀನಾಥ್‌, ಡಾ.ವೀರಭದ್ರಯ್ಯ, ಶೇಷಾದ್ರಿಪುರಂ ಶಿಕ್ಷಣ ದತ್ತಿ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ, ವರ್ಷ ಗ್ರೂಪ್‌ ಬೆಂಗಳೂರು, ಬಿ.ಎನ್‌.ಕೃಷ್ಣಮೂರ್ತಿ, ಜಿ.ಗುರುಸಿದ್ದಯ್ಯ, ಶ್ರೀ ವಿಷ್ಣುವರ್ಧನ ವೀರಭದ್ರಯ್ಯ ಮತ್ತು ಮದ್ದೂರು ತಾಲೂಕಿನ ಬ್ಯಾಡರಹಳ್ಳಿ ಹನುಮೇಗೌಡರು ಕೈ ಜೋಡಿಸಿದರು. 

ಸರ್‌.ಎಂ.ವಿ.ಸ್ಮಾರಕ ಉದ್ಘಾಟನೆ
ಹೀಗೆ ಸಂಗ್ರಹವಾದ ಹಣದಲ್ಲಿ ಸರ್‌.ಎಂ.ವಿ. ಅವರ ಪುತ್ಥಳಿ ನಿರ್ಮಾಣವಾಯಿತು. ಹಾಸು ಬಂಡೆಯ ಮೇಲೆ ಸರ್‌.ಎಂ.ವಿ. ಅವರು ಕುಳಿತು ಅಧ್ಯಯನ ಮಾಡುತ್ತಿದ್ದುದನ್ನು ಕಣ್ಣಾರೆ ಕಂಡಿದ್ದ ಮತ್ತು ಕೃಷಿ ವಿವಿಯ ಕುಲಪತಿಗಳಾಗಿದ್ದ ಡಾ.ಆರ್‌.ದ್ವಾರಕಿನಾಥ್‌ ಅವರು 2003ರ ಸೆಪ್ಟೆಂಬರ್‌ 15ರಂದು ಸ್ಮಾರಕ ಬಂಡೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯನವರ ಸೊಸೆ ಶ್ರೀಮತಿ ಶಕುಂತಲಾ ಕೃಷ್ಣಮೂರ್ತಿಯವರೂ ಉಪಸ್ಥಿತರಿದ್ದರು.

Advertisement

ಉಳಿದಿದ್ದ ಹಣದಲ್ಲಿ ಬಂಗಾರದ ಪದಕ! 
ನಿರ್ದಿಷ್ಟ ಉದ್ದೇಶ ಈಡೇರಿದ ನಂತರ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಲಾಯಿತು. ಸ್ಮಾರಕ ಸ್ಥಾಪನೆಗೆ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಒಂದು ಲಕ್ಷ ರೂಪಾಯಿ ಉಳಿದಿತ್ತು. ಅದನ್ನು ಬಳಸಿಕೊಂಡು ಕೃಷಿ ಇಂಜಿನಿಯರಿಂಗ್‌ ಪದವಿ ವಿಭಾಗದಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗೆ ಸರ್‌.ಎಂ.ವಿ.ಅವರ ಹೆಸರಿನಲ್ಲಿ ಬಂಗಾರದ ಪದಕವನ್ನು ಪ್ರತಿವರ್ಷ ಪದವಿ ಪ್ರಧಾನ ಸಮಾರಂಭದಲ್ಲಿ ನೀಡಲು ತೀರ್ಮಾನಿಸಲಾಯಿತು. ಈ ಉಳಿಕೆ ಹಣವನ್ನು ಕೃಷಿ ವಿವಿ ಯಲ್ಲಿ ಠೇವಣಿ ಮಾಡಲಾಗಿದೆ.

ಎಲ್ಲಿದೆ?: ಮೇಖ್ರೀ ವೃತ್ತದಿಂದ ಹೆಬ್ಟಾಳಕ್ಕೆ ಹೋಗುವ ರಸ್ತೆಯಲ್ಲಿ, ಕೃಷಿ ವಿವಿಯ ವಸತಿ ಸಮುಚ್ಛಯದ “ಬಿ’ವರ್ಗದ ವಸತಿಗಳ ಹಿಂಭಾಗದಲ್ಲಿದೆ.

-ಅಂಜನಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next