ಟುರಿನ್ (ಇಟಲಿ): ತವರಿನ ಹೀರೋ ಹಾಗೂ ವಿಶ್ವದ ನಂ.1 ಟೆನಿಸಿಗ ಜಾನಿಕ್ ಸಿನ್ನರ್ ಮೊದಲ ಬಾರಿಗೆ ಎಟಿಪಿ ಫೈನಲ್ಸ್ ಟೆನಿಸ್ ಚಾಂಪಿಯನ್ ಆಗಿ ಮೂಡಿಬಂದರು.
ಫೈನಲ್ ಹಣಾಹಣಿಯಲ್ಲಿ ಅವರು ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ 6-4, 6-4 ಅಂತರದ ನೇರ ಸೆಟ್ ಜಯ ದಾಖಲಿಸಿದರು. ಇದು ಇಟಲಿ ಟೆನಿಸಿಗರೊಬ್ಬರಿಗೆ ಒಲಿದ ಮೊದಲ ಎಟಿಪಿ ಫೈನಲ್ಸ್ ಪ್ರಶಸ್ತಿ.
ಈ ಮುಖಾಮುಖೀ ಕಳೆದ ಯುಎಸ್ ಓಪನ್ ಗ್ರ್ಯಾನ್ಸ್ಲಾಮ್ ಫೈನಲ್ ಪಂದ್ಯದ ಪುನರಾವರ್ತನೆಯಾಗಿತ್ತು. ಅಲ್ಲಿಯೂ ಫ್ರಿಟ್ಜ್ ವಿರುದ್ಧ ಸಿನ್ನರ್ ಜಯ ಸಾಧಿಸಿದ್ದರು.
ಎಟಿಪಿ ಫೈನಲ್ಸ್ನಲ್ಲಿ ಜಾನಿಕ್ ಸಿನ್ನರ್ ಒಂದೂ ಸೆಟ್ ಕಳೆದುಕೊಳ್ಳದೆ ಗೆದ್ದು ಬಂದರು. 1986ರಲ್ಲಿ ಕೊನೆಯ ಸಲ ಇವಾನ್ ಲೆಂಡ್ಲ್ ಈ ಸಾಧನೆಗೈದಿದ್ದರು.
ವರ್ಷಾಂತ್ಯದ ಎಟಿಪಿ ಫೈನಲ್ಸ್ ಚಾಂಪಿಯನ್ ಆಗುವುದರೊಂದಿಗೆ 23 ವರ್ಷದ ಜಾನಿಕ್ ಸಿನ್ನರ್ 2024ನೇ ಟೆನಿಸ್ ಋತುವನ್ನು ಸ್ಮರಣೀಯವಾಗಿ ಮುಗಿಸಿದರು. ಈ ವರ್ಷ ಅವರು 2 ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಸೇರಿದಂತೆ ಒಟ್ಟು 8 ಕೂಟಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಯುಎಸ್ ಓಪನ್ ಜತೆಗೆ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಕೂಡ ಸಿನ್ನರ್ ಪಾಲಾಗಿತ್ತು. ಇದು ಸಿನ್ನರ್ ಗೆದ್ದ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ.
ಜಾನಿಕ್ ಸಿನ್ನರ್ ಇನ್ನು ಮಲಾಗಕ್ಕೆ ತೆರಳಿ ಇಟಲಿಗೆ ಡೇವಿಸ್ ಕಪ್ ಟೆನಿಸ್ ಪ್ರಶಸ್ತಿ ಉಳಿಸಿಕೊಡುವಲ್ಲಿ ಪ್ರಯತ್ನಿಸಲಿದ್ದಾರೆ.