Advertisement
ಇತ್ತೀಚಿನ ದಿನಗಳಲ್ಲಿ ಒಂದೇ ವಾರದಲ್ಲಿ ಏಳು ಸಿನಿಮಾಗಳು ತೆರೆಕಂಡ ಉದಾಹರಣೆ ಇರಲಿಲ್ಲ. ಈ ಹಿಂದೆ ಏಳು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದರೂ ಕೊನೆಕ್ಷಣದಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಈ ವಾರ ಕೆ.ಜಿ.ರಸ್ತೆ ಏಳು ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗುತ್ತಿದೆ.
Related Articles
Advertisement
ಇನ್ನು “ದಾದಾ ಇಸ್ ಬ್ಯಾಕ್’ ಚಿತ್ರವನ್ನು ಈ ಹಿಂದೆ “ಗೊಂಬೆಗಳ ಲವ್’ ಮಾಡಿದ ಸಂತೋಷ್ ನಿರ್ದೇಶನ ಮಾಡಿದ್ದು, ಅರುಣ್ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪಾರ್ಥಿಬನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಶಾರದಾ ಚಿತ್ರಮಂದಿರಲ್ಲಿ ಚಿತ್ರ ತೆರೆಕಾಣುತ್ತಿದೆ. ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ’ ಒಂದು ಹೊಸ ಪ್ರಯೋಗದ ಚಿತ್ರವಾಗಿದ್ದು, ಚಿತ್ರದಲ್ಲಿ ರಿಷಿ ಹಾಗೂ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ.
ಟ್ರೇಲರ್ ಹಿಟ್ ಆಗಿದ್ದು, ಚಿತ್ರದ ಮೇಲೂ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟಿದೆ. ಈ ಚಿತ್ರ ಕೆ.ಜಿ.ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಇದಲ್ಲದೇ, ವಿಜಯರಾಘವೇಂದ್ರ ಐದು ವರ್ಷಗಳ ಹಿಂದೆ ಒಪ್ಪಿಕೊಂಡು ನಟಿಸಿದ “ಟಾಸ್’ ಚಿತ್ರ ಕೂಡಾ ಈ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಚಿತ್ರಕ್ಕೆ “ಒಂದು ರೂಪಾಯಿ ಎರಡು ಪ್ರೀತಿ’ ಎಂದು ಟೈಟಲ್ ಇಡಲಾಗಿತ್ತು.
ಈಗ ಅದು ಟ್ಯಾಗ್‌ಲೈನ್ ಆಗಿ “ಟಾಸ್’ ಎಂಬ ಟೈಟಲ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಇದಲ್ಲದೇ, “ಶ್ವೇತ’ ಎಂಬ ಹಾರರ್ ಸಿನಿಮಾ ಸ್ವಪ್ನ ಚಿತ್ರಮಂದಿರದಲ್ಲಿ, “ಟ್ರಿಗರ್’ ಎಂಬ ಚಿತ್ರ ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದೆ. ಜೊತೆಗೆ ಶುಭಾಪೂಂಜಾ ಅಭಿನಯದ “ಮೀನಾಕ್ಷಿ’ ಚಿತ್ರ ಕೂಡಾ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಕೆ.ಜಿ.ರಸ್ತೆಯ ಚಿತ್ರಮಂದಿರ ಘೋಷಿಸಿಲ್ಲ. ವಾರದಿಂದ ವಾರಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿರುವ ಮೂಲಕ ಥಿಯೇಟರ್ ಸಮಸ್ಯೆ ಕೂಡಾ ಎದುರಾಗುತ್ತಿದೆ.
ಹಿಂದಿನ ವಾರ ತೆರೆಕಂಡ ಚಿತ್ರಗಳು ಒಂದೇ ವಾರಕ್ಕೆ ಥಿಯೇಟರ್ ಬಿಟ್ಟುಕೊಡುವಂತಾಗಿದೆ. ಹಾಗಾಗಿಯೇ “ಹೊಂಬಣ್ಣ’, “ಕಥಾವಿಚಿತ್ರ’ ಸೇರಿದಂತೆ ಅನೇಕ ಚಿತ್ರಗಳು ಈಗ ಪ್ರಮುಖ ಚಿತ್ರಮಂದಿರಗಳಲ್ಲಿಲ್ಲ. ಈ ನಡುವೆಯೇ ಎರಡು ವಾರಗಳ ಹಿಂದೆ ತೆರೆಕಂಡಿದ್ದ “ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಈಗ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಸಿಕ್ಕಿದ್ದು, ಅನುಪಮ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ.