ಮೈಸೂರು: ನಗರದ ಲಿಂಗಾಂಬುದಿ ಕೆರೆಗೆ ಒಳಚರಂಡಿ ನೀರು ಸೇರ್ಪಡೆಯಾಗಿ ಕೆರೆ ಮತ್ತು ಪರಿಸರ ಹಾಳಾಗುತ್ತಿದ್ದ ಹಿನ್ನಲೆಯಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳಿಯಿಂದಾಗಿ ಲಿಂಗಾಬುದಿ ಕೆರೆಯ ಸುತ್ತಮುತ್ತಲ ಬಡಾವಣೆಗಳ ಒಳಚರಂಡಿ ನೀರು ಕೆರೆಗೆ ಸೇರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿದರು.
ಕ್ರಮಕ್ಕೆ ಸೂಚನೆ: ಒಳಚರಂಡಿ ನೀರು ಸೋರಿಕೆಯಾಗಿ ಹೊಂಡದ ಮೂಲಕ ನೇರವಾಗಿ ಲಿಂಗಾಬುದಿ ಕೆರೆ ಸೇರುತ್ತಿದೆ. ಇದರಿಂದ ಕೆರೆ ಹಾಗೂ ಸುತ್ತಲಿನ ಪರಿಸರ ಹಾಳಾಗುತ್ತಿದೆ.ಕೆರೆಯ ನೀರು ಭರ್ತಿಯಾಗಿ ತಾತ್ಕಾಲಿಕವಾಗಿ ಅಳವಡಿಸಿರುವ ಮರಳಿನ ಮೂಟೆಗಳು ಛಿದ್ರಗೊಂಡು ಕೆರೆಯ ನೀರು ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮವಹಿಸಿ, ಕೆರೆಗೆ ಒಳಚರಂಡಿ ನೀರು ಸೇರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಮದಾಸ್, ಒಳಚರಂಡಿ ಸಂಪರ್ಕವನ್ನು ಮಳೆ ನೀರು ಚರಂಡಿಗೆ ಬಿಟ್ಟಿರುವ ಪರಿಣಾಮ ಮಳೆ ನೀರಿನೊಂದಿಗೆ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಕೊಳಚೆ ನೀರು ಕೆರೆಗೆ ಹರಿಯದಂತೆ ಒಳಚರಂಡಿಗಳ ದುರಸ್ತಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಮುಡಾ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಜಗದೀಶ್, ಶಂಕರ್, ಸೀಮಾಪ್ರಸಾದ್, ಪಾಲಿಕೆ ವಲಯ ಕಚೇರಿ-2ರ ಅಭಿವೃದ್ಧಿ ಅಧಿಕಾರಿ ರಘುಪತಿ, ವಾಣಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಅಭಿಯಂತರ ಯಾದವ್, ಸಹಾಯಕ ಅಭಿಯಂತರ ಕೆಂಪೇಗೌಡ, ಮುಡಾ ವಲಯ-7ರ ಸಹಾಯಕ ಆಯುಕ್ತ ರ, ಸಹಾಯಕ ಅಭಿಯಂತರ ಯದುಗಿರಿ ಇನ್ನಿತರರು ಹಾಜರಿದ್ದರು.
ಒತ್ತುವರಿ ಮಾಡಿಕೊಂಡಿರುವ ಕೆರೆ ಪ್ರದೇಶ ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಜತೆಗೆ ಪಾಲಿಕೆ, ಮುಡಾ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಕೆರೆಯ ಉಳಿವಿಗೆ ಹಾಗೂ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತೇನೆ.
-ರಾಮದಾಸ್, ಶಾಸಕ