ಇಂಡಿ: ಕೃಷ್ಣಾ ಮೇಲ್ದಂಡೆ ಯೋಜನೆ ರೈತರ ಬಹು ನೀರಿಕ್ಷಿತ ಯೋಜನೆಯಾಗಿದ್ದರೂ ಇದಕ್ಕೆ ಒಂದಿಲ್ಲೊಂದು ವಿಘ್ನ, ಅಡೆತಡೆ ಎದುರಾಗುತ್ತಲೇ ಇದೆ. ಹೀಗಾಗಿ ಈ ಯೋಜನೆ ರೈತಾಪಿ ವರ್ಗದ ಜೀವನಾಡಿಯಾಗುವ ಬದಲು ಅವರ ಬಾಳಿನ ಬಿಸಿಲುಗುದುರೆ ಆದಂತಾಗಿದೆ. ಸರ್ಕಾರ ಯೋಜನೆಗಾಗಿ ಸಾವಿರಾರು ಕೋಟಿ ರೂ. ವ್ಯಯಿಸಿದೆಯಾದರೂ ಸರಿಯಾದ ನಿರ್ವಹಣೆ ಕೊರತೆಯಿಂದ ಕಾಲುವೆಯಲ್ಲಿ ಪೂರ್ಣ ಹೂಳು ತುಂಬಿ, ಗಿಡಗಂಟಿ ಬೆಳೆದಿವೆ. ಹೀಗಾಗಿ ಸರ್ಕಾರದ ಅನುದಾನವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇಂಡಿ ಶಾಖಾ ಕಾಲುವೆ 24ರ ಕೆಳಗಡೆ ಬರುವ 14 ರಿಂದ 19ರವರೆಗಿನ ಲ್ಯಾಟರಲ್ ಕಾಲುವೆಯಲ್ಲಿ ಹೂಳು ತುಂಬಿ ಗಿಡಗಂಟಿ ಬೆಳೆದು ನೀರು ಹರಿಯುವ ಸ್ಥಿತಿಯಲ್ಲಿ ಕಾಲುವೆಗಳಿಲ್ಲ. ಇದರಿಂದ ಆ ಭಾಗದ ರೈತರು ಸುಮಾರು 3 ವರ್ಷಗಳಿಂದ ಕಾಲುವೆ ನೀರಿನಿಂದ ವಂಚಿತವಾಗಿದ್ದು, ಗಂಗೆಯ ಆಗಮನಕ್ಕೆ ಎದುರು ನೋಡುತ್ತಿದ್ದಾರೆ.
ತಾಲೂಕು ವ್ಯಾಪ್ತಿಯ ಆಳೂರ, ಲಚ್ಯಾಣ, ಅಗರಖೇಡ, ಹಿರೇಬೇವನೂರ, ಚಿಕ್ಕಮಣ್ಣೂರ ರೈತರು ಈ ವಿಷಯವಾಗಿ ಸಂಬಂಧಿಸಿದ ಅಧಿ ಕಾರಿಗಳ ಗಮನಕ್ಕೆ ತಂದರೂ ಮತ್ತೆ ಯಥಾಸ್ಥಿತಿ ಮುಂದುವರಿದು ಪ್ರಯೋಜನವಿಲ್ಲದಂತಾಗಿದೆ. ಈ ಕಾಲುವೆಗಳಲ್ಲಿರುವ ಹೂಳು ತೆಗೆದು ಅವಶ್ಯವೆನಿಸಿದ್ದಲ್ಲಿ ಗೇಟ್ ನಿರ್ಮಿಸಿ ವಾರಾಬಂದಿ ವ್ಯವಸ್ಥೆ ಮಾಡಿದರೂ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುವುದು ರೈತರ ಆರೋಪ.
ಇಂತಹ ಸಂದರ್ಭದಲ್ಲಿ ಕಾಲುವೆಯಲ್ಲಿ ಮಣ್ಣು, ಮುಳ್ಳು-ಕಂಟಿ ತುಂಬಿದೆ. ಇಂಡಿ ತಾಲೂಕಿನ ವಿವಿಧ ಗ್ರಾಮದ ಮೂಲಕ ಹಾದು ಹೋದ ಮುಖ್ಯ ಕಾಲುವೆ ಮತ್ತು ಉಪ ಕಾಲುವೆಯಲ್ಲೂ ಮಣ್ಣು ತುಂಬಿಕೊಂಡಿದ್ದು, ರೈತರಲ್ಲಿ ನಿರಾಶೆ ಮೂಡಿಸಿದೆ. ಕೆಲವೆಡೆ ಕಾಲುವೆಗಳ ಒಳ ಭಾಗದಲ್ಲಿ ಕಾಂಕ್ರೀಟ್ ಒಡೆದಿದೆ. ಇದರಿಂದಾಗಿ ಕಾಲುವೆ ಕೆಳ ಭಾಗದ ರೈತರಿಗೆ ಸರಿಯಾಗಿ ನೀರು ಮುಟ್ಟುತ್ತಿಲ್ಲ.
ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ರೈತರ ಮೇಲೆ ರೇಗಾಡುವಂತಹ ಪ್ರಸಂಗಗಳೂ ನಡೆಯುತ್ತಿವೆ. ಅಧಿ ಕಾರಿಗಳು ಮನಸ್ಸಿಗೆ ಬಂದಂತೆ ಟೆಂಡರ್ ಕರೆದು ಕಾಟಾಚಾರಕ್ಕೆ ಅಲ್ಪ ಸಲ್ಪ ಹೂಳೆತ್ತಿ ಸುಮ್ಮನಾಗಿದ್ದಾರೆ. ಆದರೆ ಮುಂದಿನ ಪರಿಸ್ಥಿತಿ-ಕ್ರಮ ಏನು? ಎನ್ನುವುದು ಸಾರ್ವಜನಿಕರ ಪ್ರಶ್ನೆ. ಈ ಕುರಿತು ಶಾಸಕರು ಎಷ್ಟೋ ಬಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಪ್ರಯೋಜನವಿಲ್ಲದಂತಾಗಿದೆ. ಇನ್ನು ಮುಂದಾದರು ಕಾಲುವೆ ಸಮರ್ಪಕ ನಿರ್ವಹಣೆ ಮಾಡಿ ಸುಗಮವಾಗಿ ನೀರು ಹರಿಯುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಕಾಲುವೆಗಳಲ್ಲಿನ ಹೂಳು ತೆಗೆಸಿದ್ದೇವೆ. ಅಲ್ಲಲ್ಲಿ ಸ್ವಲ್ಪ ಉಳಿದುಕೊಂಡಿವೆ. ಸ್ಥಳಕ್ಕೆ ಭೇಟಿ ನೀಡಿ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ.
ಜಾಕೀರ್ ಹುಸೇನಿ ಖಾದ್ರಿ,
ಕೆಬಿಜೆಎನ್ನೆಲ್ ಎಇಇ, ಇಂಡಿ
ನಮ್ಮ ಕಾಲುವೆಗೆ ನೀರೇ ಬರುತ್ತಿಲ್ಲ. ಕಾಲುವೆಯಲ್ಲಿ ಮುಳ್ಳು-ಕಂಟಿ ಬೆಳೆದಿವೆ. ಸಂಪೂರ್ಣ ಹೂಳು ತುಂಬಿಕೊಂಡಿದೆ. ಕಾಟಾಚಾರಕ್ಕೆ ಹೂಳೆತ್ತಿ ಹೋಗಿದ್ದಾರೆ. ಇದರಿಂದ ಯಾವುದೇ ಪ್ರಯೋಜವಾಗಿಲ್ಲ.
ಶಿವಪ್ಪ ಭಜಂತ್ರಿ,
ಇಂತಿಯಾಜ ಬಾಗವಾನ, ರೈತರು
*ಯಲಗೊಂಡ ಮಾ. ಬೇವನೂರ