Advertisement

ತಮಿಳ್‌ ರಾಕರ್ಸ್‌ ಎಂಬ ಸಿನಿಶತ್ರು

11:39 PM Aug 19, 2022 | Team Udayavani |

ಕೊರೊನಾ ಅನಂತರದಲ್ಲಿ ಭಾರತೀಯ ಚಲನಚಿತ್ರೋದ್ಯಮ ಸಂಕಷ್ಟದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಲಾಕ್‌ಡೌನ್‌ ಮತ್ತು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಚಿತ್ರೋದ್ಯಮವನ್ನು ಕಾಡಿದೆ. ಇದರ ನಡುವೆಯೇ ಬಾಲಿವುಡ್‌ನ‌ಲ್ಲಿ ಬಿಡುಗಡೆಗೊಂಡ ಸಾಕಷ್ಟು ಸಿನೆಮಾಗಳು ಮಕಾಡೆ ಮಲಗಿವೆ. ಇದ್ದುದರಲ್ಲಿ ದಕ್ಷಿಣ ಭಾರತ ಸಿನೆಮಾಗಳೇ ಸದ್ಯಕ್ಕೆ ಭಾರತೀಯ ಚಲನಚಿತ್ರೋದ್ಯಮಕ್ಕೆ ಆ್ಯಕ್ಸಿಜನ್‌ನಂತಿವೆ ಎಂದರೆ ತಪ್ಪಾಗಲಾರದು. ಈ ನಡುವೆಯೇ, ತಮಿಳ್‌ರಾಕರ್ಸ್‌ ಎಂಬ ಪೈರೇಟೆಡ್‌ ಗುಂಪು ಚಿತ್ರರಂಗದವರ ಪಾಲಿಗೆ ಕಂಟಕವಾಗಿದೆ.

Advertisement

ಏನಿದು ತಮಿಳ್‌ರಾಕರ್ಸ್‌?
ಇದೊಂದು ಪೈರೆಟೆಡ್‌ ಗುಂಪು. ಅಂದರೆ ಆರಂಭದಲ್ಲಿ ತಮಿಳು ಸಿನೆಮಾಗಳನ್ನು ಕದ್ದು ಇದನ್ನು ಪೈರೇಟೆಡ್‌ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡುವುದು ಈ ಗುಂಪಿನ ಕೆಲಸ. ತಮಿಳು ಸಿನೆಮಾಗಳನ್ನೇ ಹೆಚ್ಚು ಪೈರೇಟ್‌ ಮಾಡುತ್ತಿದ್ದರಿಂದ ಇದಕ್ಕೆ ತಮಿಳ್‌ರಾಕರ್ಸ್‌ ಎಂಬ ಹೆಸರು ಬಂದಿದೆ. ಜತೆಗೆ ಸಿನಿಮಾ ರಿಲೀಸ್‌ ಆದ ದಿನವೇ ಅದೇ ಸಿನೆಮಾವನ್ನು ಪೈರೇಟ್‌ ಮಾಡಿ ವೆಬ್‌ಸೈಟ್‌ನಲ್ಲಿ ಬಿಡುತ್ತಿದ್ದರು. ಈ ಮೂಲಕ ಸಿನೆಮಾಗಳಿಗೆ ಭಾರೀ ಪ್ರಮಾಣದ ನಷ್ಟವನ್ನುಂಟು ಮಾಡುತ್ತಿದ್ದಾರೆ.

ಯಾರಿವರು?
ಇದುವರೆಗೆ ಈ ತಮಿಳ್‌ರಾಕರ್ಸ್‌ ಮೂಲ ಎಲ್ಲಿಯದು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಇವರು 2011ರಿಂದ ಈ ಕದಿಯುವ ಕೆಲಸ ಮಾಡುತ್ತಿದ್ದಾರೆ. ಆಗಲೇ ಪೈರೇಟ್‌ ಬೇನಂಥ ಕೆಲವು ಪೈರೇಟೆಡ್‌ ವೆಬ್‌ಸೈಟ್‌ಗಳು ಹುಟ್ಟಿಕೊಂಡಿದ್ದು. ವಿಚಿತ್ರವೆಂದರೆ ಇವರು ಎಷ್ಟು ಮಂದಿ ಇದ್ದಾರೆ? ಎಲ್ಲಿಂದ ಕೆಲಸ ಮಾಡುತ್ತಿದ್ದಾರೆ? ಇದ್ಯಾವುದೂ ಯಾರಿಗೂ ತಿಳಿದಿಲ್ಲ. ಆರಂಭದಲ್ಲಿ ಕೇವಲ ತಮಿಳು ಸಿನೆಮಾ ಕೇಂದ್ರೀಕರಿಸುತ್ತಿದ್ದ ಇವರು, ಅನಂತರದಲ್ಲಿ ಇತರ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿ, ಇಂಗ್ಲಿಷ್‌ ಸಿನೆಮಾಗಳನ್ನೂ ಕದಿಯಲು ತೊಡಗಿದರು.

ಕಾನೂನು ಕ್ರಮಗಳಾಗಿವೆಯೇ?
ಸದ್ಯ ಇವರು ಯಾರು? ಎಲ್ಲಿಯವರು ಎಂಬುದು ತಿಳಿಯದ ಕಾರಣ, ಇತ್ತೀಚಿನ ದಿನಗಳಲ್ಲಿ ಇವರ ವಿರುದ್ಧ ಯಾವುದೇ ಕ್ರಮಗಳಾಗಿಲ್ಲ. ಆದರೆ 2008ರಲ್ಲೇ ತಮಿಳ್‌ರಾಕರ್ಸ್‌ಗೆ ಸಹಾಯ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಕೇರಳ ಪೊಲೀ ಸರು ಮೂವರನ್ನು ಬಂಧಿಸಿದ್ದರು. ತಮಿಳುನಾಡಿನ ವಿಲ್ಲುಪುರಂನಲ್ಲಿ ತಮಿಳ್‌ರಾಕರ್ಸ್‌ನ ಸೂತ್ರದಾರ ಎಂದೇ ಹೇಳಲಾಗಿದ್ದ ಕಾರ್ತಿ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಜತೆಗೆ ಪ್ರಭು ಮತ್ತು ಸುರೇಶ್‌ ಎನ್ನುವವರನ್ನೂ ಬಂಧಿಸಿದ್ದರು.

ತಮಿಳ್‌ರಾಕರ್ಸ್‌ನ ಈಗಿನ ಸ್ಥಿತಿಯೇನು?
ಸದ್ಯ ಇವರು ಚಾಲ್ತಿಯಲ್ಲಿಲ್ಲ. 2020ರಲ್ಲೇ ತಮ್ಮ ಅಕ್ರಮ ಚಟುವಟಿಕೆ ನಿಲ್ಲಿಸಿದ್ದಾರೆ. ಇನ್ನೊಂದು ಪೈರೇಟೆಡ್‌ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಆದರೂ ಇದರ ನಕಲಿ ವೆಬ್‌ಸೈಟ್‌ಗಳು ಇನ್ನೂ ಹಾವಳಿ ಮುಂದುವರಿಸಿವೆ.

Advertisement

ಪೈರೆಸಿಯಿಂದ ಆಗುವ ನಷ್ಟ
ವಿಚಿತ್ರವೆಂದರೆ, ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ವೇಳೆಯಲ್ಲಿ ಇಂಥ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವವರ ಸಂಖ್ಯೆ ತೀರಾ ಹೆಚ್ಚಾಗಿತ್ತು. ಭಾರತದಲ್ಲಿಯೇ 6.5 ಬಿಲಿಯನ್‌ ಮಂದಿ ಪೈರೆಸಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದರು. ಜಗತ್ತಿನಲ್ಲೇ ಇದು 3ನೇ ಸ್ಥಾನ. ಅಮೆರಿಕ 13.5 ಬಿಲಿಯನ್‌ ಮತ್ತು ರಷ್ಯಾ 7.2 ಬಿಲಿಯನ್‌ ಮಂದಿ ಇಂಥ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದರು. ಹಾಗೆಯೇ ಪೈರೆಸಿ ವೆಬ್‌ಸೈಟ್‌ಗಳಲ್ಲಿ ಸದ್ಯ 67 ಬಿಲಿಯನ್‌ ಮಂದಿ ಟಿವಿ ಕಂಟೆಂಟ್‌ಗಳಿಗಾಗಿ ಇಂಥ ಸೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ. ಬಿಟ್ಟರೆ ಪಬ್ಲಿಷಿಂಗ್‌ ಕಂಟೆಂಟ್‌ಗಳಿಗಾಗಿ 30 ಬಿಲಿಯನ್‌ ಮಂದಿ, ಸಿನೆಮಾಗಳಿಗೆ 14. 5 ಬಿಲಿಯನ್‌ ಮಂದಿ, ಸಂಗೀತಕ್ಕಾಗಿ 10.8 ಬಿಲಿಯನ್‌ ಮಂದಿ, ಸಾಫ್ಟ್ವೇರ್‌ಗಳಿಗಾಗಿ 9 ಬಿಲಿಯನ್‌ ಮಂದಿ ಭೇಟಿ ಕೊಡುತ್ತಾರಂತೆ. ಈ ಪೈರೇಸಿಯಿಂದಾಗಿ ಭಾರತದಲ್ಲೇ 3 ಬಿಲಿಯನ್‌ ಡಾಲರ್‌ನಷ್ಟು ಹಣ ನಷ್ಟವಾಗಿದೆ ಎಂದು ಲಂಡನ್‌ನ ಸಂಶೋಧನಾ ಸಂಸ್ಥೆಯೊಂದು ಹೇಳಿದೆ. ಆದರೆ ಪೈರೆಟ್‌ ಬೇ ಎಂಬ ಪೈರೇಟೆಡ್‌ ವೆಬ್‌ಸೈಟ್‌ ಪ್ರಕಾರ, ಇದರಿಂದ ಲಾಭವೇನೂ ಆಗುವುದಿಲ್ಲ. ನಷ್ಟದಲ್ಲಿದ್ದೇವೆ ಎಂದಿದೆ.

ನಿರ್ಮಾಪಕರಿಂದಲೇ ದೂರು
ಸಿನೆಮಾ ನಿರ್ಮಾಪಕರಿಂದ ಹಲವಾರು ದೂರುಗಳು ಹೋದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿತ್ತು. ತಾವು ರಿಲೀಸ್‌ ಮಾಡಿದ ದಿನವೇ ಅಕ್ರಮ ಪೈರೇಟ್‌ ಸೈಟ್‌ಗಳು ನಮ್ಮ ಸಿನೆಮಾವನ್ನು ಅಂತರ್ಜಾಲಕ್ಕೆ ಬಿಡುತ್ತಿವೆ. ಇದರಿಂದ ತಮಗೆ ಭಾರೀ ಪ್ರಮಾಣದ ನಷ್ಟವಾಗುತ್ತಿದೆ ಎಂಬುದು ಅವರ ದೂರಾಗಿತ್ತು. ಅಲ್ಲದೆ, ಪೊಲೀಸರ ಪ್ರಕಾರ, ಈ ತಮಿಳ್‌ರಾಕರ್ಸ್‌ ಅವರ ವಹಿವಾಟು 1 ಕೋಟಿ ರೂ.ಗಳಷ್ಟಿತ್ತು.

ಎಲ್ಲ ಚಿತ್ರರಂಗಗಳಿಗೂ ಸಮಸ್ಯೆ
ಪೈರಸಿ ಅನ್ನೋದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಅದು ಭಾರತ ಮಾತ್ರವಲ್ಲ ಜಗತ್ತಿನ ಅನೇಕ ಚಿತ್ರರಂಗಗಳನ್ನು ಭಾದಿಸುತ್ತಿದೆ ಎಂದು ಕನ್ನಡ ನಿರ್ಮಾ ಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದ್ದಾರೆ. ಆದರೆ ಇದರಿಂದ ದೊಡ್ಡ ಮಟ್ಟದ ತೊಂದರೆ ಆಗುತ್ತಿರುವುದು ಭಾರತದಲ್ಲಿ ರುವ ಪ್ರಾದೇಶಿಕ ಚಿತ್ರರಂಗಗಳಿಗೆ. ಪೈರೆಸಿ ವಿರುದ್ಧ ತಮಿಳುನಾಡು ಸರಕಾರ ಗೂಂಡಾ ಕಾಯ್ದೆಯನ್ನು ಜಾರಿಗೆ ತಂದಿತ್ತು. ಕರ್ನಾಟಕ ದಲ್ಲೂ ಅಂಥ ಕಾಯ್ದೆಗೆ ಆಗ್ರಹವಾಗಿತ್ತು. ಆದರೆ ಅದರಿಂದ ನಿರೀ ಕ್ಷಿತ ಪ್ರಯೋಜನವಾಗುತ್ತಿಲ್ಲ. ಇವತ್ತು ಪೈರಸಿ ಅನ್ನೋದು ತುಂಬ ದೊಡ್ಡದಾಗಿ ಬೆಳೆದು ನಿಂತಿರುವುದರಿಂದ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಎರಡೂ ಸೇರಿ ಇದರ ವಿರುದ್ದ ಕ್ರಮ ಕೈಗೊಳ್ಳಬೇಕು. ಕನ್ನಡ ಚಿತ್ರರಂಗದ ಲ್ಲಂತೂ ಪೈರಸಿಯಿಂದಾಗಿ ಥಿಯೇಟರ್‌ಗಳಲ್ಲಿ ಕನಿಷ್ಠ ಅಂದ್ರೂ ಶೇ.50- ಶೇ. 60 ಗಳಿಕೆಯಲ್ಲಿ ಇಳಿಕೆಯಾಗುತ್ತಿದೆ. ಅದರಲ್ಲೂ ದೊಡ್ಡ ಸ್ಟಾರ್ ಸಿನೆಮಾಗಳು, ಬಿಗ್‌ ಬಜೆಟ್‌ ಸಿನೆಮಾಗಳನ್ನು ನಿರ್ಮಿಸಲು ನಿರ್ಮಾಪಕರು ಹಿಂದೇಟು ಹಾಕುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಪೈರೆ‌ಸಿಯಿಂದ ನಷ್ಟಕ್ಕೊಳಗಾದ ತಮಿಳು ಸಿನೆಮಾಗಳು
1.2.0 – ರಜನಿಕಾಂತ್‌
2.ವಿಶ್ವಾಸಂ – ಅಜಿತ್‌
3.ಪೆಟ್ಟಾ – ರಜನಿಕಾಂತ್‌
4.ಮಾರಿ 2 – ಧನುಷ್‌
5.ಪೆರಂಬು – ಮಮ್ಮು¾ಟ್ಟಿ
6.ಕಾಲಾ – ರಜನಿಕಾಂತ್‌
7.ಸರ್ಕಾರ್‌ – ವಿಜಯ್‌
8.ವಾದಾ ಚೆನ್ನೈ – ಧನುಷ್‌
9.ತಾಂಡಮ್‌ – ಅರುಣ್‌ ವಿಜಯ್‌
10.ಕಣ್ಣೇ ಕಲೈಮಾಯೇ – ತಮನ್ನಾ

Advertisement

Udayavani is now on Telegram. Click here to join our channel and stay updated with the latest news.

Next