ಮುಂಬೈ: 28 ವರ್ಷಗಳ ಬಳಿಕ ಭಾರತವು ವಿಶ್ವ ಸುಂದರಿ 2023 ಕಾರ್ಯಕ್ರಮ ಆಯೋಜಿಸಲು ಸಜ್ಜಾಗಿದೆ. ಪ್ರತಿಷ್ಠಿತ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ 71 ನೇ ಆವೃತ್ತಿಯು ನವೆಂಬರ್ ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಅಂತಿಮ ದಿನಾಂಕಗಳನ್ನು ಇನ್ನೂ ದೃಢವಾಗಬೇಕಿದೆ.
1996ರಲ್ಲಿ ಕೊನೆಯದಾಗಿ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿತ್ತು. ರಾಷ್ಟ್ರವು ತನ್ನ ಆತಿಥ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಅನುವು ನೀಡುತ್ತದೆ.
ಫೆಮಿನಾ ಮಿಸ್ ಇಂಡಿಯಾ 2022 ಪ್ರಶಸ್ತಿಯನ್ನು ಗೆದ್ದಿರುವ ಸಿನಿ ಶೆಟ್ಟಿ ಮುಂಬರುವ ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವಕಾಶದ ಬಗ್ಗೆ ಮಾತನಾಡುತ್ತಾ ಸಿನಿ ಶೆಟ್ಟಿ ಅವರು, ಪ್ರಪಂಚದಾದ್ಯಂತದ ತಮ್ಮ ಸಹ ಸ್ಪರ್ಧಿಗಳಿಗೆ ಭಾರತದ ವೈವಿಧ್ಯಮಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಪ್ರದರ್ಶಿಸಲು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.
“ಹಿಂದೆ ಭಾರತವನ್ನು ಹಾವು ಮೋಡಿ ಮಾಡುವವರ ನಾಡು ಎಂದು ಕರೆಯುತ್ತಿದ್ದರು. ಒಂದು ಸಣ್ಣ ಬದಲಾವಣೆಯಾಗಿದೆ, ನಾವು ಇನ್ನೂ ಮೋಡಿ ಮಾಡುವವರಾಗಿದ್ದೇವೆ, ಎಲ್ಲರನ್ನು ಮೋಡಿ ಮಾಡಿದ್ದೇವೆ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ನಮ್ಮ ಸಂಪ್ರದಾಯಗಳು, ನಮ್ಮ ಆತಿಥ್ಯದಿಂದ ಮೋಡಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಎನ್ ಡಿಟಿವಿ ಜೊತೆಗಿನ ವಿಶೇಷ ಸಂವಾದದಲ್ಲಿ ಸಿನಿ ಶೆಟ್ಟಿ ಹೇಳಿದರು.
ವಿಶ್ವ ಸುಂದರಿ ಸ್ಪರ್ಧೆಯು ಇನ್ನೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಮಹಿಳೆಯರ ಒಂದು ಗುಂಪಾಗಿ ಸೇರಿ ಸಮಸ್ಯೆಗಳ ಎದುರಾಗಿ ನಿಲ್ಲಲಾಗುವುದು. ಅದಕ್ಕಾಗಿಯೇ ನಾವು ಇದನ್ನು ಉದ್ದೇಶದ ಜತೆಗೆ ಸೌಂದರ್ಯ ಎಂದು ಹೇಳುವುದು ಎಂದು ಶೆಟ್ಟಿ ಹೇಳಿದರು.