Advertisement
ಧಾರವಾಡ ನರಗುಂದ ಮೂಲದ ಅಂಬಣ್ಣ ಅಲಿಯಾಸ್ ಅಂಬರೀಶ್ ಅಲಿಯಾಸ್ ಅಂಬಣ್ಣ ಬಸಪ್ಪ ಜಾಡರ್ ಅಲಿಯಾಸ್ ಶಿವ (31) ಮತ್ತು ಆತನ ಪತ್ನಿ ರಶೀದಾ ಅಲಿಯಾಸ್ ಖಾಜಿ ಆಲಿಯಾಸ್ ಜ್ಯೋತಿ (26) ಬಂಧಿತರು.
ರತ್ನಾವತಿ ಜಿ.ಶೆಟ್ಟಿ ಅವರ ಮನೆಯ ಹಿಂಭಾಗದಲ್ಲಿ ನಾಲ್ಕು ಬಾಡಿಗೆ ಕೋಣೆಗಳಿದ್ದವು. ಎರಡರಲ್ಲಿ ತಲಾ ಒಬ್ಬೊಬ್ಬರು ವಾಸವಾಗಿದ್ದರು. ಅವರು ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದರು. ಜು.1ರಂದು ಬಾಡಿಗೆ ಮನೆ ಕೇಳಿಕೊಂಡು ದಂಪತಿ ಬಂದಿದ್ದು, ಅವರಿಗೆ ರತ್ನಾವತಿ ಅವರು ಬಾಡಿಗೆ ಕೋಣೆ ನೀಡಿದ್ದರು. ಅಂದು ಆ ಕೊಠಡಿಯಲ್ಲಿ ವಾಸವಿದ್ದ ಈ ಜೋಡಿ ಮರುದಿನ ಅಪರಾಹ್ನ 3.30ರ ವೇಳೆಗೆ ರತ್ನಾವತಿ ಅವರನ್ನು ಮಲಗುವ ಕೋಣೆಯಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಿ ಕಾಲ್ಕಿತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರತ್ನಾವತಿ ಅವರ ಶವ ಜು.5ರಂದು ರಾತ್ರಿ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
Related Articles
ಆರೋಪಿಗಳು ದುಂದುವೆಚ್ಚ ಮಾಡುತ್ತಿದ್ದು, ಚಿನ್ನಾಭರಣ ಮತ್ತು ಹಣಕ್ಕಾಗಿಯೇ ಕೊಲೆ ನಡೆಸಿರುವುದನ್ನು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇವರು ರತ್ನಾವತಿ ಶೆಟ್ಟಿ ಮೈಮೇಲಿದ್ದ ಸುಮಾರು 2 ಲ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕೊಂಡೊಯ್ದಿದ್ದು, ಅದನ್ನು ಇನ್ನಷ್ಟೇ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.
Advertisement
ಬಂಧಿತರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಚಿನ್ನ ನೋಡಿ ಬಾಡಿಗೆ ಮನೆ ಫಿಕ್ಸ್ !ಆರೋಪಿಗಳು ಬಾಡಿಗೆ ಮನೆಯನ್ನು ಒಪ್ಪಿಕೊಳ್ಳುವ ಮೊದಲು ರತ್ನಾವತಿ ಜತೆ ತುಂಬಾ ಹೊತ್ತು ಮಾತನಾಡಿದ್ದರು. ಈ ವೇಳೆ ರತ್ನಾವತಿ ಮೈಮೇಲಿದ್ದ ಚಿನ್ನಾಭರಣಗಳನ್ನು ಗಮನಿಸಿದ್ದರು. ಮನೆಯಲ್ಲಿ ಇನ್ನೂ ಚಿನ್ನಾಭರಣಗಳು ಇರಬಹುದು ಎಂದು ಸ್ಕೆಚ್ ಹಾಕಿ ಬಾಡಿಗೆ ಮನೆಯನ್ನು ಒಪ್ಪಿಕೊಂಡಿದ್ದರು. ಆರೋಪಿಗಳು ಗೋವಾದ ಓಲ್ಡ್ ಗೋವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವುದನ್ನು ಉಡುಪಿ ಪೊಲೀಸರು ಖಚಿತಪಡಿಸಿಕೊಂಡಿದ್ದರು. ಕೂಡಲೇ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ವಶಕ್ಕೆ ಪಡೆಯುವಂತೆ ಕೋರಿಕೊಂಡಿದ್ದರು. ಅನಂತರ ಉಡುಪಿಯ ವಿಶೇಷ ತಂಡ ಗೋವಾಕ್ಕೆ ತೆರಳಿತ್ತು. ಎಸ್‌ಪಿ ನಿಶಾ ಜೇಮ್ಸ್ ನಿರ್ದೇಶನ, ಎಎಸ್‌ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಸಿಐ ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣಾಧಿಕಾರಿ ಮಧು, ಉಡುಪಿ ಎಎಸ್‌ಐ ಗೋಪಾಲಕೃಷ್ಣ, ಡಿಸಿಐಬಿ ಸಿಬಂದಿ ಪಾಲ್ಗೊಂಡಿದ್ದರು.
ಆರೋಪಿಗೆ
ಕ್ರಿಮಿನಲ್ ಹಿನ್ನೆಲೆ
ಅಂಬರೀಶ್ ವಿರುದ್ಧ ಹುಬ್ಬಳ್ಳಿಯಲ್ಲಿ ಮೊಬೈಲ್ ಕಳವು, ಬಿಜಾಪುರದಲ್ಲಿ ಸ್ಕೂಟರ್ ಕಳವು, ಬಾದಾಮಿಯಲ್ಲಿ ಸರ ಸುಲಿಗೆ ಹಾಗೂ ಮಂಗಳೂರಿನ ಕಾವೂರಿನಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಈತ ರಶೀದಾಳನ್ನು ಮದುವೆಯಾಗಿ 8 ವರ್ಷಗಳಾಗಿವೆ.