Advertisement

ಆಶ್ರಮ ಶಾಲೆಯಲ್ಲಿ ಏಕ ವಿದ್ಯಾರ್ಥಿ

09:32 AM May 02, 2022 | Team Udayavani |

ಪುತ್ತೂರು: ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಸತಿಯುತ ಶಿಕ್ಷಣಕ್ಕಿರುವ ತಾಲೂಕಿನ ಏಕೈಕ ಸರಕಾರಿ ಆಶ್ರಮ ಶಾಲೆಯಲ್ಲಿ ಈಗ ಇರುವುದು ಏಕ ಮಾತ್ರ ವಿದ್ಯಾರ್ಥಿ!

Advertisement

ವರ್ಷದಿಂದ ವರ್ಷಕ್ಕೆ ವಸತಿಯುತ ಶಾಲೆಗಳ ಪೈಕಿ ಆಶ್ರಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಇಳಿಮುಖವಾಗುತ್ತಿದ್ದು ಇದೇ ತೆರನಾಗಿ ಸಾಗಿದರೆ ಬೀಗ ಜಡಿಯುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಇಂದಿನ ಚಿತ್ರಣ.

ವಾಲ್ಮೀಕಿ ಆಶ್ರಮ ಶಾಲೆ

ಪುತ್ತೂರು ತಾಲೂಕಿಗೆ ಸಂಬಂಧಿಸಿ ಬಲ್ನಾಡಿನ ಸಾಜದಲ್ಲಿ 1960ರಲ್ಲಿ ಪರಿಶಿಷ್ಟ ವರ್ಗದ ವಾಲ್ಮೀಕಿ ಆಶ್ರಮ ಶಾಲೆ ತೆರೆಯಲಾಗಿತ್ತು. 75 ವಿದ್ಯಾರ್ಥಿಗಳ ಬಲ ಹೊಂದಿರುವ ವಸತಿಯುತ ಶಾಲೆ ಇದಾಗಿದ್ದು ಇಲ್ಲಿ 1ರಿಂದ 5ನೇ ತರಗತಿ ತನಕ ವ್ಯಾಸಂಗಕ್ಕೆ ಅವಕಾಶ ಇದೆ. ಶೇ. 50ರಷ್ಟು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ, ಉಳಿದ ಶೇ. 50ರಲ್ಲಿ ಎಸ್‌ಸಿ/ ಇತರ ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಕರು, ಅಡುಗೆ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ವಸತಿ ಸಹಿತ ಊಟ, ಉಪಹಾರ ವ್ಯವಸ್ಥೆ ಈ ಶಾಲೆಗಳಲ್ಲಿ ನೀಡಲಾಗುತ್ತದೆ.

ಏಕ ಮಾತ್ರ ವಿದ್ಯಾರ್ಥಿ

Advertisement

ತಾಲೂಕಿನ ಈ ಆಶ್ರಮ ಶಾಲೆಯಲ್ಲಿ ಈಗ ಉಳಿದುಕೊಂಡಿರುವುದು ಓರ್ವ ವಿದ್ಯಾರ್ಥಿ ಮಾತ್ರ. ಕಳೆದ ಶೈಕ್ಷಣಿಕ ವರ್ಷದಲ್ಲಿ ಮೂವರು ವಿದ್ಯಾರ್ಥಿಗಳಿದ್ದರು. ಇವರ ಪೈಕಿ ಇಬ್ಬರು ಐದನೇ ತರಗತಿ ಪೂರ್ಣಗೊಳಿಸಿ ಬೇರೆ ಶಾಲೆಗೆ ತೆರಳಿದ್ದಾರೆ. ಓರ್ವ ವಿದ್ಯಾರ್ಥಿ ನಾಲ್ಕನೇ ತರಗತಿಯಿಂದ ಉತೀರ್ಣಗೊಂಡು ಐದನೇ ತರಗತಿಗೆ ತೇರ್ಗಡೆಗೊಂಡಿದ್ದಾರೆ. ಹೀಗಾಗಿ ಪ್ರಸ್ತುತ ಓರ್ವ ವಿದ್ಯಾರ್ಥಿ ಮಾತ್ರ ಉಳಿದುಕೊಂಡಿದ್ದಾರೆ. ಏಳೆಂಟು ವರ್ಷಗಳ ದಾಖಲಾತಿ ಅಂಕಿ ಅಂಶ ಗಮ ನಿಸಿದರೆ ದಾಖಲಾತಿ ಪ್ರಮಾಣ ಹತ್ತು ದಾಟುತ್ತಿಲ್ಲ. ಈ ಬಾರಿ ಕೂಡ ಹೊಸದಾಗಿ ದಾಖಲಾತಿಯಾದಲ್ಲಿ ಮಾತ್ರ ವಿದ್ಯಾರ್ಥಿ ಸಂಖ್ಯೆ ಏರಿಕೆ ಕಾಣಲಿದೆ.

ದಾಖಲಾತಿ ಹೆಚ್ಚಳಕ್ಕೆ ಸೂಚನೆ

ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಇಳಿಕೆ ಆಗಿರುವುದು ಗಮನಕ್ಕೆ ಬಂದಿದೆ. ವಸತಿಯುತ ಶಾಲೆ ಇದಾಗಿದ್ದು ಇಲ್ಲಿ ಅರ್ಹ ವಿದ್ಯಾರ್ಥಿಗಳ ಪ್ರವೇಶಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂಜೀವ ಮಠಂದೂರು, ಶಾಸಕರು, ಪುತ್ತೂರು.

ಪ್ರಚಾರ ಕೈಗೊಳ್ಳಲಾಗುತ್ತಿದೆ

ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಪ್ರಸ್ತುತ ಓರ್ವ ವಿದ್ಯಾರ್ಥಿ ಇದ್ದಾರೆ. ಕೋವಿಡ್‌ ಕಾರಣದಿಂದ ಎರಡು ವರ್ಷಗಳಲ್ಲಿ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಿನ ಇಳಿಕೆ ಕಂಡಿತು. ಈ ಬಾರಿಯ ದಾಖಲಾತಿಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ. ಕೃಷ್ಣ,ವ್ಯವಸ್ಥಾಪಕ ಸಮಾಜ ಕಲಾಣ್ಯ ಇಲಾಖೆ, ಪುತ್ತೂರು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next