Advertisement

ಒಂದೇ ಸೂರು, 464 ದೇವರು!!!

02:27 PM Oct 14, 2017 | |

ಸ್ಥಳಪುರಾಣವನ್ನಾಧರಿಸಿ ಬೇರೆ ಬೇರೆ ಪುಣ್ಯಕ್ಷೇತ್ರಗಳಲ್ಲಿ ಸ್ಥಾಪಿತವಾಗಿರುವ ಪ್ರಸಿದ್ಧ ದೇವರುಗಳನ್ನು ನೋಡಲು ತೀರ್ಥಯಾತ್ರೆ ಕೈಗೊಂಡಾಗ, ಅಲ್ಲಿರುವ ಒಂದೊ ಎರಡೋ 3 ದೇವರನ್ನು ನೋಡಿ ಪುನೀತರಾಗುತ್ತೇವೆ. ಆದರೆ ಒಂದೇ ಸೂರಿನಡಿ 464 ದೇವದೇವತೆಗಳನ್ನ ನೋಡಲು ಸಾಧ್ಯವಾದರೆ? ಎಷ್ಟು ಚೆನ್ನಾಗಿರುತ್ತದೆಯಲ್ಲವೆ? ಹೌದು, ಅಂಥದ್ದೊಂದು ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಪರಮನಹಳ್ಳಿಯಲ್ಲಿದೆ.  

Advertisement

ಹೊಸಕೋಟೆಯಿಂದ ಮಾಲೂರು ರಸ್ತೆಯಲ್ಲಿ ಸಾಗಿ ನಂದಿಗುಡಿ ಕ್ರಾಸಿನಲ್ಲಿ ಬಲಕ್ಕೆ 10 ಕಿಮೀ ಸಾಗಿದರೆ ಸಿಗುವುದೇ ಪರಮನಹಳ್ಳಿ. ಈ ಊರಿಂದ ದೂರ ಬಂದರೆ ಸಿಗುವುದೆ ಈ ಪುಣ್ಯಕ್ಷೇತ್ರ. ಇದನ್ನು ಶ್ರೀ ಶ್ರೀ ಶ್ರೀ ಓಂ ಶಕ್ತಿ ಮಹಾತಾಯಿ ಪುಣ್ಯಕ್ಷೇತ್ರವೆಂದು ಕರೆಯುತ್ತಾರೆ. ಇಲ್ಲಿ ಆದಿಶಕ್ತಿ, ಪರಾಶಕ್ತಿ ಮತ್ತು ಓಂ ಶಕ್ತಿಗಳು ನೆಲೆ ನಿಂತಿವೆ. ಇದು ಸರ್ವಜನ ಸ್ವಹಸ್ತ ಪೂಜಾ ಪುಣ್ಯಕ್ಷೇತ್ರ.

ಒಂದೇ ಸೂರಿನಡಿ 464 ದೇವಾನುದೇವತೆಗಳಿವೆ. ಅರ್ಧ ಅಡಿಯಿಂದ ಹಿಡಿದು ಆಳೆತ್ತರದವರೆಗಿನ ಸುಂದರ ಶಿಲ್ಪಗಳು ಕಣ್ಮನ ಸೆಳೆಯುತ್ತವೆ. ದೇವಸ್ಥಾನದ ಮುಂದೆ ನಿಂತರೆ ಸಾಕು, ರಾಂದೇವ್‌ ಎಂಬ ಕರೆಯೊಂದಿಗೆ ಬೊಚ್ಚು ಬಾಯಿಯ 83 ವರ್ಷದ ಈ ಕ್ಷೇತ್ರ ಸೇವಕರಾದ ವೃದ್ಧ ವ್ಯಕ್ತಿಯೊಬ್ಬರು ನಿಮ್ಮನ್ನು ಸ್ವಾಗತಿಸುತ್ತಾರೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಇಲ್ಲಿ ಗುಡಿ ಗೋಪುರವಾಗಲಿ, ಗರ್ಭಗುಡಿಯಾಗಲಿ ಇಲ್ಲ.  

ಇರುವುದೊಂದೇ ದೊಡ್ಡ ಸೂರು. ಅಲ್ಲೇ 464 ದೇವರುಗಳು ವಾಸ್ತವ್ಯ ಹೂಡಿದ್ದಾರೆ. ಈ ಪರಮನಹಳ್ಳಿಯಲ್ಲಿ ಸಿದ್ಧ ಪುರುಷರು ಋಷಿಮುನಿಗಳು ತಪಸ್ಸು ಮಾಡಿದ್ದರೆಂಬ ಪ್ರತೀತಿ ಇದೆ. ದೇವಸ್ಥಾನವನ್ನು ಪ್ರವೇಶಿಸಿದರೆ ಮುಖ್ಯ ದ್ವಾರದಲ್ಲೇ ಆಳೆತ್ತರದ ಕಾಲಭೈರವನ ಮೂರ್ತಿ ನಿಮ್ಮನ್ನು ಸ್ವಾಗತಿಸುತ್ತದೆ. ಎಡಬದಿಯಲ್ಲಿ ಶ್ರೀಶಕ್ತಿ ಮಹಾತಾಯಿ ಕುಳಿತಿದ್ದಾಳೆ. ಈ ದೇವಸ್ಥಾನದ ರೂವಾರಿ ತೋಟಿ ನಂಜಪ್ಪನವರು.  

ಬಾಲ್ಯದಿಂದಲೂ ದೇವರಲ್ಲಿ ಆದಮ್ಯ ಭಕ್ತಿ ನಂಬಿಕೆಯನ್ನು ಹೊಂದಿದ್ದವರು. ಆ ನಂಬಿಕೆ-ಭಕ್ತಿಯೇ ಇವರಿಗೆ ಇಂತಹದ್ದೊಂದು ಕೆಲಸ ಮಾಡಲು ಪ್ರೇರಣೆ. ಸುಮಾರು ವರ್ಷಗಳ ಹಿಂದೆ ಇವರಿಗೆ ತಮ್ಮ ಊರಿನಲ್ಲಿದ್ದ ಚಾಲುಕ್ಯರ ಕಾಲದ ಸಪ್ತಮಾತೆಯರ ಉಬ್ಬು ಶಿಲ್ಪದ ಸಾಲು ವಿಗ್ರಹದ ಕಲ್ಲೊಂದು ಮನ ಸೆಳೆದಿತ್ತು. ಅದರಲ್ಲಿ ಚಾಮುಂಡಿ, ಮಹೇಶ್ವರಿ, ಇಂದ್ರಾಣಿ, ವರಾಹದೇವಿ, ವನದೇವಿ, ಗಿರಿಜಾಕುಮಾರಿ ಮುಂತಾದ ದೇವತೆಗಳ ಶಿಲ್ಪಗಳು ಇದ್ದವು.

Advertisement

ಆದರೆ ಚಾಮುಂಡಿ ಹಾಗೂ ವರಾಹದೇವಿಯ ಮುಖವನ್ನು ಊರಿನ ಮತಿಗೆಟ್ಟ ಯುವಕನೊಬ್ಬ ವಿರೂಪಗೊಳಿಸಿದ. ಅದನ್ನು ಶಿಲ್ಪಿಗಳಿಂದ ಸರಿಪಡಿಸಲು ಮುಂದಾದ ನಂಜಪ್ಪನವರಿಗೆ ನಿರಾಸೆ ಕಾದಿತ್ತು. ಶಿಲ್ಪಿಗಳು ಆ ಕಲ್ಲು ಬಹಳ ಮೃದುವಾದದ್ದೆಂದೂ ಸರಿ ಪಡಿಸಲು ಸಾಧ್ಯವಿಲ್ಲವೆಂದೂ ಹೇಳಿದ್ದರು. ಇದಕ್ಕೂ ಮುಂಚೆಯೇ ನಂಜಪ್ಪನವರು ನಿವೃತ್ತಿಯಾದಾಗ ತಮಗೆ ಬಂದ ಹಣದಿಂದ ಊರಿನಲ್ಲಿ ಶ್ರೀ ರಾಮಚಂದ್ರರ ದೇವಸ್ಥಾನವನ್ನು ಕಟ್ಟಿಸಿದ್ದರು.

ಆರ್ಥಿಕ ತೊಂದರೆ ಇದ್ದರು ಂದು ಮುಂದು ನೊಡದೆ ಸಪ್ತಮಾತೆಯರ ಹೊಸ ಮೂರ್ತಿಯನ್ನು ಪ್ರತಿಷ್ಟಾಪಿಸಲು ಮುನ್ನುಗ್ಗಿಯೇ ಬಿಟ್ಟರು.ಅದೇನು ದೈವ ಪ್ರೇರಣೆಯೊ ಏನೋ, ಕೈಗೆತ್ತಿಕೊಂಡ ಕೆಲಸ ಹೂವೆತ್ತಿದಂತೆ ಆಯಿತು ಎನ್ನುತ್ತಾರೆ ನಂಜಪ್ಪನವರು. ಇವರ ಹಂಬಲಕ್ಕೆ ಇಂಬುಕೊಡುವಂತೆ 54 ದಾನಿಗಳು ಇವರ ಜೊತೆಗೂಡಿದರು.

1 ಲಕ್ಷದ 65 ಸಾವಿರ ರೂ. ಸಂಗ್ರಹವಾಗಿ ಒಂದೊಂದೇ ದೇವರ ಮೂರ್ತಿಗಳು ಸಾಲು ಸಾಲಾಗಿ ಪ್ರತಿಷ್ಟಾಪಿಸಲ್ಪಟ್ಟವು. ಇಲ್ಲಿರುವ ಪಂಚಮುಖೀ ಆಂಜನೇಯ ಉಗ್ರನರಸಿಂಹ, ತಿರುಪತಿ ತಿಮ್ಮಪ್ಪ, ಗಣೇಶನ ಮೂರ್ತಿಗಳು ಎಂಥಹವರನ್ನೂ ಆಕರ್ಷಿಸುತ್ತದೆ. ಇಲ್ಲಿರುವ 464 ಶಿಲ್ಪಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದ್ದು ಆಕರ್ಷಣೀಯವಾಗಿದೆ. ಒಟ್ಟಾರೆ ಈ ಕ್ಷೇತ್ರ ದೇವಾನುದೇವತೆಗಳ ಅಪೂರ್ವ ಮ್ಯೂಸಿಯಂ ಎಂದರೂ ತಪ್ಪಾಗಲಾರದು.          

* ಪ್ರಕಾಶ್‌.ಕೆ.ನಾಡಿಗ್‌, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next