Advertisement
2003-04ರಲ್ಲಿ ಫ್ರಾನ್ಸ್ ಕಂಪೆನಿಯೊಂದು ನಿರಂತರ ನೀರು ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆ ಎಂಬ ಸುದ್ದಿ ದೊಡ್ಡ ಸಂಚಲನ ಮೂಡಿಸಿತ್ತು. ನೀರಿನ ಖಾಸಗೀಕರಣ, ವಿದೇಶಿ ಕಂಪೆನಿ ಹಿಡಿತಕ್ಕೆ ಸ್ಥಳೀಯ ನೀರು ಪೂರೈಕೆ ಅಧಿಕಾರ, ಸಾರ್ವಜನಿಕ ನಳಗಳ ಸೌಲಭ್ಯ ರದ್ದು ಎಂಬಿತ್ಯಾದಿ ಆರೋಪ-ಹೋರಾಟದ ಗೊಂದಲಗಳ ನಡುವೆಯೇ ಕಾರ್ಯಾರಂಭ ಮಾಡಿತ್ತು. ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ನಾಲ್ಕು, ಧಾರವಾಡದಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಂಡಿತ್ತು.
Related Articles
Advertisement
ಮಳೆಗಾಲದಲ್ಲೂ ವಾರಕ್ಕೊಮ್ಮೆ
ಎಲ್ ಆ್ಯಂಡ್ ಟಿಗೆ ಯೋಜನೆ ಗುತ್ತಿಗೆ ನೀಡಿದ ನಂತರದಲ್ಲಿ ನಾಲ್ಕೈದು ದಿನಕ್ಕೊಮ್ಮೆ ಇದ್ದ ನೀರು 8-10 ದಿನಕ್ಕೊಮ್ಮೆ ಆಗಿದೆ. ಕೆಲವೆಡೆ ನಾಲ್ಕೈದು ದಿನಕ್ಕೊಮ್ಮೆ ನೀಡುತ್ತಿದ್ದರೂ ಹಲವೆಡೆ ಈಗಲೂ ವಾರಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಕಾರಣ ಕೇಳಿದರೆ ರಿಪೇರಿ ನೆಪ ಹೇಳಲಾಗುತ್ತಿದೆ. ಅಲ್ಲದೆ ಎಲ್ಲಿಯಾದರೂ ಪೈಪ್ ರಿಪೇರಿ ಎಂದು ತಿಳಿಸಿದರೆ ಎಲ್ ಆ್ಯಂಡ್ ಟಿ ಯವರು ವಿಳಂಬ ಧೋರಣೆ ತಾಳುತ್ತಿದ್ದಾರೆ ಎಂಬ ಆರೋಪವಿದೆ. ನೀರಿನ ಕೊರತೆ ಇಲ್ಲವಾದರೂ ವಾರಕ್ಕೊಮ್ಮೆ ನೀರು ಯಾಕೆ ಎಂಬ ಬಗ್ಗೆ ಪಾಲಿಕೆ ಗಂಭೀರವಾಗಿ ಚಿಂತಿಸಬೇಕಾಗಿದೆ.
ಕಳಪೆ ಸಾಮಗ್ರಿ ಅಳವಡಿಕೆ ಆರೋಪ
ಎಲ್ ಆ್ಯಂಡ್ ಟಿ ಕಂಪೆನಿ ಅಳವಡಿಸುತ್ತಿರುವ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಇನ್ನು ಕೆಲವು ಕಡೆಗಳಲ್ಲಿ ನೀರು ಸಂರ್ಪಕದ ತೊಂದರೆ ಉಂಟಾದರೆ ಆಯಾ ಬಡಾವಣೆ, ನಿವಾಸಿಗಳಿಗೆ ಸಾಮಗ್ರಿ ಬರುವುದಕ್ಕೆ ತಡವಾಗುತ್ತದೆ. ನೀವು ಸಾಮಗ್ರಿ ತಂದುಕೊಟ್ಟರೆ ಮರು ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಲಾಗುತ್ತಿದೆಯಂತೆ. ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮುಖ್ಯವಾಗಿ ಎಲ್ ಆ್ಯಂಡ್ ಟಿ ಕಂಪೆನಿಯವರು ವಾರ್ಡ್‌ವಾರು ಸಭೆ ನಡೆಸಿ ಜನರ ಗೊಂದಲ, ಶಂಕೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.
ಹೆಚ್ಚಿನ ಮೀಟರ್‌ಗೆ ಅವಕಾಶ? ಹೆಚ್ಚಿನ ಮೀಟರ್‌ಗೆ ಅವಕಾಶ? ಈ ಹಿಂದೆ 24×7 ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡಾಗ ಒಂದು ಮನೆಗೆ ಒಂದೇ ನಳದ ಸಂಪರ್ಕ ನೀಡಲಾಗಿತ್ತು. ಆರಂಭದಲ್ಲಿ ಅಡೆತಡೆ ಇಲ್ಲದೆ ನೀರು ಸಿಗುತ್ತದೆ ಖುಷಿ ಇತ್ತಾದರೂ, ಐದಾರು ತಿಂಗಳ ನಂತರ ಬಂದ ಬಿಲ್ ನೋಡಿ ಆಘಾತವೂ ಆಗಿತ್ತು. ಯೋಜನೆಯ ನಿಯಮದಂತೆ 8 ಸಾವಿರ ಕಿಲೋ ಲೀಟರ್‌ವರೆಗೆ ಕನಿಷ್ಟ ದರ, ನಂತರದ ನೀರು ಬಳಕೆಯ ಪ್ರಮಾಣಕ್ಕೆ ಹೆಚ್ಚಿನ ದರ ವಿಧಿಸಲಾಗುತ್ತಿತ್ತು. ಇದು ಸಮಸ್ಯೆಯಾಗಿ ಪರಿಣಮಿಸಿತ್ತು. ಒಂದೇ ಮಾಲೀಕತ್ವದಲ್ಲಿ ಎರಡೂ¾ರು ಅಂತಸ್ತಿನ ಮನೆಗಳು, ಗುಂಪು ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ ನೀರಿಗಿಂತ ಬಿಲ್ ಭಾರವೇ ಹೆಚ್ಚಿನದಾಗಿತ್ತು. ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ಒಂದು ಸಂಪರ್ಕ ಪಡೆದರೂ, ಒಂದಕ್ಕಿಂತ ಹೆಚ್ಚಿನ ಮೀಟರ್‌ಗಳನ್ನು ಅಳವಡಿಸಿಕೊಳ್ಳಬಹುದು ಎಂದಾದ ಮೇಲೆ ನೀರಿನ ಬಳಕೆ ಹಂಚಿಕೆಯಾಗಿ ಬಿಲ್‌ನಲ್ಲಿ ಕಡಿಮೆಯಾಗಿತ್ತು. ಇದೀಗ ಎಲ್ ಆ್ಯಂಡ್ ಟಿ ಒಂದು ಮಾಲೀಕತ್ವಕ್ಕೆ ಒಂದೇ ನಳ ಸಂಪರ್ಕ ಎನ್ನುತ್ತಿದೆಯೋ ಅಥವಾ ಸಂಪರ್ಕ ಒಂದೇಯಾದರೂ ಒಂದಕ್ಕಿಂತ ಹೆಚ್ಚಿನ ಮೀಟರ್ ಅಳವಡಿಕೆಗೆ ಅವಕಾಶ ನೀಡುತ್ತೇವೆ ಎನ್ನುತ್ತದೆಯೋ ಎಂಬ ಗೊಂದಲಕ್ಕೆ ತೆರೆ ಎಳೆಯಬೇಕಾಗಿದೆ. ಜತೆಗೆ ಗಿಲಾವ್ ಮಾಡದ, ಬಣ್ಣ ಬಳಿಯದ ಮನೆಗಳಿಗೆ ನಳದ ಸಂಪರ್ಕ ಇಲ್ಲ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಬೇಕಾಗಿದೆ.
-ಅಮರೇಗೌಡ ಗೋನವಾರ