ಅಯೋಧ್ಯೆಯಲ್ಲಿ ರಾಣಿಯಾಗಿ ಮೆರೆಯುತ್ತಿದ್ದ ನೀನು ಲವಕುಶರನ್ನು ಮಡಿಲಲ್ಲಿ ಪಡೆಯುವ ಹೊತ್ತಿಗೆ, ಎಲ್ಲ ವೈಭೋಗಗಳನ್ನೂ, ಜೊತೆಗೆ ಗಂಡನ ಬಲವನ್ನೂ ಕಳೆದುಕೊಂಡು, ಕೇವಲ ಗಟ್ಟಿ ಗುಂಡಿಗೆಯ ಒಂಟಿ ತಾಯಿ ಮಾತ್ರವಾಗಿದ್ದೆ. “ಇಹ-ಪರಕ್ಕೆಲ್ಲಕ್ಕೂ ನೀನೇ ಗತಿ’ ಎಂದು ಸಂಪೂರ್ಣವಾಗಿ ಗಂಡನನ್ನೇ ನಂಬಿಕೊಂಡಿದ್ದ ನೀನು ಹೀಗೆ ನಡು ಬದುಕಿನಲ್ಲಿ ಏಕಾಂಗಿಯಾದೆಯಲ್ಲಾ? ಅದೂ ಒಂದಲ್ಲ, ಎರಡು ಮಕ್ಕಳ ಹೊಟ್ಟೆ , ಬಟ್ಟೆ , ಸಂಸ್ಕಾರಯುತ ಬದುಕು ನಿನ್ನೊಬ್ಬಳ ಹೊಣೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಯಾವ ನೆಪಕ್ಕೂ ತಡಕಾಡದೇ ತಯಾರಾಗಿ ನಿಂತೆಯಲ್ಲಾ! ಭಲೇ ತಾಯಿ! ಸಿಡಿಲಿನಂತೆ ಅಕಸ್ಮಾತ್ತಾಗಿ ಬಂದೆರಗುವ ಇಂತಹ ಸನ್ನಿವೇಶಗಳು ನಿನ್ನಂತಹ ತಾಯಂದಿರಿಗೆ ಯಾವ ಪೂರ್ವಸಿದ್ಧತೆಗೂ ಎಡೆ ಕೊಟ್ಟಿರುವುದಿಲ್ಲ. ಹಾಗಿದ್ದರೂ ಇದು ಹೇಗೆ ಸಾಧ್ಯವಾಗುತ್ತದೆ?
Advertisement
ಗೇರುಬೀಜದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಲೇ ಪಟ್ಟಾಂಗಕ್ಕಿಳಿದಿರುವ ಇಬ್ಬರು ತಾಯಂದಿರ ಮಾತುಗಳಿಗೆ ತುಸು ಹೊತ್ತು ಕಿವಿಯಾಗೋಣವೆ?
Related Articles
Advertisement
“”ಪದ್ದೂ, ನಳ ಮಹಾರಾಜನ ಕಥೆ ಗೊತ್ತಾ ನಿನಗೆ? ಅವನು ಜೂಜಿನ ಚಟಕ್ಕೆ ಬಿದ್ದು ರಾಜ್ಯ, ಕೋಶ ಎಲ್ಲ ಕಳ್ಕೊಳ್ಳುತ್ತಾನೆ. ಇಷ್ಟು ಸಾಲದು ಅಂತ ಕಾಡಿನ ಮಧ್ಯೆ ತನ್ನ ಮುದ್ದಿನ ಹೆಂಡತಿ ದಮಯಂತಿಯನ್ನೂ ಒಬ್ಬಂಟಿ ಬಿಟ್ಟು ನಡೆದುಬಿಟ್ಟ. ಇದ್ದ ಒಂದು ವಸ್ತ್ರವನ್ನೂ ಎರಡು ತುಂಡುಮಾಡಿ ಅದನ್ನೇ ಉಟ್ಟು ಕಾಡಲ್ಲಿ ಕಾಲ ಕಳೀತಿದ್ದ ಗಂಡ-ಹೆಂಡತಿ ಅವರು. ಇದ್ದಕ್ಕಿದ್ದ ಹಾಗೆ ಗಂಡ ಕಣ್ಣಿಗೆ ಕಾಣಲಿಲ್ಲ! ಸುತ್ತಮುತ್ತ ಬೇಟೆಗೆ, ಬೇಟಕ್ಕೆ ಹೊಂಚು ಹಾಕ್ತಿರೋ ಕ್ರೂರಪ್ರಾಣಿಗಳು, ಕಿರಾತರು! ಆ ಹೆಣ್ಣು ಹೆಂಗಸು ದಮಯಂತಿ ಏನು ಮಾಡಬೇಕು ಹೇಳು! ಚತುರೆ ಅವಳು, ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಅಪ್ಪನ ಮನೆ ಸೇರಿದಳು. “ದಮಯಂತಿ ಪುನರ್ ಸ್ವಯಂವರ’ ಅಂತ ಡಂಗುರ ಸಾರಿಸಿ, ಎಲ್ಲಿದೊ°à ನಳಮಹಾರಾಜ, ತನ್ನ ಗಂಡ ತನ್ನ ಹತ್ತಿರ ಓಡಿಬರುವ ಹಾಗೆ ಮಾಡ್ಕೊಂಡಳು”.“”ಪದ್ದೂ, ನೀನೂ ಯಾಕೆ ಇನ್ನೊಂದು ಮದುವೆ ಮಾಡ್ಕೊàತೇನೇ ಅಂತ ಸುದ್ದಿ ಹಬ್ಬಿಸ ಬಾರದು? ನಿನ್ನ ಗಂಡ ಎಲ್ಲೇ ಇರಲಿ, ನಿನ್ನನ್ನು ಹುಡುಕಿಕೊಂಡು ಓಡಿ ಬರಲಿಲ್ಲ ಅಂದ್ರೆ ಕೇಳು!” “”ಏನಂದ್ರಿ, ಗಂಗಮ್ಮಾ ಮದುವೆ…?” “”ಯಾಕೆ ಪದ್ದೂ, ಮುಖ ಕಪ್ಪಾಯ್ತು? ಒಂದು ಮದುವೆಗೇ ಸಾಕ್ ಸಾಕಾಯ್ತು. ಈಗ ಇನ್ನೊಂದು ಮದುವೆಯಾ ಅಂತ ಗಾಬರಿಯಾಯ್ತಾ? ಅಥವಾ ಓಡಿ ಹೋದವನೆಲ್ಲಾದರೂ ತಿರುಗಿ ಬಂದರೆ ಮತ್ತೆ ಹಳೇ ಬದುಕು ಮರುಕಳಿಸುತ್ತದೆ ಅಂತ ಹೆದರಿಕೆಯಾ?” ಕೇಳಿಸುತ್ತಿದೆಯೇ ಸೀತೆ, ಈ ಮಾತುಗಳನ್ನಾಡುತ್ತಲೇ ಹೆಂಗಸರಿಬ್ಬರೂ ನಗುತ್ತಿದ್ದಾರೆ. ಕಷ್ಟದ ಕಲ್ಲುಬಂಡೆಗಳು ಅವರ ಮೇಲೆರಗಿದರೂ, ಅವರ ಜೀವನೋತ್ಸಾಹ ತಗ್ಗಿಲ್ಲ. ತಮ್ಮ ನಗುವನ್ನು ಪ್ರಶ್ನಿಸುವ ಮಂದಿಯೆದುರು ಸೆಟೆದು ನಿಲ್ಲುವ ಛಾತಿಯನ್ನವರು ತೋರಬಲ್ಲರು. “ಮೊದಲಲ್ಲಿ ತಂದೆಗೆ, ನಡುವಲ್ಲಿ ಗಂಡಂಗೆ, ಕೊನೆಯಲ್ಲಿ ಮಗನಿಗೆ ಅಧೀನಳಾಗಿ ಬಾಳು’ ಎಂಬ ಪಾಠ ಕೇಳುತ್ತಲೇ ಬೆಳೆದ ಇವರಿಗೆ ಅರ್ಧ ದಾರಿ ಸಾಗುವಾಗ ತಮ್ಮ ಮುಂದೆ-ಹಿಂದೆ ಯಾರೂ ಇಲ್ಲ, ಇರುವುದು, ಕೈಹಿಡಿದು ಜೊತೆಯಲ್ಲಿ ನಡೆಯುತ್ತಿರುವ ಮಕ್ಕಳು ಮಾತ್ರ ಎಂಬುದು ಅನುಭವಕ್ಕೆ ಬರುತ್ತದೆ. ಆಗ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಶುರು ಮಾಡುತ್ತಾರೆ. ಒಮ್ಮೊಮ್ಮೆ ಬೀಸುವ ಬಿರುಗಾಳಿಗೆ, ಹುಚ್ಚೆದ್ದು ಸುರಿಯುವ ಮಳೆಗೆ ಆ ಬದುಕು ಚಿಂದಿ ಚಿಂದಿಯಾಗುತ್ತದೆ. ಆದರೆ ಆಗಲೂ ಈ ಗಟ್ಟಿಗಿತ್ತಿಯರು ಕೈಚೆಲ್ಲಿ ಸುಮ್ಮನುಳಿಯುವುದಿಲ್ಲ. ಮತ್ತೆ ಆ ಚೂರುಗಳನ್ನೆಲ್ಲ ಹೆಕ್ಕಿ ಚೆಂದದ ಬಾಳಬಟ್ಟೆಯನ್ನು ನೇಯುತ್ತಾರೆ, ತಮಗಾಗಿ, ತಮ್ಮ ಮಕ್ಕಳಿಗಾಗಿ. ಸಾಲ, ನಷ್ಟ ಅಂತೆಲ್ಲಾ ಬದುಕಿಗೆ ಬೆನ್ನು ತಿರುಗಿಸಿದ ಹೆಣ್ಣುಗಳ ಸಂಖ್ಯೆ ಈ ಪ್ರಪಂಚದಲ್ಲಿ ತೀರಾ ವಿರಳ. ಆದರೆ ಬದುಕಿರುವವರೆಗೆ ಜೊತೆಗಿರುತ್ತೇವೆ ಎಂದು ಮದುವೆ ಹೊತ್ತಲ್ಲಿ ವಾಗ್ಧಾನ ನೀಡಿದ ಗಂಡಂದಿರೇಕೆ ನಡುವಿನಲ್ಲಿಯೇ ಸಂಸಾರಕ್ಕೆ ವಿಮುಖರಾಗುತ್ತಾರೆ? ಹೆಂಡಿರು ಗಟ್ಟಿ ನಿಂತು ಎದೆಯೊಡ್ಡಬಲ್ಲ ಕಟು ಸನ್ನಿವೇಶಗಳು ಇವರನ್ನೇಕೆ ಅಧೀರರನ್ನಾಗಿಸುತ್ತವೆ? ವಿಪರ್ಯಾಸವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಈ ನತದೃಷ್ಟ ಗಂಡಸರು ತಮ್ಮ ಕೆಡುಕಿಗೆ ತಾವೇ ಕಾರಣರಾಗಿರುತ್ತಾರೆ. ಬಹುಶಃ ಬಾಲ್ಯದಲ್ಲಿ ಈ ಬಗೆಗೆ ಸಿಕ್ಕುವ ಪಾಠ ಗಂಡ ಮಕ್ಕಳಿಗೆ ತುಸು ಹೆಚ್ಚಿಸಬೇಕೇನೊ! ಸೀತಮ್ಮಾ, ಸಂಸಾರ ನೊಗಕ್ಕೆ ಒಂಟಿಯಾಗಿ ಹೆಗಲು ಕೊಡುವ ನಿನ್ನಂತಹ ತಾಯಂದಿರು ಅದೆಂತಹ ಗಟ್ಟಿಗಿತ್ತಿಯರು! ಏನೇ ಬರಲಿ, ತುಟಿ ಕಚ್ಚಿ, ತುದಿ ಮುಟ್ಟಿಯೇ ವಿರಮಿಸುವರು. ಬಾನು ಕಾಲಕಾಲಕ್ಕೆ ಮಳೆ ಸುರಿಸಲಿ, ಸುರಿಸದೇ ಇರಲಿ, ಸಸ್ಯ ಸಂಕುಲದ ಜೀವವನ್ನು ಕಾಪಿಡುವ ಗುಟ್ಟು ಈ ಮಣ್ಣಿಗೆ ಗೊತ್ತಿರುತ್ತದೆ ಅಲ್ಲವೇ? – ಅಭಿಲಾಷಾ ಎಸ್.