Advertisement
ಮಾನವ ಸಂಬಂಧ ಅನ್ನೋದು ರಾಕೆಟ್ ಸೈನ್ಸ್‌ಗಿಂತ ನಿಗೂಢ! ಹೀಗೆಂದು ವ್ಯಾಖ್ಯಾನ ಸಿಡಿಸಿ, ಅಬ್ದುಲ್ ಕಲಾಂ ನಕ್ಕಿದ್ದರು. ಸ್ನೇಹಿತನೊಬ್ಬ ಮದುವೆಯ ಪ್ರಸ್ತಾಪ ತೆಗೆದಾಗ, ಕಲಾಂ ತತ್‌ಕ್ಷಣಕ್ಕೆ ಹಾಗೆನ್ನದೇ ಬೇರೆ ದಾರಿಯೇ ಇದ್ದಿರಲಿಲ್ಲ. ಅವರಿಗಾಗ ಮೂವತ್ತು ಮೀರಿತ್ತು. ಕೆಲವರು, “ನಿಮ್ಗೆ ಮಕ್ಕಳೆಷ್ಟು?’ ಎನ್ನುವ ಮೂಲಕವೇ ಮಾತಿಗಿಳಿಯುತ್ತಿದ್ದಾಗ, ಎದೆಗೂಡಿನಲ್ಲಿ ಪೋಖ್ರಾನ್ ಸ್ಫೋಟದಂಥ ಸದ್ದಾದರೂ, ಕಲಾಂ ಮಗುವಿನಂತೆ ಮುಗುಳು ಬೀರಿ, ಮೌನ ತಾಳುತ್ತಿದ್ದರಂತೆ. ಇದನ್ನೆಲ್ಲ ಕೇಳಿಯೇ ಬಹುಶಃ ಆ ಸ್ನೇಹಿತ, ಮದುವೆಯ ಪ್ರಸ್ತಾಪ ತೆಗಿದಿದ್ದನೇನೋ. “ಸಂಸಾರವನ್ನು ಒಂದು ಕಕ್ಷೆಯಲ್ಲಿ ಮುನ್ನಡೆಸುವ ಫಾರ್ಮುಲಾ ನಂಗೆ ತಿಳಿದಿಲ್ಲ’ ಎಂದು ಆತನಿಗೆ ತಮಾಷೆಯ ಸಮಜಾಯಿಷಿ ನೀಡಿ, ಸುಮ್ಮನಾಗಿಸುತ್ತಿದ್ದರು ಕಲಾಂ.
Related Articles
ಮದುವೆ ವಯಸ್ಸು ಮೀರಿದ ಎಲ್ಲರಂತೆ, ವಾಜಪೇಯಿ ಅವರಿಗೂ ಈ ಪ್ರಶ್ನೆ ಎದುರಾಗಿತ್ತು. ಅನೇಕ ಸಂದರ್ಶನಗಳಲ್ಲಿ ಪತ್ರಕರ್ತರೇ ಹಾಗೆ ಕೇಳಿದ್ದರು. ಅದಕ್ಕೆ ಅವರು ಕಾವ್ಯಾತ್ಮಕ ಶೈಲಿಯಲ್ಲೇ ಉತ್ತರಿಸಿದ್ದು ನಿಮಗೂ ಗೊತ್ತು. “ಯಾವುದೇ ಮಹಿಳೆ ನನ್ನನ್ನು ಸೂಕ್ತ ವರ ಅಂತ ಪರಿಗಣಿಸಲಿಲ್ಲ’ ಎನ್ನುವ ಮೂಲಕ ಅವರಲ್ಲಿ ತುಂಟ ಕವಿಯೂ; “ಮದುವೆಯಾಗಲು ನನಗೆ ಪುರುಸೊತ್ತು ಇರಲಿಲ್ಲ’ ಎನ್ನುವ ಉತ್ತರದಲ್ಲಿ ಅವರು ಬ್ಯುಸಿ ರಾಜಕಾರಣಿಯಾಗಿಯೂ; “ರಾಜಕಾರಣದ ಸಾಗರಕ್ಕೆ ಧುಮುಕಿಬಿಟ್ಟು, ಈಜಿನ ಆರ್ಭಟದಲ್ಲಿ ಮದುವೆಯ ವಯಸ್ಸೇ ಮರೆತು ಹೋಯ್ತು. ಮುಂದೆ ನೋಡಿದಾಗ, ಗುರಿಯ ದಡ ಸ್ಪಷ್ಟವಿತ್ತು. ಇನ್ನು ಮದುವೆಯ ಮಾತೆಲ್ಲಿ?’ ಎಂಬ ಅವರ ಮರುಪ್ರಶ್ನೆಯಲ್ಲಿ ಏಕಲವ್ಯನೂ ಅವರೊಳಗೆ ಇಣುಕಿದ್ದ. ಅವಿವಾಹಿತ ಎಂಬ ಈ ಘಟ್ಟವನ್ನು ಅಟಲ್ ತಪಸ್ಸಿನಂತೆ ಆಚರಿಸಿದವರು. ಅವರ ಪಾಲಿಗೆ ಅದು ಸಾಧನೆಗಿರುವ ಸ್ಪಷ್ಟ ಅವಕಾಶ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಿಗೆ ದೇಶಸೇವೆಯೇ ಮುಖ್ಯವಾಗುವ ಕಾರಣ, ಮದುವೆ- ಬಂಧನಗಳಿಗೆ ಅವಕಾಶವಿಲ್ಲದ ಕಾರಣ, ಅಟಲ್ ಜೀ ಅವಿವಾಹಿತರಾಗಿಯೇ ಬದುಕನ್ನು ಮುಗಿಸಿ ಹೊರಟರು.
Advertisement
ಆ ಬ್ರಹ್ಮಚಾರಿಯೂ, ಮೊನಾಲಿಸಾಳ ನಗುವೂ…ಬ್ಯಾಚುಲರ್ ಎನ್ನುವ ಆ ಸ್ಥಿತಿ ಒಂದು ಧ್ಯಾನ. ಅದನ್ನು ಅಂದಿನ ವಿವೇಕಾನಂದರೂ ನಂಬಿದ್ದರು. ಅಟಲ್‌ಜೀ ಒಳಗೂ ಅಂಥ ಧ್ಯಾನಸ್ಥ ಋಷಿ ಅಚಲನಾಗಿ ಕುಳಿತಿದ್ದ. ಆ ಸ್ಥಿತಿಯಲ್ಲಿ ಯಾವ ಬಂಧನವೂ ಎಡತಾಕುವುದಿಲ್ಲ. ನನ್ನವರಿಗಾಗಿ ಕೂಡಿಡಬೇಕು ಎನ್ನುವ ಆಸೆಯಾಗಲೀ, ಮರಿಮಕ್ಕಳ ತನಕವೂ ಸಂಪತ್ತು ಮಾಡಿಡಬೇಕೆಂಬ ಸ್ವಾರ್ಥ, ಮಹತ್ವಾಕಾಂಕ್ಷೆಯಾಗಲೀ ಮೊಳೆಯುವುದಿಲ್ಲ. “ನನಗೇಕೆ ಮದುವೆ, ಮೊನಾಲಿಸಾಳ ನಗುವೇ ನನ್ನೊಡತಿ’ ಎಂದ ಕಲಾವಿದ ಡಾ ವಿನ್ಸಿಯಂತೆ ಅವಿವಾಹಿತನ ಸ್ಥಿತಿ ಒಂದು ಮಹತ್ ಸಾಧನೆಗೆ ಅರ್ಪಿತವಾಗಿರುತ್ತದೆ. ಶ್ರೇಷ್ಠ ಕನಸಿನ ಚುಂಗು ಹಿಡಿದು ಅವರು ಬದುಕಿನ ಯಾತ್ರೆ ಹೊರಟಿರುತ್ತಾರೆ. ಒಂದು ನೆನಪಿರಲಿ, ಎಲ್ಲ ಅವಿವಾಹಿತರಿಗೂ ಈ ತಪಸ್ಸು ಒಲಿದು ಬರುವುದಿಲ್ಲ. ಅದು ಒಲಿದವರಷ್ಟೇ, ಬದುಕಿನ ಎತ್ತರಕ್ಕೇರಿರುತ್ತಾರೆ. ಅಟಲ್‌ಜೀ ಮಾತ್ರವೇ ಅಲ್ಲ. ಬಾಳಿನಲ್ಲಿ ಒಂಟಿಯಾಗಿದ್ದು, ಅಟ್ಟಕ್ಕೇರಿದ ತಾರೆಯರು ಹಲವರು. ಅಂದಹಾಗೆ, ಅವರ್ಯಾರೂ ಸಂಗಾತಿ ಸಿಗಲಿಲ್ಲವೆಂಬ ಕಾರಣಕ್ಕೆ ಮದುವೆಯನ್ನು ದೂರ ತಳ್ಳಿದ್ದಲ್ಲ. ಅವರ ಜೀವಿತೋದ್ದೇಶವೇ ಅವರಿಗೆ ಮದುವೆಯಾಗಲು ಬಿಡಲಿಲ್ಲ. ಅಷ್ಟಕ್ಕೂ ಅವರೆಲ್ಲ ಯಾರು? ಅವರೇಕೆ ಮದುವೆಯ ಬಂಧನದಿಂದ ತಪ್ಪಿಸಿಕೊಂಡರು? ಹಾಗೊಂದು ಕುತೂಹಲದ ನೋಟ ಈ ಹೊತ್ತಿನಲ್ಲಿ ಕಾಡಿತು. ಅಬ್ದುಲ್ ಕಲಾಂ, ಮಾಜಿ ರಾಷ್ಟ್ರಪತಿ
“ಒಂದು ವೇಳೆ ನಾನು ಮದುವೆ ಆಗಿದ್ದಿದ್ದರೆ, ಈಗೇನು ಸಾಧಿಸಿದ್ದೇನೋ, ಅದರ ಅರ್ಧದಷ್ಟನ್ನೂ ಸಾಧಿಸುತ್ತಿರಲಿಲ್ಲ’ ಭಾರತೀಯರಿಗೆ ಕನಸು ಕಾಣಲು ಹೇಳಿಕೊಟ್ಟವರು ಅಬ್ದುಲ್ ಕಲಾಂ. ಈ ಚಾಣಾಕ್ಷ ಕ್ಷಿಪಣಿ ತಜ್ಞ, ಮಾಜಿ ರಾಷ್ಟಪತಿಗೂ “ನೀವೇಕೆ ಮದುವೆಯಾಗಲಿಲ್ಲ?’ ಎಂಬ ಪ್ರಶ್ನೆ ಕಾಡದೇ ಬಿಡಲಿಲ್ಲ. ಅನೇಕ ಸಲ ಪುಟಾಣಿಗಳ ಸಂವಾದದಲ್ಲೇ ಈ ಪ್ರಶ್ನೆಗೆ ಕಲಾಂ ನಸು ನಗುತ್ತ ಉತ್ತರಿಸಿದ್ದರು. “ನಿಮ್ಮಂಥ ಪುಟಾಣಿಗಳೇ ನನ್ನ ಲೈಫ್ ಪಾರ್ಟ್‌ನರ್’ ಎಂದು ತಮಾಷೆ ಮಾಡಿದ್ದರು. “ಜ್ಞಾನದ ಹುಡುಕಾಟವೇ ನನ್ನ ಮೊದಲ ಮತ್ತು ಕೊನೆಯ ಕ್ರಶ್. ಅದು ನಿರಂತರ ಕೂಡ. ನಾನು ಉಪನ್ಯಾಸದ ಕೈ ಹಿಡಿದವನು. ಅದಕ್ಕಾಗಿ ಉಪನ್ಯಾಸ ಕೊಡಲು ನಾನು ನಿಮ್ಮಲ್ಲಿಗೆ ಬಂದಿದ್ದೇನೆ’ ಎಂಬ ಅವರ ಉತ್ತರದಲ್ಲೂ ತಮಾಷೆಯೇ ಇತ್ತು. ಆದರೆ, ಇನ್ನೊಂದೆಡೆ ಸಂದರ್ಶನದಲ್ಲಿ ಕಲಾಂ, “ನನ್ನ ಬದುಕನ್ನು ಪೂರ್ತಿ ರಾಕೆಟ್ ವಿಜ್ಞಾನವನ್ನು ಅರಿಯುವುದರಲ್ಲಿಯೇ ಕಳೆದೆ. ನಾನು ಏನನ್ನೂ ಆಕ್ರಮಿಸಲಿಲ್ಲ, ಏನನ್ನೂ ಕಟ್ಟಲಿಲ್ಲ, ಕುಟುಂಬ- ಮಗ- ಮಗಳು ಯಾವುದರ ಹಂಗೂ ನನಗಿಲ್ಲ. ಅದು ಬೇಕೂ ಇಲ್ಲ’ ಎಂದು ಗಂಭೀರವಾಗಿಯೇ ಹೇಳಿದ್ದರು. ಅಷ್ಟೇ ಏಕೆ, ಅವರು ಡಿಆರ್‌ಡಿಒನಲ್ಲಿದ್ದಾಗ ಅವರ ಸಹೋದ್ಯೋಗಿಗಳು ಕಾಫಿಗೆ ಬರಿ¤àರಾ ಎಂದು ಕರೆದಿದ್ದಕ್ಕೂ, “ನೋ’ ಎನ್ನುತ್ತಿದ್ದರಂತೆ. ಯಾವುದೇ ಗಾಢ ಸಂಬಂಧ ಏರ್ಪಡುವುದು ಅವರಿಗೆ ಇಷ್ಟವಿರುತ್ತಿರಲಿಲ್ಲ. “ಒಂದು ವೇಳೆ ಮದುವೆಯಾಗಿದ್ದಿದ್ದರೆ, ನಾನು ಇದರ ಅರ್ಧದಷ್ಟನ್ನೂ ಸಾಧಿಸುತ್ತಿರಲಿಲ್ಲ’ ಎಂದಿದ್ದರು ಅವರು. ರತನ್ ಟಾಟಾ, ಉದ್ಯಮಿ
“ಯಾರೋ ಒಬ್ಬರಿಗೆ ಪತಿಯಾಗಿರುವ ಬದಲು, ಜೀವನಪರ್ಯಂತ ಉದ್ಯಮಪತಿ ಆಗುವುದೇ ಲೇಸು’ ಉದ್ಯಮಿ ರತನ್ ಟಾಟಾ ಕೂಡ ಅವಿವಾಹಿತರೇ. “ಮದುವೆಯಾಗಲು ನಾಲ್ಕು ಸಲ ನಿರ್ಧರಿಸಿದ್ದೆ. ಯಾಕೋ ಧೈರ್ಯವೇ ಬರಲಿಲ್ಲ’ ಎಂದು ತಮಗಿರುವ ಮ್ಯಾರೇಜ್ ಫೋಬಿಯಾ ಬಗ್ಗೆ ಅವರು ಸೊಗಸಾಗಿ ಹೇಳುತ್ತಾರೆ. “ಯಾರೋ ಒಬ್ಬರಿಗೆ ಪತಿಯಾಗಿರುವ ಬದಲು, ಜೀವನ ಪರ್ಯಂತ ಉದ್ಯಮಪತಿ ಆಗುವುದೇ ಲೇಸು’ ಎಂಬ ಜೀವನತತ್ವ ಇವರದು. ಕೆಲವು ವರ್ಷಗಳ ಹಿಂದೆ ಸಿಎನ್‌ಎನ್ ಚಾನೆಲ್‌ನ ಸಂದರ್ಶನದಲ್ಲಿ ಟಾಟಾ ತಮ್ಮ ಖಾಸಗಿ ಜೀವನದ ಗುಟ್ಟುಗಳನ್ನು ಹರವಿಟ್ಟರು. “ಅದು 1960ರ ಸುಮಾರು. ಭಾರತ- ಚೀನಾ ನಡುವೆ ಯುದ್ಧದ ಸಮಯ. ನಾನು ಆಗ ಅಮೆರಿಕ ಸುಂದರಿಯನ್ನು ಪ್ರೀತಿಸುತ್ತಿದ್ದೆ. ಆದರೆ, ಅವಳು ಯುದ್ಧದ ಭೀತಿಯ ಕಾರಣದಿಂದ ಭಾರತಕ್ಕೆ ಬರಲು ಸಿದ್ಧಳಿರಲಿಲ್ಲ. ಮತ್ತೆ ಮೂರು ಪ್ರಸಂಗಗಳೂ ಬೇರೆ ಬೇರೆ ಕಾರಣಕ್ಕೆ ಮುರಿದುಬಿದ್ದವು. ಈಗ ಒಮ್ಮೆ ಹಿಂತಿರುಗಿ ನೋಡಿದಾಗ, ಮದುವೆ ಆಗದಿದ್ದುದೇ ವಾಸಿ ಅಂತ ಅನ್ನಿಸುತ್ತಿದೆ. ಅಷ್ಟು ಆರಾಮಾಗಿದ್ದೇನೆ’ ಎಂದಿದ್ದರು ರತನ್. ದತ್ತಣ್ಣ, ನಟ
“ಒಬ್ಬ ಮನುಷ್ಯ ಸಿಲ್ಲಿ ಸಿಲ್ಲಿ ಕಾರಣಗಳಿಗೆ ಮದುವೆ ಆಗೋದಾದ್ರೆ, ನಂಗೆ ಅಂಥ ಮದುವೆಯೇ ಬೇಡ’ ನಿರ್ದೇಶಕ ಪಿ. ಶೇಷಾದ್ರಿ ಇತ್ತೀಚೆಗೆ ಹಿರಿಯ ನಟ ದತ್ತಣ್ಣ ಬದುಕಿನ ಕುರಿತು ಡಾಕ್ಯುಮೆಂಟರಿ ಹೊರತಂದಿದ್ದಾರೆ. ಅದರಲ್ಲಿ ದತ್ತಣ್ಣ ಏಕೆ ಬ್ರಹ್ಮಚಾರಿ ಆಗಿಯೇ ಉಳಿದರು ಅನ್ನೋದಕ್ಕೂ ಸುಳಿವಿದೆ. “ಏನು ಇವನನ್ನು ಹೀಗೆ ಬಿಟ್ಟಿಟ್ಟಿದ್ದೀರಲ್ಲ, ಮದ್ವೆ ಮಾಡುವ ಪ್ರಯತ್ನವನ್ನೇ ಮಾಡ್ಲಿಲ್ವೇ?’ ಅಂತ ಬಹಳಷ್ಟು ಜನ ದತ್ತಣ್ಣ ಅವರ ಅಣ್ಣ ಎಚ್.ಜಿ. ಸೋಮಶೇಖರರಾವ್ ಅವರನ್ನು ಕೇಳಿದ್ದರಂತೆ. “ನನ್ನ ತಾಯಿ, ದತ್ತನ ಕೈ ಹಿಡಿದು ಕೂರಿಸಿಕೊಂಡು ಕೇಳಿದ್ದಾರೆ. ನೀನು ಯಾರನ್ನಾದ್ರೂ ಪ್ರೀತಿಸಿದ್ರೆ ಹೇಳು, ಮದ್ವೆ ಮಾಡೋಣ ಅಥವಾ ನೀನು ಯಾವುದೇ ಧರ್ಮಕ್ಕೆ ಸಂಬಂಧಪಟ್ಟಂಥ ಹೆಣ್ಣನ್ನು ನೋಡ್ಕೊಂಡು ಬಾ. ನಾ ಮದ್ವೆ ಮಾಡ್ತೀನಿ ’ ಅಂತಲೂ ಹೇಳಿದ್ರು. ಅದ್ಯಾಕೆ ಅವನು ಮದ್ವೆ ಆಗ್ಲಿಲ್ವೋ ಗೊತ್ತಿಲ್ಲ’ ಎನ್ನುತ್ತಾರೆ ಎಚ್‌ಜಿಎಸ್. ಆದರೆ, ಇದಕ್ಕೆ ದತ್ತಣ್ಣ ಕೊಡುವ ಉತ್ತರವೇ ಬೇರೆ ಉಂಟು. “ನನ್ನ ಸ್ನೇಹಿತ ದೊಡ್ಡ ಮಂಡಿ ವ್ಯಾಪಾರಿ. ಅವನು ಎಂಜಿನಿಯರಿಂಗ್ ಓದಿ ಮುಗಿಸಿದ ತಕ್ಷಣವೇ ಮದುವೆಯಾದ. ನಾನು ಕೇಳಿದೆ, “ಅಲ್ಲಯ್ನಾ… ಇನ್ನೂ ಇಪ್ಪತ್ತೂಂದು ವರ್ಷ ನಿಂಗೆ. ಇಷ್ಟು ಬೇಗ ಯಾಕೆ ಮದ್ವೆಯಾದೆ?’. “ಅಯ್ಯೋ ಅದಾ… ನನ್ನ ಅಪ್ಪ- ಅಮ್ಮ ಒತ್ತಾಯ ಮಾಡಿದ್ರು’ ಅಂತ. “ಅಲ್ಲಾ, ಮದ್ವೆ ಆಗೋದಕ್ಕೆ ಅದು ಸರಿಯಾದ ಕಾರಣವಾ?’ ಅಂತ ಕೇಳಿದೆ. ಅದಕ್ಕೆ ಅವನಲ್ಲಿ ಸ್ಪಷ್ಟ ಉತ್ತರವಿರಲಿಲ್ಲ. “ಇಲ್ಲಾ, ನನ್ನ ತಾಯಿ ಕಾಯಿಲೆಯಲ್ಲಿದ್ದಾರೆ. ನೋಡ್ಕೊಳ್ಳೋದಕ್ಕೆ ಯಾರಾದ್ರೂ ಬೇಕು’ ಅಂತ ಬಾಯ್ಬಿಟ್ಟ. “ಓಹೋ… ಯಾವಾದಾದ್ರೂ ನರ್ಸ್ ಬೇಕೆಂದು ಮದ್ವೆ ಆಗಿದ್ಯಾ… ಅದರ ಬದಲು ನರ್ಸನ್ನು ಇಟ್ಕೊàಬಹುದಿತ್ತಲ್ವಾ?’ ಅಂತ ಕೇಳಿದೆ. “ಇಲ್ಲಾ… ಮನೇಲಿ ಸಿಕ್ಕಾಪಟ್ಟೆ ಪ್ರಶರು’ ಅಂದ. “ಬೇರೆಯವರ ಪ್ರಶರ್‌ಗೊàಸ್ಕರ ನೀನು ಮದ್ವೆ ಆದ್ಯಾ?’ ಅಂತ ಮತ್ತೆ ಅವನಿಗೆ ಪ್ರಶ್ನೆಯಿಂದ ತಿವಿದೆ. ಅದಕ್ಕೆ ಅವನಲ್ಲಿ ಉತ್ತರವಿರಲಿಲ್ಲ, ಮುಖದಲ್ಲಿ ಬರೀ ನಾಚಿಕೆಯಂಥ ಭಾವಾಭಿನಯವಿತ್ತು. ಇದನ್ನೆಲ್ಲ ನೋಡೀ ನೋಡಿ, ಈ ಕಾರಣಗಳಿಗೆ ಒಬ್ಬ ಮನುಷ್ಯ ಮದ್ವೆ ಆಗೋದಿದ್ರೆ ನಂಗೆ ಮದ್ವೆನೇ ಬೇಡ ಎಂದು ತೀರ್ಮಾನಿಸಿದೆ’. ಕೀರ್ತಿ