ವಿಜಯಪುರ: ಮಾನವ ಸಂಪನ್ಮೂಲ ಮಂತ್ರಾಲಯದ ನೇತೃತ್ವದಲ್ಲಿ ದೇಶದ ಭವ್ಯತೆ ಪರಿಚಯಿಸುವ ದೃಷ್ಟಿಯಿಂದ ಸಂಘಟಿಸಿರುವ ಏಕ ಭಾರತ ಶ್ರೇಷ್ಠ ಭಾರತ ಎಂಬ ಅಭಿಯಾನ ದೇಶದ ವಿವಿಧ ಕಡೆಗಳಲ್ಲಿ ವೈಭವದಿಂದ ನಡೆದಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಘಟಿಸುವ ಅವಕಾಶ ವಿಜಯಪುರ ಸೈನಿಕ ಶಾಲೆಗೆ ಬಂದಿದೆ. ಜ.29ರಿಂದ ಮೂರು ದಿನಗಳ ಕಾಲ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಲಿವೆ.
ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸೈನಿಕ ಶಾಲೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿವೆ. ಮೂರು ದಿನಗಳ ಕಾರ್ಯಕ್ರಮಕ್ಕೆ ದೇಶದ ವಿವಿಧ ಭಾಗಗಳಿಂದ ಹಿರಿಯ ಸೈನ್ಯಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಅಖೀಲ ಭಾರತ ಸೈನಿಕ ಶಾಲೆಗಳು ಸಂಘಟಿಸುತ್ತಿರುವ ಈ ಏಕ ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದಲ್ಲಿ ಭಾರತ ಸಂಸ್ಕೃತಿಯ ವೈಭವವನ್ನು ತಿಳಿಪಡಿಸುವ, ಭಾವೈಕ್ಯತೆಯನ್ನು ಪ್ರಸಾರಪಡಿಸುವ ಮಹತ್ವದ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಘಟಿಸುವ ಅವಕಾಶ ವಿಜಯಪುರ ಸೈನಿಕ ಶಾಲೆಗೆ ದೊರೆತಿದೆ.
ಒಂದು ರಾಜ್ಯದ ಸೈನಿಕ ಶಾಲೆಯ ವಿದ್ಯಾರ್ಥಿಗಳು ದೇಶದ ಇನ್ನೊಂದು ರಾಜ್ಯದ ಸಂಸ್ಕೃತಿ ಅರ್ಥೈಸಿಕೊಂಡು ಜೀವನ ನಿರ್ವಹಿಸಲು ತಿಳಿವಳಿಕೆ ನೀಡುವುದು ಕಾರ್ಯಕ್ರಮದ ಮೂಲ ಉದ್ದೇಶ. ಉತ್ಸವದ ಯಶಸ್ಸಿಗಾಗಿ ಸೈನಿಕ ಶಾಲೆ ಸಂಕಲ್ಪ ಮಾಡಿದೆ. ಅರ್ಥಪೂರ್ಣವಾಗಿ ಸಮಾರಂಭ ಸಂಘಟಿಸುವ ಉದ್ದೇಶದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಸೈನಿಕ ಶಾಲೆಯ ಉಪಪ್ರಾಚಾರ್ಯರು ಮಾಹಿತಿ ನೀಡಿದರು. ದೇಶದ ವಿವಿಧ ಭಾಗಗಳಿಂದ ನೂರಾರು ಸೈನಿಕ ಶಾಲೆಯ ಕೆಡೆಟ್‌ಗಳು ಆಗಮಿಸಿ ತಮ್ಮ ರಾಜ್ಯದ ಸಂಸ್ಕೃತಿ, ಭಾಷೆಯ ವೈಭವವನ್ನು ಹಂಚಿಕೊಳ್ಳಲಿದ್ದಾರೆ.
ಜ.29ರಂದು ಬೆಳಗ್ಗೆ 8.45ಕ್ಕೆ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು, ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮಿಗಳು ಆಶೀವರ್ಚನ ನೀಡಲಿದ್ದಾರೆ. ನವದೆಹಲಿಯ ಕೇಂದ್ರ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು, ಸೈನಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಸಹ ಜರುಗಲಿವೆ ಎಂದು ಸೈನಿಕ ಶಾಲೆಯ ಪ್ರಕಟಣೆ ತಿಳಿಸಿದೆ.