Advertisement

ಕುಂಟುತ್ತಿದೆ ಒಂಟಿ ಮನೆ ಯೋಜನೆ

12:12 AM Feb 11, 2020 | Lakshmi GovindaRaj |

ಬೆಂಗಳೂರು: ಬಡವರು ಹಾಗೂ ಹಿಂದುಳಿದ ವರ್ಗ ದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಪಾಲಿಕೆ ಅನುಷ್ಠಾನ ಮಾಡಿರುವ “ಒಂಟಿ ಮನೆ’ ಯೋಜನೆ ಕಳೆದ ಏಳು ವರ್ಷಗಳಲ್ಲಿ ಕೇವಲ ಶೇ.38 ಪ್ರಗತಿ ಸಾಧಿಸಿದೆ. ಅಷ್ಟೇ ಅಲ್ಲದೆ ಪಾಲಿಕೆಯ ಕೆಲವು ವಲಯಗಳು ಈ ಯೋಜನೆಯಡಿ ಶೂನ್ಯ ಪ್ರಗತಿ ಸಾಧಿಸಿದ್ದು ದಶಕದ ಹಿಂದೆ ರೂಪಿಸಲಾಗಿದ್ದ ಯೋಜನೆ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ.

Advertisement

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕವಾಗಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ “ಒಂಟಿ ಮನೆ’ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪಾಲಿಕೆ ಐದು ಲಕ್ಷ ರೂ. ಸಹಾಯಧನ ನೀಡುತ್ತಿದೆ. 2013 -14ನೇ ಸಾಲಿನಿಂದ 2018-2019ರ ಡಿಸೆಂಬರ್‌ವರೆಗೆ ಒಟ್ಟು 17,610 ಮನೆಗಳಿಗೆ ಈ ಯೋಜನೆಯಡಿ ಪಾಲಿಕೆ ಆರ್ಥಿಕ ಸಹಾಯ ಮಾಡಿದ್ದು, ಇದರಲ್ಲಿ 6,830 ಮನೆಗಳು ಮಾತ್ರ ಪೂರ್ಣಗೊಂಡಿದ್ದು, ಒಟ್ಟು 668 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಆದರೆ, ಪ್ರತಿ ಕೌನ್ಸಿಲ್‌ ಸಭೆಯಲ್ಲೂ ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಈ ಯೋಜನೆಯಲ್ಲಿ ಲೋಪವಾಗುತ್ತಿದೆ ಎಂದು ದನಿ ಎತ್ತುತ್ತಲೇ ಇದ್ದಾರೆ. ಯೋಜನೆಯಲ್ಲಿ ಪಾರದರ್ಶಕತೆ ತರುವು ಹಾಗೂ ಸರಳೀಕರಣ ಮಾಡುವ ಕೆಲಸವಾಗಿಲ್ಲ. ಈ ವರ್ಷ ಜುಲೈನಲ್ಲಿ ಒಂಟಿ ಮನೆ ಯೋಜನೆಯ ಫ‌ಲಾನುಭವಿಗಳ ಅರ್ಜಿಗಳನ್ನು ನೇರವಾಗಿ ವಾರ್ಡ್‌ ಎಂಜಿನಿಯರ್‌ ಅಥವಾ ಸಹಾಯಕ ಎಂಜಿನಿಯರ್‌ ಹಂತದಲ್ಲೇ ಕಡತಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಈ ಸೂಚನೆ ನೀಡಿದ ನಂತರ ಈಗ ಯಾವ ವಲಯದಲ್ಲಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎನ್ನುವ ವಿವರ ಲಭ್ಯವಾಗುತ್ತಿಲ್ಲ ಎನ್ನುತ್ತಾರೆ ಕಲ್ಯಾಣವಿಭಾಗದ ಅಧಿಕಾರಿಗಳು.

ವಾರ್ಡ್‌ ಸಮಿತಿ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಯೋಜನೆಗೆ ಮೀಸಲಿಟ್ಟಿರುವ ಅನುದಾನದಲ್ಲೇ ಒಂಟಿ ಮನೆ ಯೋಜನೆಗೂ ಬಳಸಿಕೊಳ್ಳುವಂತೆಯೂ ಸೂಚಿಸಲಾಗಿತ್ತು. ಪಾಲಿಕೆ ಅಧಿಕಾರಿಯೊಬ್ಬರು ಹೇಳು ವಂತೆ “ಈ ಯೋಜನೆಯ ಮೂಲ ಹಂತದಲ್ಲಿ (ಅಧಿಕಾರಿ ಗಳ ವಲಯದಲ್ಲಿ) ಏನಾಗುತ್ತಿದೆ ಎನ್ನುವ ವಿವರವೇ ಲಭ್ಯವಾಗುತ್ತಿಲ್ಲ.ಯೋಜನೆ ಅರ್ಹರನ್ನು ತಲುಪುತ್ತಿದೆಯೇ ಎನ್ನುವುದೂ ಸ್ಪಷ್ಟವಾಗುತ್ತಿಲ್ಲ. 2015-16ರಲ್ಲಿ ಅನುಮೋದ ನೆಯಾದ ಅರ್ಜಿಗಳಿಗೆ ಈಗ ಜಾಬ್‌ ಕೋಡ್‌ ನೀಡಲಾಗು ತ್ತಿದೆ. ಇದನ್ನು ಪರಿಶೀಲಿಸುವ ಕೆಲಸವಾಗುತ್ತಿಲ್ಲ’ ಎಂದರು.

ಒಂದು ಯೋಜನೆ ಹಲವು ಬದಲಾವಣೆ: 2016-17ನಲ್ಲಿ ಪ್ರತಿ ವಾರ್ಡ್‌ಗೆ ಒಟ್ಟು 40 ಮನೆ ನಿಗದಿ ಮಾಡಲಾಗಿತ್ತು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 30 ಮನೆ, ಹಿಂದುಳಿದವರಿಗೆ 15 ಮನೆಗಳಿಗೆ ಈ ಯೋಜನೆಯಡಿ ಅನುದಾನ ನೀಡಲಾಗುತ್ತಿತ್ತು. 2018-19ರಲ್ಲಿ ಸಮಿತಿ ನಿರ್ಣಯದ ಮೇಲೆ ಈ ಯೋಜನೆಗೆ ಅನುಮೋದನೆ ನೀಡಲಾಗುತ್ತಿತ್ತು. ಎಲ್ಲ ವಾರ್ಡ್‌ಗಳಿಗೂ ಯೋಜನೆ ಸೌಲಭ್ಯ ಸಿಗುತ್ತಿಲ್ಲ ಎಂದು 2018-19ರಲ್ಲಿ ಪ್ರತಿ ವಾರ್ಡ್‌ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ತಲಾ 5 ಮನೆ ನಿಗದಿ ಮಾಡಲಾಗಿದೆ.

Advertisement

ಮಹದೇವಪುರ ಶೂನ್ಯ ಸಾಧನೆ: ಒಂಟಿ ಮನೆ ಯೋಜನೆ ಘೋಷಣೆಯಾದಗಿಂದಲೂ ಮಹದೇವಪುರದಲ್ಲಿ ಒಂದೇ ಒಂದು ಮನೆಯೂ ಪೂರ್ಣಗೊಂಡಿಲ್ಲ! ಈ ಯೋಜನೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ವಲಯ ಗಳಲ್ಲಿ ಮಹದೇವಪುರ ವಲಯ ಮುಂಚೂಣಿ ಸಾಲಿನಲ್ಲಿದೆ. ಮಹದೇವಪುರದ ನಂತರ ಬೊಮ್ಮನಹಳ್ಳಿ ಹಾಗೂ ದಾಸರಹಳ್ಳಿ ವಲಯಗಳು ಈ ಯೋಜನೆಯಲ್ಲಿ ಹಿಂದುಳಿದಿವೆ.

ಬೊಮ್ಮನಹಳ್ಳಿಯಲ್ಲಿ 2015-19ರವರೆಗೆ ಹಾಗೂ ದಾಸರಹಳ್ಳಿಯಲ್ಲಿ 2014-17ರವರೆಗೆ ಒಂದೇ ಒಂದು ಒಂಟಿ ಮನೆ ನಿರ್ಮಾಣವಾಗಿಲ. ಇನ್ನು ಯಲಹಂಕದಲ್ಲಿ 2013-14ರಲ್ಲಿ ಹಾಗೂ 2018-19ರಲ್ಲಿ ಸೊನ್ನೆ ಪ್ರಗತಿಯಾಗಿದ್ದು, ಪಶ್ಚಿಮ ವಲಯದಲ್ಲಿ 2017-19ರಲ್ಲಿ ಈ ಯೋಜ ನೆಯಡಿ ಒಂದು ಮನೆಯೂ ನಿರ್ಮಾಣವಾಗಿಲ್ಲ. ಉಳಿದಂತೆ ದಕ್ಷಿಣ ವಲಯದಲ್ಲಿ 2015-17ರ ನಡುವೆ, ರಾಜರಾಜೇಶ್ವರಿ ನಗರದಲ್ಲಿ 2016-17 ಹಾಗೂ 2018-19ರಲ್ಲಿ ಶೂನ್ಯ ಸಾಧನೆಯಾಗಿದೆ.

2013-14ರಿಂದ 2018-19ನೇ ಸಾಲಿನ ವರೆಗೆ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮಂಜೂರಾದ ಹಾಗೂ ಪೂರ್ಣಗೊಂಡ ಮನೆಗಳ ವಿವರ ಈ ರೀತಿ ಇದೆ.
ಒಂಟಿ ಮನೆಗಳ ವಿವರ
ವಲಯ ಮಂಜೂರಾದ ಮನೆ ಪೂರ್ಣಗೊಂಡಿರುವುದು
ದಕ್ಷಿಣ 707 139
ಆರ್‌.ಆರ್‌.ನಗರ 1279 18
ದಾಸರಹಳ್ಳಿ 1745 664
ಬೊಮ್ಮನಹಳ್ಳಿ 830 344
ಪೂರ್ವ 7698 4490
ಯಲಹಂಕ 1049 210
ಮಹದೇವಪುರ 605 0
ಪಶ್ಚಿಮ 3697 965
ಒಟ್ಟು 17,610 6,830

ಒಂಟಿ ಮನೆಗೆ ಸಬ್ಸಿಡಿ
ವರ್ಷ ಸಬ್ಸಿಡಿ
2015-16 3 ಲಕ್ಷರೂ.
2016-17 4 ಲಕ್ಷ ರೂ.
2018-19 5 ಲಕ್ಷರೂ.

ವಲಯ ಮಟ್ಟದ ಎಂಜಿನಿಯರ್‌ಗಳೇ ಈ ಯೋಜನೆಗೆ ಅನುಮೋದನೆ ನೀಡುತ್ತಿದ್ದಾರೆ. ಈಗಾಗಲೇ ಪೂರ್ಣಗೊಂಡಿರುವ ಮನೆಗಳಿಗೆ ಸೋಲಾರ್‌ ಅಳವಡಿಸುವಂತೆಯೂ ಸೂಚನೆ ನೀಡಲಾಗಿದೆ. ಯೋಜನೆ ಪ್ರಗತಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಶೀಘ್ರ ಮುಗಿಯುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.
-ಸೋಮಪ್ಪ ಕಡಕೋಳ, (ಕಲ್ಯಾಣ ವಿಭಾಗ) ಹೆಚ್ಚುವರಿ ಆಯುಕ್ತ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next