ಮುನವಳ್ಳಿ: ಪಟ್ಟಣದ ಜೈಂಟ್ಸ್ ಗ್ರೂಪ್ ಆಫ್ ರಾಣಿ ಚನ್ನಮ್ಮ ಸಹೇಲಿ ಹಾಗೂ ರೈತ ಮುಖಂಡರಾದ ಪಂಚನಗೌಡ ದ್ಯಾಮನಗೌಡರ ಪ್ರಾಯೋಜಕತ್ವದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರೈತ ಮಹಿಳಾ ಸಮಾವೇಶ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ವಿಭೂಷಿತ, ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತರು ಒಂದೇ ಬೆಳೆ ಬೆಳೆಯದೇ ಋತುಮಾನಕ್ಕೆ ತಕ್ಕಂತೆ ಮಿಶ್ರ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿ ಪ್ರಗತಿ ಸಾ ಧಿಸಬಹುದು. ಕೃಷಿಯನ್ನು ಉದ್ದಿಮೆಯನ್ನಾಗಿ ಮಾಡಲು ಮಿಶ್ರ ಬೆಳೆ ಅವಶ್ಯ. ಒಂದೇ ಬೆಳೆ ಬೆಳೆಯುವುದು ಮಾರಕ, ಮಿಶ್ರ ಬೆಳೆ ಪೂರಕ ಎನ್ನುವ ಮಾತನ್ನು ಎಲ್ಲ ರೈತರು ನೆನಪಿನಲ್ಲಿಡಬೇಕು ಎಂದು ಸಲಹೆ ನೀಡಿದರು.
ರೈತರು ಸ್ವಾಭಿಮಾನದಿಂದ ಬದುಕಬೇಕು. ರೈತ ಬೆಳೆದ ಬೆಳೆಗೆ ದರ ನಿಗದಿ ಮಾಡುವ ಅಧಿಕಾರ ಹಾಗೂ ಹಕ್ಕನ್ನು ಸರಕಾರವೂ ಕೊಟ್ಟಿಲ್ಲ. ಸಮಾಜವೂ ಕೊಟ್ಟಿಲ್ಲ. ಹೀಗಾಗಿ ರೈತರ ಪರಿಸ್ಥಿತಿ ಶೋಚನೀಯವಾಗುತ್ತಿದೆ. ರೈತರು ಪರಿಸ್ಥಿತಿಗೆ ವಿರುದ್ಧವಾಗಿ ಹೋಗುವುದಕ್ಕಿಂತ ಪೂರಕವಾಗಿ ಹೋದರೆ ಅಭಿವೃದ್ಧಿ ಸಾಧಿಸಬಹುದು. ಶ್ರೀಗಂಧ ಬೆಳೆದು ರೈತರು ಕೂಡ ಕೋಟಿ ಹಣದ ಲೆಕ್ಕದಲ್ಲಿ ಮಾತನಾಡುವಂತಾಗಬೇಕು. ಕೃಷಿಯ ಜೊತೆಗೆ ಕೃಷಿಯಾಧಾರಿತ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ ಮೊದಲಾದವುಗಳನ್ನು ಕೂಡ ರೈತರು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಕೃಷಿ ಪ್ರಧಾನವಾದ ದೇಶದಲ್ಲಿ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ, ಉಚಿತ ಬೀಜ, ಗೊಬ್ಬರ ವಿತರಿಸುವ ಕಾರ್ಯ ನಡೆಯಬೇಕು. ಅಂದಾಗ ರೈತರಿಗೆ ನಾವು ಗೌರವ ಕೊಟ್ಟಂತಾಗುತ್ತದೆ. ರೈತನನ್ನು ದೇಶದ ಬೆನ್ನೆಲುಬು ಅನ್ನುತ್ತೇವೆ, ನಿಜವಾಗಿಯೂ ಅವನು ದೇಶದ ಉಸಿರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೈಂಟ್ಸ್ ಗ್ರೂಪ್ ಆಫ್ ರಾಣಿ ಚನ್ನಮ್ಮ ಸಹೇಲಿ ಅಧ್ಯಕ್ಷೆ ಜ್ಯೋತಿ ಚನ್ನಪ್ಪ ಯಲಬುರ್ಗಿ ಮಾತನಾಡಿ, ರೈತರು ಬೆಳೆಗಳನ್ನು ಬೀದಿಯಲ್ಲಿಟ್ಟು ವ್ಯಾಪಾರ ಮಾಡುತ್ತಾರೆ. ಅದೇ ಸಂಸ್ಕರಿಸಿದ ವಸ್ತುಗಳಿದ್ದರೆ ಅವುಗಳನ್ನು ಎಸಿ ರೂಮ್ ನಲ್ಲಿಟ್ಟು ಮಾರಾಟ ಮಾಡುವುದು ವಿಪರ್ಯಾಸ ಸಂಗತಿ ಎಂದರು. ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾರದಾ ಪಂಚನಗೌಡ ದ್ಯಾಮನಗೌಡರ, ಜೈಂಟ್ಸ್ ಗ್ರೂಪ್ ಅಧ್ಯಕ್ಷ ಬಿ.ಎಂ. ಅಂಗಡಿ, ತೋಟಗಾರಿಕ ಇಲಾಖೆ ಅಧಿಕಾರಿ ಎಸ್.ಎ.ಸಿದ್ದಣ್ಣವರ, ಕೃಷಿ ಅ ಧಿಕಾರಿ ಎಸ್. ಎಲ್.ದೇಸಾಯಿ ಮಾತನಾಡಿದರು.
ಚನ್ನಪ್ಪ ಯಲಬುರ್ಗಿ, ಶಿವಲಿಂಗಯ್ಯ ಹಿರೇಮಠ, ಅನ್ನಪೂರ್ಣ ಲಂಬೂನವರ, ರಾಜೇಶ್ವರಿ ಬಾಳಿ, ಸುಮಾ ಯಲಿಗಾರ, ಸವಿತಾ ಹಂಜಿ, ಅನುರಾಧಾ ಬೆಟಗೇರಿ, ಸವಿತಾ ಬಾಳಿ, ಗೌರಿ ಜಾವೂರ, ಪದ್ಮಾವತಿ ಪಾಟೀಲ, ರಾಧಾ ಕುಲಕರ್ಣಿ, ವಿಜಯಲಕ್ಷ್ಮೀ ಶೀಲವಂತ, ನಿರ್ಮಲಾ ಗದ್ವಾಲ, ಎಂ.ಜಿ. ಹೊಸಮಠ, ಕೃಷ್ಣಾಬಾಯಿ ನಲಗೆ ಇದ್ದರು. ಜ್ಯೋತ್ಸಾ ರೇಣಕೆ ಸ್ವಾಗತಿಸಿದರು. ಬಿ.ಎಚ್. ಖೊಂದುನಾಯ್ಕ, ಬಾಳು ಹೊಸಮನಿ ನಿರೂಪಿಸಿದರು. ಶಾಲಾ ಮಕ್ಕಳಿಂದ ರೈತನೃತ್ಯ ಪ್ರದರ್ಶನ, ಯೋಗ ಪ್ರದರ್ಶನ ಜರುಗಿತು.