Advertisement
ಎಲ್ಲವೂ ನೆನಪಿನಂಗಳದಿಂದಲೇ ಪುಟಿ ಪುಟಿದು ಬರುತ್ತವೆ.. ಒಂದರ ಮೇಲೊಂದು ಹಾಡು..!! ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮರತೂರಿನ ತಾರಾಬಾಯಿ ದೊಡ್ಡಿ ಮುಂದೆ ಕುಂತರೆ ಅದೊಂಥರ ಎಫ್ ಎಂ ರೇಡಿಯೋ ಪಕ್ಕದಲ್ಲಿ ಇದ್ದಂಗೆ. ಈ ನಿಟ್ಟಿನಲ್ಲಿ ಬಳ್ಳಾರಿಯ ನಾಡೋಜ ದರೋಜಿ ಈರಮ್ಮ ಕೂಡ ನೆನಪಾಗಬಹುದು. ಈರಮ್ಮ ಅವರು ಸಾವಿರ ಹಾಡುಗಳನ್ನು ನೆನಪಿನಲ್ಲಿ ಇಟ್ಟು ಕೊಂಡು ಹಾಡುತ್ತಿದ್ದರು.
Related Articles
Advertisement
ಒಂದು ತಲೆಮಾರಿನ ಸಾಂಸ್ಕೃತಿಕ ಲೋಕವನ್ನು ಮತ್ತೂಂದು ತಲೆಮಾರಿಗೆ ನೀಡುತ್ತಿರುವ ಸಂಗೀತ ವಂಶಸ್ಥೆ ಎಂದರೆ ತಪ್ಪಾಗಲಾರದು. ಸಂಗೀತಕ್ಕೆ ಜಾತಿ ಇಲ್ಲ ಎನ್ನುವುದನ್ನು ತಾರಾಬಾಯಿ ಸಾಬೀತು ಮಾಡಿದ್ದಾರೆ. ದಲಿತ ಕುಟುಂಬದಿಂದ ಬಂದಿದ್ದೇನೆ. ಅದಕ್ಕಾಗಿ ಸರಕಾರ ತಮ್ಮನ್ನು ಹಾಗೂ ತಮ್ಮ ಸಾಧನೆಯನ್ನು ಗಮನಿಸುತ್ತಿಲ್ಲ ಎನ್ನುವ ನೋವಿನ ಮಧ್ಯದಲ್ಲೂ ತನ್ನ ಸಂಗೀತದಿಂದ ಸಮಾಜದ ಸಂತೋಷ ಹೆಚ್ಚಿಸುತ್ತಿದ್ದಾರೆ.
ಜಾಗೃತಿಗಾಗಿ ಹಾಡು..: ಅಕ್ಷರ ಪರಿಚಯ ಇಲ್ಲದಿದ್ದರೂ ಸಾಕ್ಷರತೆ ಪ್ರಚಾರಕ್ಕೆ ಜನಪದ ದಾಟಿಯಲ್ಲಿ ಹಾಡುಗಳನ್ನು ಬರೆದಿದ್ದಾರೆ. ಅಕ್ಷರ ಕಲಿರಣ್ಣಾ..ಅಕ್ಷರ ಹಾಡು ಸಾಕ್ಷರತೆಯ ಪ್ರಚಾರದ ಪ್ರಮುಖ ಹಾಡಾಗಿದೆ. ಮೂಢನಂಬಿಕೆ, ದೇವದಾಸಿ ಪದ್ಧತಿ ಹಾಗೂ ಇತರೆ ಅನಿಷ್ಟ ಪದ್ಧತಿಗಳ ಜಾಗೃತಿಗಾಗಿ ಹಾಡುಗಳನ್ನು ಬರೆದು ಹಾಡಿದ್ದಾರೆ. ಆಕಾಶವಾಣಿ, ದೂರದರ್ಶನ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲೂ ಹಾಡಿದ್ದಾರೆ.
ತುಂಬು ಕುಟುಂಬದ ಅಜ್ಜಿ!: ತಾರಾಬಾಯಿಯ ಪತಿ ಶಿವಶರಣಪ್ಪ ದೊಡ್ಡಿ ಕಲಾವಿದರು. ಈಗ ಅವರಿಲ್ಲ.. ಆದರೆ, ಎರಡು ಗಂಡು, ಒಂದು ಹೆಣ್ಣು ಮಕ್ಕಳಲ್ಲದೆ 13ಜನ ಮೊಮ್ಮಕ್ಕಳಿರುವ ತುಂಬು ಕುಟುಂಬದ ಅಜ್ಜಿ. ಮೊಮ್ಮಕ್ಕಳಲ್ಲೂ ಕಲಾ ಆಸಕ್ತಿ ಇದೆಯಂತೆ.. ಆದರೆ, ಇನ್ನೂ ಯಾರೂ ಅಜ್ಜಿಯ ಹಾದಿ ಹಿಡಿದಿಲ್ಲ. ಶಾಲೆಗೆ ಹೋಗುತ್ತಿದ್ದಾರೆ. ಆದರೆ, ಮಗ ಮಲ್ಲಿಕಾರ್ಜುನ ದೊಡ್ಡಿ ಹೇಳುವುದೆ ಬೇರೆ..
“ಅಲ್ರೀ.. ನಮ್ಮ ತಾಯಿ ಜನಪದ ಲೋಕದ ಸಾಧಕಿ. ಸಾವಿರಾರು ಹಾಡುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಹಾಡುತ್ತಾರೆ. ಹಲವಾರು ಹಾಡುಗಳನ್ನು ತಾವೇ ರಚನೆ ಮಾಡಿದ್ದಾರೆ. ಯಾರಿಗೂ ನನ್ನವ್ವ ನೆನಪಾಗಲಿಲ್ಲವೇ? ಆಕೆಯ ಸಾಧನೆ ಇವರಿಗೆ ತೃಪ್ತಿ ತಂದಿಲ್ಲವೇ.. ಅಂತ ಬೇಜಾರು ಮಾಡಿಕೊಳ್ಳುತ್ತಾರೆ.
ಕೋಶ ಓದದೆ ದೇಶ ಸುತ್ತಿದೆ..: “ಕೋಶ ಓದು. ದೇಶ ಸುತ್ತು ‘ ಎನ್ನುವ ಮಾತನ್ನು ಉಲ್ಟಾ ಮಾಡಿರುವ ತಾರಾಬಾಯಿ ದೊಡ್ಡಿ ಕೋಶ ಓದದೆಯೇ. ದೇಶವನ್ನು ಸುತ್ತಿದ್ದಾರೆ. ಪುಣೆ, ದೆಹಲಿ, ಬೆಂಗಳೂರು, ಮುಂಬಯಿ ಎಲ್ಲಡೆಗಳಲ್ಲಿ ಓಡಾಡಿದ್ದಾರೆ. ಹಾಡು ಹಾಡಿದ್ದಾರೆ. ಸಭೀಕರನ್ನು ತಮ್ಮ ದನಿಯ ಆಲಾಪದಲ್ಲಿ ತೇಲಿಸಿದ್ದಾರೆ. ಇಂತಹ ಸಾಧಕಿ 60 ದಾಟಿದರೂ ಇನ್ನೂ ಮಾಶಾಸನ ದೊರೆಯುತ್ತಿಲ್ಲ ಎನ್ನುವ ನೋವು ತಾರಾಬಾು ಅವರನ್ನು ಕಾಡಿದೆ…
ಎನ್.. ಮಾಡೋದ್ರಿ… ಜೀವನ ಕವಲುದಾರಿ. ನಡೆದುಕೊಂಡು. ತೆವಳಿಕೊಂಡು. ಕಷ್ಟ ಕೂಟಲೇ ಸಹಿಸಿಕೊಂಡು ಹಾಡನ್ನೇ ದುಡಿವ ಶಕ್ತಿಯನ್ನಾಗಿಸಿಕೊಂಡು 60 ದಾಟಿದ್ದೇನೆ. ಇನ್ನೆಷ್ಟು ದಿನವೋ ಆ ದೇವರು ಹಾಡಿಸುತ್ತಾನೋ ಹಾಡಿಸಲಿ.. ಎನ್ನುತ್ತಾ ತಾರಾಬಾಯಿ ಭಾವುಕರಾಗುತ್ತಾರೆ. ಇಂತಹ ಒಬ್ಬ ಸಾಧಕಿಗೆ ಸಿಗಬೇಕಾಗಿರುವ ಸಾಮಾಜಿಕ, ಸರಕಾರಿ ಗೌರವಗಳು ಸಿಗಬೇಕಲ್ಲವೆ..?
* ಸೂರ್ಯಕಾಂತ ಎಂ.ಜಮಾದಾರ