ಬೆಂಗಳೂರು: ಹಿನ್ನೆಲೆ ಗಾಯಕಿ ಸುಶ್ಮಿತಾ (26) ಆತ್ಮಹತ್ಯೆ ಪ್ರಕರಣದ ಆರೋಪಿ ಆಕೆಯ ಪತಿ ಶರತ್‌ಕುಮಾರ್ ಸೇರಿ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಮಧ್ಯೆ ಮಗಳ ಸಾವಿಗೆ ಕಾರಣವಾದವರನ್ನು ಬಂಧಿಸುವ ತನಕ ತಿಥಿ ಕಾರ್ಯ ಮಾಡುವುದಿಲ್ಲ ಎಂದು ಸುಶ್ಮಿತಾ ತಾಯಿ ಮೀನಾಕ್ಷಿ ಕಣ್ಣೀರು ಹಾಕಿ ನೋವು ತೋಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
“ಕೂಲಿನಾಲಿ ಮಾಡಿ, ಕಷ್ಟಪಟ್ಟು ಮಗಳನ್ನು ಬೆಳೆಸಿದ್ದೆ. ದೊಡ್ಡ ಗಾಯಕಿಯಾಗಿ ಆಕೆಯನ್ನು ರಾಷ್ಟ್ರಮಟ್ಟದಲ್ಲಿ ನೋಡುತ್ತೇನೆ ಅಂದುಕೊಂಡಿದ್ದೆ. ಆದರೆ, ಮನೆಗೆ ಬಂದು ಈ ರೀತಿ ಮಾಡಿಕೊಳ್ಳುತ್ತಾಳೆ ಅಂದುಕೊಂಡಿರಲಿಲ್ಲ. ಸಾಯುವ ಮೊದಲು ಮಮ್ಮಿ ಮಿಸ್ ಯೂ ಎಂದಿದ್ದಾಳೆ. ಅವಳಿಗೆ ನ್ಯಾಯ ಸಿಗಬೇಕು, ನನಗೆ ಜವಾಬ್ದಾರಿ ವಹಿಸಿದ್ದಾಳೆ.
ನೀವೆಲ್ಲರೂ ಸೇರಿ ನನ್ನ ಮಗಳಿಗೆ ನ್ಯಾಯ ಕೊಡಿಸಬೇಕು. ಮಗಳ ಸಾವಿಗೆ ಕಾರಣರಾದವರನ್ನು ಬಂಧಿಸುವವರೆಗೂ ಅವಳ ಸಮಾಧಿಗೆ ಹಾಲು-ತುಪ್ಪ ಬಿಡುವುದಿಲ್ಲ’ ಎಂದು ಮೀನಾಕ್ಷಿ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ.
ನನ್ನ ಸಾವಿಗೆ ಪತಿ ಹಾಗೂ ಆತನ ದೊಡ್ಡಮ್ಮ ಕಾರಣ’ ಎಂದು ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಹಿನ್ನೆಲೆ ಗಾಯಕಿ ಸುಶ್ಮಿತಾ ಫೆ.17ರಂದು ನಾಗರಭಾವಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಿರುಕುಳ ನೀಡಿದವರನ್ನು ಸುಮ್ಮನೇ ಬಿಡಬೇಡ ಇಲ್ಲದಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ತಮ್ಮ ತಾಯಿಗೆ ಮರಣ ಸಂದೇಶದಲ್ಲಿ ಕೋರಿದ್ದರು.
ಸುಶ್ಮಿತಾ ಆತ್ಮಹತ್ಯೆ ಕೇಸ್ ತನಿಖೆ ನಡೆಯುತ್ತಿದ್ದು ಆರೋಪಿಗಳಾದ ಶರತ್‌ಕುಮಾರ್, ಗೀತಾ ಸೇರಿ ಇತರ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಅವರು ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದಾರೆ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತಿಳಿಸಿದರು.