ಚೆನ್ನೈ:ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ(74ವರ್ಷ) ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ವರದಿ ತಿಳಿಸಿದೆ. ಈ ಬಗ್ಗೆ ಸ್ವತಃ ಎಸ್ ಪಿಬಿ ಅವರು ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋವನ್ನು ಶೇರ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.
16ಕ್ಕೂ ಅಧಿಕ ಭಾಷೆಯಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ, ತನಗೆ ಕೋವಿಡ್ 19 ಸೋಂಕಿನ ಸಣ್ಣ ಪ್ರಮಾಣದ ಲಕ್ಷಣ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಾನು ಸ್ವಯಂ ಆಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಯಾಕೆಂದರೆ ಕುಟುಂಬದ ಇತರ ಸದಸ್ಯರಿಗೆ ಸಮಸ್ಯೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಎದೆ ಹಿಡಿದುಕೊಳ್ಳುವುದು, ಕಫ, ಶೀತ ಹಾಗೂ ಜ್ವರ ಕಾಣಿಸಿಕೊಂಡಿತ್ತು. ನನಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಆದರೂ ನಾನು ಇದನ್ನು ನಿರ್ಲಕ್ಷಿಸುವಂತಿಲ್ಲ. ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದ ನಂತರ, ತುಂಬಾ ತೀಕ್ಷ್ಣವಲ್ಲದ ಕೋವಿಡ್ ಸೋಂಕು ಇದ್ದಿರುವುದು ವರದಿಯಲ್ಲಿ ಪತ್ತೆಯಾಗಿತ್ತು. ನೀವು ಮನೆಗೆ ಹೋಗಿ, ಸ್ವಯಂ ಕ್ವಾರಂಟೈನ್ ಗೆ ಒಳಗಾಗಿ ಔಷಧ ಸೇವಿಸಿ ಎಂದು ವೈದ್ಯರು ಹೇಳಿರುವುದಾಗಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ಆದರೆ ಬಾಲಸುಬ್ರಹ್ಮಣ್ಯಂ ಅವರು ಮನೆಯಲ್ಲಿ ಕ್ವಾರಂಟೈನ್ ಆಗಲು ಒಪ್ಪಲಿಲ್ಲ. ಮನೆಯಲ್ಲಿ ಇರುವುದು ಕುಟುಂಬದ ಸದಸ್ಯರಿಗೆ ತೊಂದರೆಯಾಗಲಿದೆ. ಹೀಗಾಗಿ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.