ಸಿಂಗಾಪುರ: ಮುಂದಿನ 2 ವರ್ಷಗಳಲ್ಲೇ ಜಗತ್ತು ದೊಡ್ಡ ಆರ್ಥಿಕ ಹಿಂಜರಿತವನ್ನು ಕಾಣಲಿದೆ ಎಂದು ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಭವಿಷ್ಯ ನುಡಿದಿದ್ದಾರೆ.
ಕಾರ್ಮಿಕ ದಿನದ ಹಿನ್ನೆಲೆಯಲ್ಲಿ ಭಾನುವಾರ ದೇಶವನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಅವರು, ಜಾಗತಿಕ ಪರಿಸ್ಥಿತಿಗಳು ಹೇಗೆ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಜತೆಗೆ, ಎಲ್ಲ ರೀತಿಯ ಆರ್ಥಿಕ ಸವಾಲುಗಳನ್ನು ಎದುರಿಸಲು ದೇಶದ ಜನರು ಸಿದ್ಧರಾಗಬೇಕು ಎಂದಿದ್ದಾರೆ.
“ಹಣದುಬ್ಬರವು ಇನ್ನೂ ಕೆಲವು ವರ್ಷ ಅಧಿಕ ಮಟ್ಟದಲ್ಲೇ ಇರಲಿದೆ. ಕೇಂದ್ರ ಬ್ಯಾಂಕುಗಳು ನಿಯಮಗಳನ್ನು ಬಿಗಿಗೊಳಿಸಲಿವೆ.
ಕೊರೊನಾದಿಂದ ಇನ್ನೇನು ಚೇತರಿಸಿಕೊಳ್ಳುತ್ತಿದ್ದೇವೆ ಎನ್ನುವಾಗಲೇ ಎರಗಿದ ರಷ್ಯಾ-ಉಕ್ರೇನ್ ಯುದ್ಧವು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಸಂಕಷ್ಟಕ್ಕೆ ನೂಕಿದೆ. ಅಗತ್ಯ ಸರಕುಗಳ ಕೊರತೆಯೂ ಎದುರಾಗಿದೆ.
ಇದೆಲ್ಲವನ್ನೂ ನೋಡಿದರೆ ಇನ್ನೆರಡು ವರ್ಷಗಳಲ್ಲೇ ಜಗತ್ತು ಆರ್ಥಿಕ ಹಿಂಜರಿತವನ್ನು ಕಾಣಲಿದೆಯೇ ಎಂಬ ಆತಂಕ ಮೂಡಿದೆ. ಹೀಗಾಗಿ, ಎಲ್ಲ ರೀತಿಯ ಸವಾಲುಗಳಿಗೂ ಜನ ಸಿದ್ಧರಾಗಬೇಕು. ಆರ್ಥಿಕತೆಯನ್ನು ಮತ್ತೆ ಜಿಗಿದೇಳುವಂತೆ ಮಾಡಲು ಸರ್ಕಾರದೊಂದಿಗೆ ಉದ್ಯೋಗಿಗಳು, ಕಾರ್ಮಿಕ ಒಕ್ಕೂಟಗಳು ಕೈಜೋಡಿಸಿ ಕೆಲಸ ಮಾಡಬೇಕು’ ಎಂದೂ ಪ್ರಧಾನಿ ಲೀ ಕರೆ ನೀಡಿದ್ದಾರೆ.