ಸಿಂಗಾಪುರ್: ಕೊನೆಗೂ ಒಂದು ಹಂತದ ಫಾರ್ಮ್ ಕಂಡುಕೊಂಡ ಸೈನಾ ನೆಹ್ವಾಲ್, ಚೀನದ ಬಲಿಷ್ಠ ಎದುರಾಳಿ ಹೆ ಬಿಂಗ್ ಜಿಯಾವೊ ಅವರನ್ನು ಮಣಿಸಿ “ಸಿಂಗಾಪುರ್ ಓಪನ್’ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪಿ.ವಿ. ಸಿಂಧು, ಎಚ್.ಎಸ್. ಪ್ರಣಯ್ ಕೂಡ ಎಂಟರ ಘಟ್ಟ ಮುಟ್ಟಿದ್ದಾರೆ.
ಸೈನಾ ನೆಹ್ವಾಲ್ 9ನೇ ರ್‍ಯಾಂಕಿಂಗ್ ಹಾಗೂ 5ನೇ ಶ್ರೇಯಾಂಕದ ಬಿಂಗ್ ಜಿಯಾವೊ ಅವರನ್ನು 3 ಗೇಮ್‌ಗಳ ಹೋರಾಟದ ಬಳಿಕ 21-19, 11-21, 21-17 ಅಂತರದಿಂದ ಪರಾಭವಗೊಳಿಸಿದರು.
3ನೇ ಶ್ರೇಯಾಂಕದ ಆಟಗಾರ್ತಿ ಪಿ.ವಿ. ಸಿಂಧು ವಿಯೆಟ್ನಾಮ್‌ನ ತು ಲಿನ್ ಎನ್‌ಗುಯೆನ್ ಅವರ ಸವಾಲನ್ನು ಮೆಟ್ಟಿನಿಂತು 19-21, 21-19, 21-18 ಅಂತರದ ರೋಚಕ ಗೆಲುವು ದಾಖಲಿಸಿದರು. ಚೀನದ ಮತ್ತೋರ್ವ ಆಟಗಾರ್ತಿ ಹಾನ್ ಯುಇ ಇವರ ಮುಂದಿನ ಎದುರಾಳಿ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್. ಪ್ರಣಯ್ ಚೈನೀಸ್ ತೈಪೆಯ ಚೌ ತೀನ್ ಚೆನ್ ಅವರನ್ನು 14-21, 22-20, 21-18 ಅಂತರದಿಂದ ಮಣಿಸಿ ನಿಟ್ಟುಸಿರೆಳೆದರು. ಇವರ ಮುಂದಿನ ಎದುರಾಳಿ ಜಪಾನ್‌ನ ಕೊಡೈ ನರವೋಕ.
ಕೆ. ಶ್ರೀಕಾಂತ್ ಅವರನ್ನು ಮಣಿಸಿ ಏರುಪೇರಿನ ಫಲಿತಾಂಶವೊಂದನ್ನು ದಾಖಲಿ ಸಿದ್ದ ಮಿಥುನ್ ಮಂಜುನಾಥ್ ಅವರ ಆಟ ದ್ವಿತೀಯ ಸುತ್ತಿನಲ್ಲಿ ಕೊನೆಗೊಂಡಿದೆ. ಅವರನ್ನು ಐರ್ಲೆಂಡ್‌ನ ನಾಟ್ ಎನ್‌ಗುಯೆನ್ 21-10, 18-21, 21-16 ಅಂತರದಿಂದ ಪರಾಭವಗೊಳಿಸಿದರು.
ವನಿತಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಾಲಿಹಾ ಆಟ ಕೂಡ ಮುಗಿದಿದೆ. ಚೀನದ ಹಾನ್ ಯುಎ ವಿರುದ್ಧ 9-21, 13-21 ಅಂತರದಿಂದ ಎಡವಿದರು.
ಡಬಲ್ಸ್‌ನಲ್ಲಿ ಮುನ್ನಡೆ :
ಪುರುಷರ ಡಬಲ್ಸ್ ಜೋಡಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರು ಮಲೇಷ್ಯಾದ ಗೋಹ್ ಝೆ ಫೀ-ನುರ್ ಇಜುದ್ದೀನ್ ವಿರುದ್ಧ 18-21, 24-22, 21-18 ಅಂತರದ ರೋಚಕ ಗೆಲುವು ಸಾಧಿಸಿದರು.