ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಹಗರಣದ ಆರೋಪಿ ನೀರವ್ ಮೋದಿ ಅವರ ಕುಟುಂಬವು ಸಿಂಗಾಪುರದ ಬ್ಯಾಂಕುಗಳಲ್ಲಿ ಇಟ್ಟಿರುವ 44.41 ಕೋಟಿ ರೂ.ಗಳ ಠೇವಣಿಯನ್ನು ಮುಟ್ಟುಗೋಲು ಹಾಕುವಂತೆ ಸಿಂಗಾಪುರ ಹೈಕೋರ್ಟ್ ಆದೇಶಿಸಿದೆ. ಜಾರಿ ನಿರ್ದೇಶನಾಲಯದ ಕೋರಿಕೆಗೆ ಒಪ್ಪಿ ಈ ಆದೇಶ ನೀಡಲಾಗಿದೆ.
ನೀರವ್ ಅವರ ಸಹೋದರಿ ಪೂರ್ವಿ ಮೋದಿ ಮತ್ತು ಪತಿ ಮಾಯಾಂಕ್ ಮೆಹ್ತಾ ಅವರು ಸಿಂಗಾಪುರದ ಬ್ಯಾಂಕ್‌ನಲ್ಲಿ ಈ ಮೊತ್ತವನ್ನು ಠೇವಣಿ ಇಟ್ಟಿದ್ದರು. ನೀರವ್ ಹಾಗೂ ಪೂರ್ವಿಗೆ ಸಂಬಂಧಿಸಿದ 283.16 ಕೋಟಿ ಠೇವಣಿ ಇರುವ ಸ್ವಿಸ್‌ನ ನಾಲ್ಕು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
Advertisement
ಸುಪ್ರೀಂಗೆ ಕೇಂದ್ರ ಅರ್ಜಿ: ಇನ್ನೊಂದೆಡೆ, ಪಿಎನ್‌ಬಿ ಹಗರಣದ ಮತ್ತೂಬ್ಬ ಆರೋಪಿ ಮೆಹುಲ್ ಚೋಕ್ಸಿಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ, ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್‌ನ ಆದೇಶವು ಚೋಕ್ಸಿಯನ್ನು ಗಡಿಪಾರು ಮಾಡುವ ಯತ್ನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೇಂದ್ರ ವಾದಿಸಿದೆ.