ನವದೆಹಲಿ: ಸಿಂಗಾಪುರದಲ್ಲಿ ನೂತನ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಸಿಂಗಾಪುರ್ ಬುಧವಾರ(ಮೇ 19) ನಿರಾಕರಿಸಿದೆ. ಕೇಜ್ರಿವಾಲ್ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸಿಂಗಾಪುರ್ ಆರೋಗ್ಯ ಸಚಿವಾಲಯ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾರವಾರ: ದೇವರ ಮುಂದೆ ಮಗುವಿನ ಶವ ಕೊಂಡೊಯ್ದ ಅಜ್ಜಿ ; ಬದುಕಿಸು ಎಂದು ಪ್ರಾರ್ಥಿಸಿದಳು
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರೋಪಕ್ಕೆ ಸಿಂಗಾಪುರ್ ಖಡಕ್ ಪ್ರತಿಕ್ರಿಯೆ ನೀಡಿರುವ ಹಿನ್ನೆಲೆಯಲ್ಲಿ, ದೆಹಲಿ ಸಿಎಂ ಭಾರತದ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವ ಡಾ.ಎಸ್.ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ, ಸಿಂಗಾಪುರದಲ್ಲಿ ಪತ್ತೆಯಾಗಿರುವ ಕೋವಿಡ್ ಹೊಸ ತಳಿಯ ಸೋಂಕು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದಿಂದ ಆಗಮಿಸುವ ಎಲ್ಲಾ ವಿಮಾನ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.
ಕೇಜ್ರಿವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಂಗಾಪುರ್ ಆರೋಗ್ಯ ಸಚಿವಾಲಯ, ಸಿಂಗಾಪುರ್ ಕೋವಿಡ್ ತಳಿ ಇಲ್ಲ, ಅಲ್ಲದೇ ಕೇಜ್ರಿವಾಲ್ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದೆ. ಇತ್ತೀಚೆಗಿನ ಕೆಲವು ವಾರಗಳಲ್ಲಿ ಪತ್ತೆಯಾಗಿರುವ ಕೋವಿಡ್ 19 ಪ್ರಕರಣಗಳಲ್ಲಿನ ಬಿ.1.617.2 ರೂಪಾಂತರಿ ಸೋಂಕು ಭಾರತದಲ್ಲಿ ಹುಟ್ಟಿಕೊಂಡಿರುವುದಾಗಿದೆ ಎಂದು ಸಿಂಗಾಪುರ್ ಸಚಿವಾಲಯ ತಿರುಗೇಟು ನೀಡಿದೆ.