ಆತ ಕೋಪಿಷ್ಠ. ಕೋಪವೇ ಆತನ ವೀಕ್‌ನೆಸ್ ಎಂದರೆ ತಪ್ಪಲ್ಲ. ಆದರೆ, ಒಳ್ಳೇ ಹುಡುಗ, ತಾಯಿ ಮುದ್ದಿನ ಮಗ. ಊರ ಮಂದಿಗೆ ನೆಚ್ಚಿನ ಸಿಂಗ. ಈ ಸಿಂಗನ ಸಂಗದೇ ಕೆಟ್ಟವರಿಲ್ಲ. ಆದರೆ, ಕೆಟ್ಟವರನ್ನು ಸಿಂಗ ಬಿಡೋದಿಲ್ಲ. ಇಷ್ಟು ಹೇಳಿದ ಮೇಲೆ ನಿಮಗೆ “ಸಿಂಗ’ ಚಿತ್ರದ ಬಗ್ಗೆ ಒಂದು ಚಿತ್ರಣ ಬಂದಿರುತ್ತದೆ. ಹೌದು, “ಸಿಂಗ’ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ.
ಕಷ್ಟದಲ್ಲಿ ಸಾಕಿ ಬೆಳೆಸಿದ ತಾಯಿಯೊಬ್ಬಳ ಆ್ಯಕ್ಷನ್ ಹೀರೋನೇ ಈ ಸಿಂಗ. ಕಲರ್‌ಫುಲ್ ವ್ಯಕ್ತಿತ್ವದ ಸಿಂಗನನ್ನು ಅಷ್ಟೇ ಕಲರ್‌ಫುಲ್ ಆಗಿ ಕಟ್ಟಿಕೊಡಲಾಗಿದೆ. ಹಾಗಾಗಿಯೇ ಮಾಸ್ ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚೇ ಇಷ್ಟವಾಗಬಹುದು. ತಾಯಿ-ಮಗನ ಸೆಂಟಿಮೆಂಟ್ ಕಥೆಗಳು, ಅದಕ್ಕೊಂದು ಆ್ಯಕ್ಷನ್ ಹಿನ್ನೆಲೆಯಿರುವ ಸಿನಿಮಾಗಳು ಈಗಾಗಲೇ ಬಂದಿವೆ.
ಹಾಗಾಗಿ, “ಸಿಂಗ’ದಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಈ ಚಿತ್ರದಲ್ಲಿ ವಿಶೇಷ ಎನ್ನುವುದಕ್ಕಿಂತ ಮಜವಾದ ನಿರೂಪಣೆ ಇದೆ, ಹೆಚ್ಚಿನ ಟ್ವಿಸ್ಟ್ -ಟರ್ನ್ಗಳಿಲ್ಲದೇ ನೇರಾನೇರ ಸಾಗುವ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಲಾಗಿದೆ. ಕಮರ್ಷಿಯಲ್ ಸಿನಿಮಾಗಳಿಗೆ ಕಥೆಯ ಹಂಗಿಲ್ಲ, ಕೇವಲ ಚಿತ್ರಕಥೆ, ದೃಶ್ಯ ವೈಭವಷ್ಟೇ ಮುಖ್ಯವಾಗುತ್ತದೆ ಎಂಬ ಮಾತಿದೆ.
“ಸಿಂಗ’ ಚಿತ್ರ ಕೂಡಾ ಈ ಅಂಶದ ಜೊತೆ ಜೊತೆಗೆ ಸಾಗಿದೆ. ನಿರ್ದೇಶಕರು ಒನ್‌ಲೈನ್ ಕಥೆ ಇಟ್ಟುಕೊಂಡು ಉಳಿದಂತೆ, ಮಾಸ್ ದೃಶ್ಯಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್ ಪ್ರಿಯರ ಮೈನವಿರೇಳಿಸುವಂತ ಭರ್ಜರಿ ಆ್ಯಕ್ಷನ್ ದೃಶ್ಯಗಳು ಚಿತ್ರದಲ್ಲಿವೆ. ಹಾಗಂತ ಕೇವಲ ಹೊಡೆದಾಟ, ಬಡಿದಾಟಕ್ಕೆ ಚಿತ್ರ ಸೀಮಿತವಾಗಿಲ್ಲ.
ಒಂದಷ್ಟು ಕಾಮಿಡಿ, ಲವ್, ಚೆಂದದ ಹಾಡು, ಅವೆಲ್ಲಕ್ಕಿಂತ ಹೆಚ್ಚಾಗಿ ತಾಯಿ ಸೆಂಟಿಮೆಂಟ್ ಮೂಲಕ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಕೂಡಾ ಒಂದು. ನೀವು ಒಂದು ಅಂದುಕೊಂಡರೆ ಅಲ್ಲಿ ಬೇರೊಂದು ನಡೆದಿರುತ್ತದೆ. ನಾಯಕ ಚಿರಂಜೀವಿ ಸರ್ಜಾ ಇಡೀ ತೆರೆಯನ್ನು ಆವರಿಸಿಕೊಂಡಿದ್ದಾರೆ.
ಆ್ಯಕ್ಷನ್ ಹೀರೋ ಆಗಿ, ತಾಯಿಯ ಮುದ್ದಿನ ಮಗನಾಗಿ, ಪ್ರೇಮಿಯಾಗಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಅವರು ತಮ್ಮ ಬೋಲ್ಡ್ ಸ್ಟೈಲ್ ಮೂಲಕ ಇಷ್ಟವಾಗುತ್ತಾರೆ. ತಾಯಿಯಾಗಿ ತಾರಾ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಉಳಿದಂತೆ ರವಿಶಂಕರ್, ಶಿವರಾಜ್ ಕೆ.ಆರ್.ಪೇಟೆ, ಬಿ.ಸುರೇಶ್ ನಟಿಸಿದ್ದಾರೆ. ಚಿತ್ರದ ಮೂರು ಹಾಡು ಗುನುಗುವಂತಿದೆ. ಕಿರಣ್ ಹಂಪಾಪುರ ಛಾಯಾಗ್ರಹಣ ಹಾಡಿನಲ್ಲಿ ಕಂಗೊಳಿಸಿದೆ.
ಚಿತ್ರ: ಸಿಂಗ
ನಿರ್ಮಾಣ: ಉದಯ್ ಮೆಹ್ತಾ
ನಿರ್ದೇಶನ: ವಿಜಯ್ ಕಿರಣ್
ತಾರಾಗಣ: ಚಿರಂಜೀವಿ ಸರ್ಜಾ, ಅದಿತಿ, ತಾರಾ, ರವಿಶಂಕರ್, ಶಿವರಾಜ್ ಕೆ.ಆರ್.ಪೇಟೆ ಮತ್ತಿತರರು.
* ರವಿಪ್ರಕಾಶ್ ರೈ