ಸಿಂಧನೂರು: ಇಲ್ಲಿನ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021-22ನೇ ಸಾಲಿನ 5.37 ಲಕ್ಷ ರೂ. ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು. ವರ್ಷಕ್ಕೆ ವಿವಿಧ ಮೂಲಗಳಿಂದ 26 ಕೋಟಿ 64 ಲಕ್ಷ ರೂ.ಗಳ ಆದಾಯವನ್ನು ನಿರೀಕ್ಷಿಸಿದ್ದರೆ, 26 ಕೋಟಿ 63 ಲಕ್ಷ ರೂ. ಖರ್ಚುಗುವ ಕುರಿತಂತೆ ಮುಂಗಡ ಪತ್ರವನ್ನು ಓದಿ ಹೇಳಲಾಯಿತು.
ಆದಾಯ, ಖರ್ಚು-ವೆಚ್ಚದ ಕುರಿತು ಮಂಡಿಸಿದ ಆಯ-ವ್ಯಯದ ಮೇಲೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಕೆಲವು ವಿಷಯದಲ್ಲಿ ಖರ್ಚಿನ ಪ್ರಮಾಣ ಹೆಚ್ಚಿಸುವಂತೆ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.
ವಾರ್ಷಿಕ ಆದಾಯ ನಿರೀಕ್ಷೆ: ನಗರಸಭೆಗೆ ಮಳಿಗೆ ಬಾಡಿಗೆಯಿಂದ 8 ಲಕ್ಷ 19 ಸಾವಿರ ರೂ. ವಾರ್ಷಿಕ ಬಾಡಿಗೆ, ಕಟ್ಟಡ ನಿರ್ಮಾಣ ಪರವಾನಿಗೆ ನೀಡುವುದರಿಂದ 25 ಲಕ್ಷ ರೂ., ಅಭಿವೃದ್ಧಿ ಶುಲ್ಕದಿಂದ 45 ಲಕ್ಷ ರೂ., ನೀರು ಮತ್ತು ಒಳಚರಂಡಿ ಬಳಕೆದಾರರ ಶುಲ್ಕ 2 ಕೋಟಿ 4 ಲಕ್ಷ ರೂ., ಸುಧಾರಣೆ ಶುಲ್ಕ 10 ಲಕ್ಷ ರೂ., ದೈನಂದಿನ ಮತ್ತು ವಾರದ ಸಂತೆ ಹರಾಜಿನಿಂದ 30 ಲಕ್ಷ ರೂ., ಮಾಂಸದ ಮಾರುಕಟ್ಟೆಗಳ ಬಾಡಿಗೆಯಿಂದ 15 ಲಕ್ಷ ರೂ., ಸಕ್ರಮೀಕರಣದಿಂದ 2 ಲಕ್ಷ ರೂ., ಆಸ್ತಿ ತೆರಿಗೆಯಿಂದ 4 ಕೋಟಿ 28 ಲಕ್ಷ ರೂ., ಎಸ್ ಎಫ್‌ಸಿಯಿಂದ ವೇತನಾನುದಾನ 3 ಕೋಟಿ 90 ಲಕ್ಷ ರೂ., ಅನಿರ್ಬಂಧಿ ತ ಅನುದಾನ 2 ಕೋಟಿ ರೂ., ಎಲೆಕ್ಟ್ರಿಸಿಟಿಗೆ 1.50 ಕೋಟಿ ರೂ., ಕೇಂದ್ರ ಸರಕಾರದ ಅನುದಾನ 8 ಕೋಟಿ 30 ಲಕ್ಷ ರೂ., ನಿಶ್ಚಿತ ಉದ್ದೇಶ, ಬ್ಯಾಂಕ್‌ಗೆ ಜಮೆಯಾಗುವ ಮೊತ್ತಕ್ಕೆ ಬೀಳುವ ಬಡ್ಡಿಯಿಂದಲೂ 20 ಲಕ್ಷ ರೂ. ಆದಾಯ ಬರಲಿದೆ. ಇತರೆ ಅನಿರ್ಬಂಧಿತ ಅನುದಾನ ಸೇರಿದಂತೆ ವಾರ್ಷಿಕ 26 ಕೋಟಿ 64 ಲಕ್ಷ ರೂ. ಆದಾಯವನ್ನು ನಗರಸಭೆ ನಿರೀಕ್ಷಿಸಿದೆ.
ನಗರಸಭೆ ಖರ್ಚಿನ ಲೆಕ್ಕ: ನಗರಸಭೆ ಸಿಬ್ಬಂದಿಯ ವೇತನಗಳ ಖರ್ಚು 3 ಕೋಟಿ 90 ಲಕ್ಷ ರೂ., ದಿನಗೂಲಿಗಳ ಕೂಲಿ ಪಾವತಿಸಲು 1 ಕೋಟಿ 12 ಲಕ್ಷ ರೂ., ಬೀದಿದೀಪ, ಇಂಧನ ಬಿಲ್‌ಗೆ 1 ಕೋಟಿ 50 ಲಕ್ಷ ರೂ., ಎಲೆಕ್ಟ್ರಿಕಲ್ ಮೆಟಿರಿಯಲ್ ದಾಸ್ತಾನಿಗೆ 40 ಲಕ್ಷ ರೂ., ಸಮವಸ್ತ್ರ, ಭದ್ರತಾ ಸಾಮಗ್ರಿ ಖರೀದಿಗೆ 4 ಲಕ್ಷ 50 ಸಾವಿರ ರೂ., ನಗರಸಭೆ ಸದಸ್ಯರಿಗೆ ಭತ್ಯೆ ನೀಡಲು 10 ಲಕ್ಷ ರೂ., ಅನಿರ್ಬಂಧಿತ ಎಸ್‌ಎಫ್‌ಸಿ ಅನುದಾನ 2 ಕೋಟಿ ರೂ., ಕೇಂದ್ರ ಸರಕಾರದಿಂದ 8 ಕೋಟಿ 3 ಲಕ್ಷ ರೂ., ಸ್ಕೇರ್‌ಸಿಟಿ ಅನುದಾನ ಕುಡಿವ ನೀರಿನ ಉದ್ದೇಶಕ್ಕೆ 25 ಲಕ್ಷ ರೂ., ಎಸ್ ಸಿಪಿ, ಟಿಎಸ್‌ಪಿ ನಿ ಯಡಿ ಖರ್ಚು 70 ಲಕ್ಷ ರೂ., ಸ್ವತ್ಛ ಭಾರತ ಮಿಷನ್‌ನಡಿ 10 ಲಕ್ಷ ರೂ., ಗುತ್ತಿಗೆದಾರರಿಗೆ ಪಾವತಿಸಬೇಕಾದ ಮೊತ್ತ 20 ಲಕ್ಷ ರೂ.ಸೇರಿದಂತೆ ಇತರ ಉದ್ದೇಶಗಳಿಗೆ ವಾರ್ಷಿಕವಾಗಿ ನಗರಸಭೆಯಿಂದ 26 ಕೋಟಿ 63 ಲಕ್ಷ ರೂ.ಗಳ ಖರ್ಚನ್ನು ಅಂದಾಜಿಸಲಾಗಿದೆ.
ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಪೌರಾಯುಕ್ತ ಆರ್.ವಿರೂಪಾಕ್ಷಪ್ಪ ಮೂರ್ತಿ ಸೇರಿದಂತೆ ಸದಸ್ಯರು ಹಾಜರಿದ್ದರು. ಚುನಾಯಿತ ಸದಸ್ಯೆಯ ಪರವಾಗಿ ಅವರ ಪತಿ, ಸಂಬಂಧಿಕರಿಗೆ ಈ ಬಜೆಟ್ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು, ಗಮನ ಸೆಳೆಯಿತು.
ಪ್ರಾಕ್ಟಿಕಲ್ ಆಗಿ ಯೋಚಿಸಬೇಕಿದೆ: ಪಾಟೀಲ್ ಫ್ಲೆಕ್ಸ್, ಬ್ಯಾನರ್ ಹಾವಳಿಯನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯ ಕೇಳಿಬಂದಾಗ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಪ್ರಾಕ್ಟಿಕಲ್ ಆಗಿ ಕೆಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಫ್ಲೆಕ್ಸ್‌ಗಳಿಗೆ ಎರಡು ರೀತಿಯ ಶುಲ್ಕ ನಿಗದಿಪಡಿಸಿದ್ದು, ಕಳೆದ
ಒಂದು ತಿಂಗಳಿಂದು ಕಟ್ಟುನಿಟ್ಟಿನಿಂದ ಶುಲ್ಕ ಪಡೆಯಲಾಗುತ್ತಿದೆ ಎಂದರು. ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ಶೇ.70ರಷ್ಟು ಅನಧಿಕೃತ ಫ್ಲೆಕ್ಸ್ ನಿಯಂತ್ರಿಸಲಾಗಿದ್ದು, ಕಣ್ತಪ್ಪಿಸಿ ಯಾರಾದರೂ ಹಾಕಿದರೆ ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಹಾರಕ್ಕಾಗಿ 7 ಲಕ್ಷ ರೂ. ಮೀಸಲು
ಹಾವು, ನಾಯಿ ಕಚ್ಚಿದ ಸಂದರ್ಭದಲ್ಲಿ ಚಕಿತ್ಸೆಗಾಗಿ ಸಹಾಯಧನ ನೀಡಲು ಮುಂಗಡ ಪತ್ರದಲ್ಲಿ 3 ಲಕ್ಷ ರೂ. ಮೀಸಲಿಡಲಾಯಿತು. ಗುಡಿಸಲು ಸುಟ್ಟ ಸಂದರ್ಭದಲ್ಲಿ ನೈಸರ್ಗಿಕ ವಿಕೋಪದಿಂದ ಹಾನಿಯಿಂದ ಚೇತರಿಸಿಕೊಳ್ಳಲು ನೊಂದ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು 4 ಲಕ್ಷ ರೂ.ಗಳನ್ನು ನಿಗದಿಪಡಿಸಲಾಯಿತು. ಕಳೆದ ಬಾರಿಯ ಸಭೆಯಲ್ಲಿ ಒಬ್ಬರಿಗೆ 2,500 ರೂ. ಪರಿಹಾರ ನೀಡಲು ಸಾಧ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮೊತ್ತ ಇಡುವಂತೆ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ವಾರ್ಷಿಕ ಮೀಸಲು ಮೊತ್ತವನ್ನು ಹೆಚ್ಚಿಸಲಾಯಿತು.
ತೆರಿಗೆ ಪಾವತಿಸಿದವರಿಗೆ ರಿವಾರ್ಡ್
ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿದವರಿಗೆ ರಿವಾರ್ಡ್ ನೀಡುವುದಕ್ಕಾಗಿ ಬಜೆಟ್‌ನಲ್ಲಿ 2 ಲಕ್ಷ 50 ಸಾವಿರ ರೂ. ಮೀಸಲಿಡಲಾಗಿದೆ. ನಿಗದಿತ ಅವಧಿಯೊಳಗೆ ತೆರಿಗೆ ಕಟ್ಟಿದವರಿಗೆ ಈ ರಿಯಾಯಿತಿ ಮೊತ್ತ ಲಭಿಸಲಿದೆ.