Advertisement

ಸಿಂಧು, ಶ್ರೀಕಾಂತ್‌ಗೆ ಅಗ್ರ ಶ್ರೇಯಾಂಕ

07:00 AM Apr 04, 2018 | |

ಗೋಲ್ಡ್‌ ಕೋಸ್ಟ್‌: ಒಲಿಂಪಿಕ್‌ ಬೆಳ್ಳಿ ವಿಜೇತೆ ಪಿವಿ ಸಿಂಧು ಮತ್ತು ವಿಶ್ವದ ಎರಡನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್‌ ಅವರಿಗೆ ಗೇಮ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಮತ್ತು ಮೊದಲ ಸುತ್ತಿನಲ್ಲಿ ಬೈ ನೀಡಲಾಗಿದೆ. 

Advertisement

64 ಸ್ಪರ್ಧಿಗಳ ಡ್ರಾದಲ್ಲಿ ಸಿಂಧು ಅವರು ದ್ವಿತೀಯ ಸುತ್ತಿನಲ್ಲಿ ಫಾಲ್ಕ್ಲ್ಯಾಂಡ್‌ ಐಲ್ಯಾಂಡಿನ ಜೋಯಿ ಮೊರಿಸ್‌ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. 22ರ ಹರೆಯದ ಸಿಂಧು ಮುಂದಿನ ಹಂತದಲ್ಲಿ 2014ರ ಗ್ಲಾಸೊ ಗೇಮ್ಸ್‌ ಚಾಂಪಿಯನ್‌ ಮಿಚೆಲೆ ಲಿ ಅವರನ್ನು ಎದುರಿಸುವ ಸಾಧ್ಯತೆಯಿದೆ. ಕೆನಡದ ಮೂರನೇ ಶ್ರೇಯಾಂಕದ ಮಿಚೆಲೆ ನಾಲ್ಕು ವರ್ಷಗಳ ಹಿಂದೆ ಚಿನ್ನ ಗೆಲ್ಲುವ ಹಾದಿ ವೇಳೆ ಸೆಮಿಫೈನಲ್‌ನಲ್ಲಿ ಸಿಂಧು ಅವರನ್ನು ಕೆಡಹಿದ್ದರು. ದ್ವಿತೀಯ ಶ್ರೇಯಾಂಕದ ಸೈನಾ ನೆಹ್ವಾಲ್‌ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಎಲ್ಸಿ ಇ ವಿಲಿಯರ್ ಅವರನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ. 

2017ರಲ್ಲಿ ನಾಲ್ಕು ಸೂಪರ್‌ ಸೀರೀಸ್‌ನ ಪ್ರಶಸ್ತಿ ಗೆದ್ದಿರುವ ಶ್ರೀಕಾಂತ್‌ ಫಿಜಿಯ ಲಿಯಮ್‌ ಫಾಂಗ್‌ ಅವರನ್ನು ಎದು ರಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು 2010ರ ಬೆಳ್ಳಿ ವಿಜೇತೆ ರಾಜೀವ್‌ ಓಸೆಫ್ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಬ್ಯಾಡ್ಮಿಂಟನ್‌ ಸ್ಪರ್ಧೆ ಬುಧವಾರ ಆರಂಭವಾಗಲಿದೆ. ಮೊದಲಿಗೆ ಮಿಕ್ಸೆಡ್‌ ತಂಡ ವಿಭಾಗದ ಸ್ಪರ್ಧೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next