ಸಿಡ್ನಿ: “ಆಸ್ಟ್ರೇಲಿಯನ್ ಓಪನ್ ಸೂಪರ್-500′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸೆಮಿಫೈನಲ್ ಪಂದ್ಯ ವೊಂದು “ಆಲ್ ಇಂಡಿಯನ್’ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಇಲ್ಲಿ ಎಚ್.ಎಸ್. ಪ್ರಣಯ್ ಮತ್ತು ಪ್ರಿಯಾಂಶು ರಾಜಾವತ್ ಎದುರಾಗಲಿದ್ದಾರೆ. ಆದರೆ ಭಾರತದ ಅನುಭವಿ ಆಟಗಾರರಾದ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ಕೂಟದಿಂದ ನಿರ್ಗಮಿಸಿದ್ದಾರೆ.
“ಓಲೀìನ್ಸ್ ಮಾಸ್ಟರ್’ ಚಾಂಪಿಯನ್ ಆಗಿರುವ ಪ್ರಿಯಾಂಶು ರಾಜಾವತ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿದ್ದು ಬೇರೆ ಯಾರನ್ನೂ ಅಲ್ಲ, ಭಾರತದವರೇ ಆದ ಕೆ. ಶ್ರೀಕಾಂತ್ ಅವರನ್ನು! ಅಂತರ 21-13, 21-8. ಪ್ರಿಯಾಂಶು ಸೂಪರ್-500 ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದು ಇದೇ ಮೊದಲು.
ವಿಶ್ವದ ನಂ.9 ಆಟಗಾರ ಎಚ್.ಎಸ್. ಪ್ರಣಯ್ ಭಾರೀ ಹೋರಾಟ ನಡೆಸಿ ನಂ.2 ಖ್ಯಾತಿಯ, ಇಂಡೋನೇಷ್ಯನ್ ಆಟಗಾರ ಆ್ಯಂಟನಿ ಸಿನಿಸುಕ ಗಿಂಟಿಂಗ್ ಅವರಿಗೆ 16-21, 21-17, 21-14ರಿಂದ ಸೋಲುಣಿಸಿದರು. 73 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು. ಇದು ಗಿಂಟಿಂಗ್ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಪ್ರಣಯ್ ಸಾಧಿಸಿದ 3ನೇ ಗೆಲುವು.
ಪ್ರಣಯ್ ಮತ್ತು ರಾಜಾವತ್ ಈವರೆಗೆ ಒಮ್ಮೆಯಷ್ಟೇ ಮುಖಾಮುಖಿ ಆಗಿದ್ದು, ಇದರಲ್ಲಿ ಪ್ರಣಯ್ ಗೆಲುವು ಸಾಧಿಸಿದ್ದಾರೆ. 2022ರ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಪಂದ್ಯಾವಳಿಯಲ್ಲಿ ಈ ಗೆಲುವು ಒಲಿದಿತ್ತು.
ಸಿಂಧು ಮತ್ತೆ ವಿಫಲ
ಸತತ ವೈಫಲ್ಯದಿಂದ 17ನೇ ಸ್ಥಾನಕ್ಕೆ ಕುಸಿದಿರುವ ಪಿ.ವಿ. ಸಿಂಧು ಚೀನ ಮೂಲದ ಅಮೆರಿಕನ್ ಆಟಗಾರ್ತಿ, ನಂ. 12ನೇ ರ್ಯಾಕಿಂಗ್‌ನ ಬೀವೆನ್ ಜಾಂಗ್ ವಿರುದ್ಧ 12 -21, 17-21ರಿಂದ ಮುಗ್ಗರರಿಸಿದರು. ಇದು ಜಾಂಗ್ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಸಿಂಧು ಅನುಭವಿಸಿದ 5ನೇ ಸೋಲು. ಸಿಂಧು ಮೊದಲೆರಡು ಪಂದ್ಯಗಳಲ್ಲಿ ಭಾರತೀಯರೇ ಆದ ಅಶ್ಮಿತಾ ಚಾಲಿಹಾ ಮತ್ತು ಆಕರ್ಷಿ ಕಶ್ಯಪ್ ಅವರನ್ನು ಮಣಿಸಿದ್ದರು.