Advertisement

ಥಾಯ್ಲೆಂಡ್‌ ಎದುರಾಳಿಗೆ ಸೋತ ಸಿಂಧು

10:20 AM Sep 21, 2019 | sudhir |

ಚಾಂಗ್‌ಜೂ (ಚೀನ): ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಅವರ “ಚೀನ ಓಪನ್‌’ ಓಟ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಕೊನೆಗೊಂಡಿದೆ. “ತ್ರೀ ಗೇಮ್‌ ಥ್ರಿಲ್ಲರ್‌’ನಲ್ಲಿ ಅವರನ್ನು ಥಾಯ್ಲೆಂಡಿನ ಪೊರ್ಣಪವೀ ಚೊಚುವೊಂಗ್‌ 12-21, 21-13, 21-19 ಅಂತರದಿಂದ ಮಣಿಸಿದರು.

Advertisement

ಮೊದಲ ಗೇಮ್‌ ಗೆದ್ದ ಸಿಂಧು ಉತ್ತಮ ಆರಂಭವನ್ನೇ ಕಂಡುಕೊಂಡಿದ್ದರು. ಆದರೆ ದ್ವಿತೀಯ ಗೇಮ್‌ನಲ್ಲಿ ವೇಳೆ ಭಾರೀ ಹಿನ್ನಡೆ ಅನುಭವಿಸಿದರು.
ನಿರ್ಣಾಯಕ ಗೇಮ್‌ನಲ್ಲಿ ಭಾರೀ ಪೈಪೋಟಿ ಯೊಡ್ಡಿದರೂ ಪ್ರಯೋಜನವಾಗಲಿಲ್ಲ. 6 – 6 ಸಮಬಲದ ಬಳಿಕ ಸಿಂಧು 11-7ರ ಮುನ್ನಡೆ ಸಾಧಿಸಿ ಗೆಲುವಿನ ಸೂಚನೆ ಮೂಡಿಸಿದ್ದರು. ಆದರೆ ನಿಧಾನವಾಗಿ ಮೇಲೇರುತ್ತ ಬಂದ ಥಾಯ್‌ ಆಟಗಾರ್ತಿ 15-19ರ ಗಡಿಯಲ್ಲಿ ಒಮ್ಮೆಲೇ ಬಿರುಸಿನ ಆಟಕ್ಕಿಳಿದರು. ಸತತ 6 ಅಂಕಗಳನ್ನು ಬಾಚಿಕೊಂಡು ಗೆಲುವು ಸಾಧಿಸಿಯೇ ಬಿಟ್ಟರು. ಇವರಿಬ್ಬರ ಕದನ 58 ನಿಮಿಷಗಳ ತನಕ ಸಾಗಿತು.

ಸಾಯಿ ಪ್ರಣೀತ್‌ ಮುನ್ನಡೆ
ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್‌ ಕ್ವಾರ್ಟರ್‌ ಫೈನಲ್‌ ತಲುಪಿ ಭಾರತದ ಭರವಸೆಯಾಗಿ ಉಳಿದಿದ್ದಾರೆ. ಅವರು ಚೀನದ ಲು ಗುವಾಂಗ್‌ ವಿರುದ್ಧ 21-19, 21-19 ಅಂತರದಿಂದ ಮೇಲುಗೈ ಸಾಧಿಸಿದರು. ಆದರೆ ಪಿ. ಕಶ್ಯಪ್‌ ಇಂಡೋನೇಶ್ಯದ ಆ್ಯಂಟನಿ ಸಿನಿಸುಕ ವಿರುದ್ಧ 3 ಗೇಮ್‌ಗಳ ಹೋರಾಟದ ಬಳಿಕ ಸೋತರು.

ಡಬಲ್ಸ್‌, ಮಿಶ್ರ ಡಬಲ್ಸ್‌ ಸೋಲು
ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲೂ ಭಾರತಕ್ಕೆ ಸೋಲು ಎದುರಾಗಿದೆ. 2ನೇ ಸುತ್ತಿನಲ್ಲಿ 15ನೇ ಶ್ರೇಯಾಂಕದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ರಾಜ್‌ ರಾಂಕಿರೆಡ್ಡಿ ಜಪಾನಿನ ಟಕೆಶಿ ಕಮುರ-ಕೀಗೊ ಸೊನೊಡ ವಿರುದ್ಧ 19-21, 8-21 ಅಂತರದಿಂದ ಪರಾಭವಗೊಂಡರು. 4ನೇ ಶ್ರೇಯಾಂಕದ ಈ ಜಪಾನ್‌ ಜೋಡಿ ವಿರುದ್ಧ ಚಿರಾಗ್‌-ಸಾತ್ವಿಕ್‌ ಈ ವರ್ಷ ಅನುಭವಿಸಿದ 2ನೇ ಸೋಲಾಗಿದೆ. ಮೊದಲ ಸೋಲು ಜುಲೈಯಲ್ಲಿ ನಡೆದ ಜಪಾನ್‌ ಓಪನ್‌ ಟೂರ್ನಿಯಲ್ಲಿ ಎದುರಾಗಿತ್ತು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಜತೆಗೂಡಿ ಕಣಕ್ಕಿಳಿದ ಸಾತ್ವಿಕ್‌ರಾಜ್‌ ಅವರನ್ನು ಜಪಾನಿನ ಯುಕಿ ಕನೆಕೊ-ಮಿಸಾಕಿ ಮತ್ಸುಟೊಮೊ ಸೇರಿಕೊಂಡು 21-11, 16-21, 21-12 ಅಂತರದಿಂದ ಹಿಮ್ಮೆಟ್ಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next