ಗ್ವಾಂಗ್‌ಝೂ: “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್’ ಬ್ಯಾಡ್ಮಿಂಟನ್ ಟೂರ್ನಿಯ ಗೆಲುವಿನ ಓಟವನ್ನು ಮುಂದವರಿಸಿರುವ ಪಿ.ವಿ. ಸಿಂಧು ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಆದರೆ ಈ ಕೂಟದಲ್ಲಿ ಮೊದಲ ಸಲ ಪಾಲ್ಗೊಂಡು ನಿರೀಕ್ಷೆ ಮೂಡಿಸಿದ್ದ ಸಮೀರ್ ವರ್ಮ ಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ.
ಶನಿವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸಿಂಧು ಥಾಯ್ಲೆಂಡ್‌ನ ರಚನೋಕ್ ಇಂತಾನನ್ ಅವರನ್ನು 21-16, 25-23 ನೇರ ಗೇಮ್‌ಗಳಿಂದ ಸೋಲಿಸಿದರು. ಇಂತಾನನ್ ವಿರುದ್ಧ 3-4 ಗೆಲುವಿನ ದಾಖಲೆ ಹೊಂದಿದ್ದ ಸಿಂಧು ಕಳೆದ 2 ವರ್ಷಗಳಿಂದ ಇವರ ವಿರುದ್ಧ ಯಾವುದೇ ಪಂದ್ಯಗಳನ್ನು ಸೋತಿಲ್ಲ. ಸಿಂಧು ಎರಡನೇ ಬಾರಿಗೆ ಈ ಕೂಟದ ಫೈನಲ್ ಪ್ರವೇಶಿಸಿದ್ದು, ಕಳೆದ ಆವೃತ್ತಿಯಲ್ಲಿ ರನ್ನರ್ ಆಪ್ ಆಗಿದ್ದರು.
ಮೊದಲ ಗೇಮ್ ಅನ್ನು ಸುಲಭದಲ್ಲಿ ಜಯಿಸಿದ ಸಿಂಧುಗೆ ದ್ವಿತೀಯ ಗೇಮ್‌ನಲ್ಲಿ ಭಾರೀ ಸವಾಲು ಎದುರಾಯಿತು. ಇಬ್ಬರ ನಡುವೆ ತ್ರೀವ ಪೈಪೋಟಿ ನಡೆಯಿತು. ಇಬ್ಬರೂ ಆಕ್ರಮಣ ಆಟದೊಂದಿಗೆ ಸತತ ಅಂಕಗಳನ್ನು ಗಳಿಸುತ್ತ ಸಾಗಿದರು. ಇದನ್ನು ಯಾರೂ ಗೆಲ್ಲುವ ಸ್ಥಿತಿ ನಿರ್ಮಾಣಗೊಂಡಿತು.
ದ್ವಿತೀಯ ಗೇಮ್‌ನ ಆರಂಭದಿಂದಲೇ ಇವರಿಬ್ಬರ ನಡುವೆ ಸಮಬಲದ ಹಾಗೂ ಜಿದ್ದಾಜಿದ್ದಿ ಹೋರಾಟ ಪ್ರಾರಂಭವಾಗಿತ್ತು. ಒಂದು ಹಂತದಲ್ಲಿ ಹೋರಾಟ 10-10 ಅಂಕಗಳಿಂದ ಸಮನಾಯಿತು. ಸಿಂಧು ಆಟಕ್ಕೆ ದಿಟ್ಟ ರೀತಿಯಲ್ಲಿ ಉತ್ತರಿಸುತ್ತಿದ್ದ ಇಂತಾನನ್, ಸ್ಪರ್ಧೆಯನ್ನು 18-18 ಸಮಬಲಕ್ಕೆ ತಂದರು. ಅಂಕ 21-21ರಿಂದ ಪುನಃ ಸಮಬಲಗೊಂಡಾಗ ಸಿಂಧು ಅಮೋಘ ಸ್ಮ್ಯಾಶ್‌ನೊಂದಿಗೆ ಮ್ಯಾಚ್ ಪಾಯಿಂಟ್ ಸಂಪಾದಿಸಿದರು. ಆಗ ಇಂತಾನನ್ ಮತ್ತೆ ಸವಾಲಾದರು. ಅಂತಿಮವಾಗಿ ಇಂತಾನನ್ ಎಸಗಿದ ತಪ್ಪುಗಳಿಂದ ಲಾಭವೆತ್ತಿದ ಸಿಂಧು ಮತ್ತೂಂದು ಸ್ಮ್ಯಾಶ್ ಮೂಲಕ ವಿಜಯೋತxವ ಆಚರಿಸಿದರು. ಇವರ ಹೋರಾಟ 54 ನಿಮಿಷದ ವರೆಗೆ ನಡೆದಿತ್ತು.
ಸಿಂಧು ಪ್ರಶಸ್ತಿ ಸುತ್ತಿನಲ್ಲಿ ಜಪಾನಿನ ನೊಜೊಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ “ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್’ನಲ್ಲಿ ಒಕುಹಾರ ವಿರುದ್ಧ ಸಿಂಧು ಸೋತಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಂಧು ಪಾಲಿಗೆ ಒದಗಿ ಬಂದಿದೆ. “ಫೈನಲ್ ಕಂಟಕ’ದಿಂದ ಈ ಸಲವಾದರೂ ಸಿಂಧು ಪಾರಾಗಿ ಬರಲಿ ಎಂಬುದು ದೇಶದ ಕ್ರೀಡಾಭಿಮಾನಿಗಳ ಹಾರೈಕೆ.
ಸಮೀರ್ ವರ್ಮ ಆಟ ಅಂತ್ಯ
ಪುರುಷರ ಸಿಂಗಲ್ಸ್ ವಿಭಾಗದ ನಾಕೌಟ್ ಪ್ರವೇಶಿಸಿದ್ದ ಸಮೀರ್ ವರ್ಮ 21-12, 20-22, 17-21 ಗೇಮ್‌ಗಳಿಂದ ಚೀನದ ಶಿ ಯುಕೀ ವಿರುದ್ಧ ಸೋತು ಟೂರ್ನಿಯಿಂದ ಹೊರನಡೆದರು.
ಮೊದಲ ಗೇಮ್‌ನಲ್ಲಿ ಉತ್ತಮ ಆಟವಾಡಿ ಜಯಿಸಿದ ಸಮೀರ್ ವರ್ಮ, ತೀವ್ರ ಪೈಪೋಟಿಯ 2ನೇ ಗೇಮ್ ಅನ್ನು ಅಲ್ಪ ಅಂತರದಿಂದ ಕಳೆದುಕೊಳ್ಳಬೇಕಾಯಿತು. ನಿರ್ಣಾಯಕ ಗೇಮ್‌ನಲ್ಲಿ ಆಟದ ಲಯವನ್ನು ಕಳೆದುಕೊಂಡ ಸಮೀರ್ 17-21ರಿಂದ ಸೋಲುನುಭವಿಸಿದರು.