Advertisement

ಅಡ್ಡಾದಿಡ್ಡಿ ಬೈಕ್‌ ನಿಲುಗಡೆಗಿಲ್ಲ ಬ್ರೇಕ್‌!

12:03 PM Dec 11, 2019 | Naveen |

„ಚಂದ್ರಶೇಖರ ಯರದಿಹಾಳ
ಸಿಂಧನೂರು:
ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಎದುರು ಸವಾರರು ಅಡ್ಡಾದಿಡ್ಡಿ ಬೈಕ್‌ ನಿಲುಗಡೆ ಮಾಡುವುದರಿಂದ ಜನತೆಗೆ ಟ್ರಾಫಿಕ್‌ ಜಾಮ್‌ ಬಿಸಿ ಜತೆಗೆ ಕಚೇರಿ, ಬ್ಯಾಂಕ್‌ ಒಳಗೆ ಹೋಗಲು ಜನರು ಪರದಾಡುವಂತಾಗಿದೆ.

Advertisement

ನಗರದ ಮಿನಿ ವಿಧಾನಸೌಧ, ಸಾರ್ವಜನಿಕ ಆಸ್ಪತ್ರೆ, ನಗರಸಭೆ, ತಾಲೂಕು ಪಂಚಾಯತಿ, ನಗರ ಬಸ್‌ ನಿಲ್ದಾಣ, ಉಪ ನೋಂದಣಿ ಕಾರ್ಯಾಲಯ, ಕ್ಷೇತ್ರ ಶಿಕ್ಷಣ ಇಲಾಖೆ ಕಾರ್ಯಾಲಯ, ಕೃಷಿ ಉತ್ಪನ್ನ ಮಾರುಕಟ್ಟೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ನಗರದಲ್ಲಿನ ಇತರೆ ಸರ್ಕಾರಿ ಕಚೇರಿ, ಬ್ಯಾಂಕ್‌ ಪ್ರಮುಖ ವಾಣಿಜ್ಯ ಸಂಕೀರ್ಣಗಳ ಎದುರು ಸವಾರರು ಅಡ್ಡಾದಿಡ್ಡಿ ಬೈಕ್‌ ನಿಲ್ಲಿಸುತ್ತಿದ್ದಾರೆ.

ಕೆಲವೆಡೆ ಆಟೋ, ಇತರೆ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ. ಕೆಲ ಕಚೇರಿ ಎದುರು ನೂರಾರು ಬೈಕ್‌ ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ವಾಹನ, ಜನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಕೆಲವೊಮ್ಮೆ ಟ್ರಾಫಿಕ್‌ ಜಾಮ್‌ ಆಗಿ ಪರದಾಡುವಂತಾಗಿದೆ.

ನಗರದ ಸರ್ಕಾರಿ ಆಸ್ಪತ್ರೆಯ ಎರಡೂ ಪ್ರವೇಶ ದ್ವಾರದ ಮುಂಭಾಗದಲ್ಲಿಯೆ ಬೈಕ್‌ ಹಾಗೂ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಇದರಿಂದ ಆಸ್ಪತ್ರೆ ಒಳಗೆ ಹೋಗಲು ಆ್ಯಂಬುಲೆನ್ಸ್‌ಗೆ ದಾರಿ ಇಲ್ಲದಂತಾಗುತ್ತದೆ. ಆ್ಯಂಬುಲನ್ಸ್‌ನ್ನು
ರಸ್ತೆಯಲ್ಲೇ ನಿಲ್ಲಿಸಿ ರೋಗಿಯನ್ನು ಒಳಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು, ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರನ್ನು ಸಾಗಿಸುವಾಗ ಸಮಸ್ಯೆ ಆಗುತ್ತಿದೆ. ಪೊಲೀಸರ ಹರಸಾಹಸ: ರಸ್ತೆ ಮತ್ತು ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಬಳಿ ಅಡ್ಡಾದಿಡ್ಡಿ ಬೈಕ್‌ ನಿಲ್ಲಿಸದಂತೆ ಮತ್ತು ಟ್ರಾಫಿಕ್‌ ಜಾಮ್‌ ತಡೆಗೆ ನಗರದಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿದೆ.

ಅಡ್ಡಾದಿಡ್ಡಿ ಬೈಕ್‌ ನಿಲ್ಲಿಸದಂತೆ ಪೊಲೀಸರು ಎಚ್ಚರಿಸಿದರೂ ಬೈಕ್‌ ಸವಾರರು ಕೇಳುತ್ತಿಲ್ಲ ಎನ್ನಲಾಗಿದೆ. ಹಿಂದೆ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿಯವರು ಪಟ್ಟಣದಲ್ಲಿ ವಾಹನದಟ್ಟಣೆ ತಡೆಯುವ ಉದ್ದೇಶದಿಂದ ರಿಂಗ್‌ ರೋಡ್‌ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಇದು ಎಲ್ಲಿಗೆ ಬಂತು ಎಂಬುದು ತಿಳಿಯದಂತಾಗಿದೆ.

Advertisement

ಆಗ್ರಹ: ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಬಳಿ ಬೈಕ್‌ ನಿಲುಗಡೆಗೆ ಆಯಾ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಜಾಗೆ ನಿಗದಿಪಡಿಸಬೇಕು. ಟ್ರಾಫಿಕ್‌ ಸಮಸ್ಯೆ ಪರಿಹರಿಸಲು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next